Asianet Suvarna News Asianet Suvarna News

India vs Pakistan ಫೈನಲ್‌ ನೋಡಲು ಇಷ್ಟವಿಲ್ಲ ಎಂದ ಇಂಗ್ಲೆಂಡ್‌ ನಾಯಕ ಜೋಸ್‌ ಬಟ್ಲರ್‌

T20 World Cup 2022: ಭಾರತ ಮತ್ತು ಪಾಕಿಸ್ತಾನ ಮತ್ತೆ ಈ ವರ್ಷದ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಒಬ್ಬರನ್ನೊಬ್ಬರು ಎದುರಿಸುವ ಅವಕಾಶವಿದೆ. ಆದರೆ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಇಂಗ್ಲೆಂಡ್ ನಾಯಕ ಜೋಸ್‌ ಬಟ್ಲರ್‌ ಹೇಳಿದ್ದಾರೆ. 

Jos Butler says he don't like to see india vs pakistan in t20 world cup finals
Author
First Published Nov 9, 2022, 1:11 PM IST

ನವದೆಹಲಿ: ಇಂದು ನ್ಯೂಜಿಲೆಂಡ್‌ ಮತ್ತು ಪಾಕಿಸ್ತಾನದ ನಡುವೆ ಸೆಮಿಫೈನಲ್‌ ಪಂದ್ಯ ನಡೆಯುತ್ತಿದೆ. ಇದರಲ್ಲಿ ಗೆದ್ದವರು ಟಿ20 ವಿಶ್ವಕಪ್‌ನ ಫೈನಲ್‌ ತಲುಪಲಿದ್ದಾರೆ. ನಾಳೆ ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಭಾರತ ತಂಡ ಎದುರಿಸಲಿದೆ. ಇದರಲ್ಲಿ ಯಾರು ಗೆಲ್ಲುತ್ತಾರೋ ಅವರು ಫೈನಲ್‌ನಲ್ಲಿ ಇಂದು ಗೆಲ್ಲುವ ತಂಡದ ವಿರುದ್ಧ ಸೆಣೆಸಲಿದ್ದಾರೆ. ಪ್ರತಿಷ್ಠಿತ ವಿಶ್ವಕಪ್‌ ಗೆಲ್ಲಲು ನಾಲ್ಕೂ ತಂಡಗಳೂ ಪಣ ತೊಟ್ಟಿದ್ದಾರೆ. ಈ ನಡುವೆ ಇಂಗ್ಲೆಂಡ್‌ ನಾಯಕ ಜೋಸ್‌ ಬಟ್ಲರ್‌ ಮಾತನಾಡಿದ್ದು ಭಾರತ ಮತ್ತು ಪಾಕಿಸ್ತಾನ ಫೈನಲ್‌ ಆಡುವುದನ್ನು ನೋಡಲು ಇಷ್ಟವಿಲ್ಲ ಎಂದಿದ್ದಾರೆ. ಮಾರ್ಕ್‌ವುಡ್‌, ಡೇವಿಡ್‌ ಮಲಾನ್‌ ಅವರ ಇಂಜುರಿ ಮತ್ತು ಸೂರ್ಯಕುಮಾರ್‌ ಯಾದವ್‌ ಅವರ ಫಾರ್ಮ್‌ ಬಗ್ಗೆ ಜೋಸ್‌ ಬಟ್ಲರ್‌ ಮಾತನಾಡಿದ್ದಾರೆ. 

ಭಾರತ ಪಾಕಿಸ್ತಾನ ಪೈನಲ್‌ ಆಡುವುದು ಇಷ್ಟವಿಲ್ಲ ಅದಕ್ಕಾಗಿಯೇ ತಮ್ಮೆಲ್ಲಾ ಪ್ರಯತ್ನವನ್ನೂ ಹಾಕಿ ಭಾರತದ ವಿರುದ್ಧ ಗೆಲ್ಲುತ್ತೇವೆ ಎಂದು ಬಟ್ಲರ್‌ ಹೇಳಿದ್ದಾರೆ. "ನೋಡಿ ನಾವು ನಿಜವಾಗಲೂ ಭಾರತ ಪಾಕಿಸ್ತಾನ ಫೈನಲ್‌ನಲ್ಲಿ ನೋಡಲು ಇಷ್ಟಪಡುವುದಿಲ್ಲ. ಅವರನ್ನು ತಡೆಯಲು ಬೇಕಾದ ಎಲ್ಲಾ ಪ್ರಯತ್ನವನ್ನೂ ನಾವು ಹಾಕುತ್ತೇವೆ," ಎಂದು ಪತ್ರಿಕಾಗೋಷ್ಠಿಯಲ್ಲಿ ಬಟ್ಲರ್‌ ಹೇಳಿದ್ಧಾರೆ. 

"ಭಾರತ ತುಂಬಾ ಬಲಿಷ್ಟ ತಂಡ. ಭಾರತ ತಂಡ ಹಲವು ವರ್ಷಗಳಿಂದ ಚೆನ್ನಾಗಿ ಆಡುತ್ತಾ ಬಂದಿದೆ. ಸ್ವಾಭಾವಿಕವಾಗಿ ಅವರ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಅವರ ಲೈನ್‌ಅಪ್‌ನಲ್ಲಿ ಅದ್ಭುತ ಆಟಗಾರರಿದ್ದಾರೆ," ಎಂದು ಬಟ್ಲರ್‌ ಅಭಿಪ್ರಾಯ ಪಟ್ಟಿದ್ದಾರೆ. 

ಸೂರ್ಯಕುಮಾರ್‌ ಯಾದವ್‌ ಉತ್ತಮ ಫಾರ್ಮ್‌ನಲ್ಲಿದ್ದು ಐದು ಪಂದ್ಯಗಳಲ್ಲಿ ಮೂರು ಅರ್ಧಶತಕ ಬಾರಿಸಿದ್ದಾರೆ. ಜತೆಗೆ ಅವರ ಸ್ಟ್ರೈಕ್‌ ರೇಟ್‌ ಅತ್ಯದ್ಭುತವಾಗಿದೆ. ಸೂರ್ಯಕುಮಾರ್‌ ಯಾದವ್‌ ಅವರ ಫಾರ್ಮ್‌ ಬಗ್ಗೆ ಮಾತನಾಡಿದ ಬಟ್ಲರ್‌, "ಅವರ ಆಟವನ್ನು ನೋಡುವುದು ಕಣ್ಣಿಗೆ ಸೊಬಗು. ಇಡೀ ಪಂದ್ಯಾವಳಿಯ ಆಟಗಾರನಾಗಿ ಅವರು ಹೊರಹೊಮ್ಮಿದ್ದಾರೆ. ತುಂಬಾ ಸ್ವತಂತ್ರರಾಗಿ ಅವರು ಬ್ಯಾಟ್‌ ಬೀಸುತ್ತಾರೆ. ಯಾವುದೇ ಅಳುಕನ್ನೂ ಅವರು ಇಟ್ಟುಕೊಳ್ಳುವುದಿಲ್ಲ. ಅವರ ಬಳಿ ಎಲ್ಲ ರೀತಿಯ ಹೊಡೆತಗಳೂ ಇವೆ. ಅವರನ್ನು ಔಟ್‌ ಮಾಡಲು ನಾವು ಯೋಜನೆ ರೂಪಿಸುತ್ತಿದ್ದೇವೆ. ಅವರ ವಿಕೆಟ್‌ ಬೇಗ ಪಡೆಯುವುದು ನಮ್ಮ ಗುರಿಯಾಗಿದೆ," ಎಂದು ಬಟ್ಲರ್‌ ಹೇಳಿದ್ದಾರೆ.

ಇದನ್ನೂ ಓದಿ: T20 WORLD CUP: ಮೊದಲ ಸೆಮೀಸ್‌ನಲ್ಲಿ ಪಾಕ್ ಎದುರು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ 

ಯುಜುವೇಂದ್ರ ಚಾಹಲ್‌ ಅವರನ್ನು ಭಾರತ ಒಂದು ಪಂದ್ಯದಲ್ಲೂ ಕಣಕ್ಕಿಳಿಸಿಲ್ಲ. ಈ ಬಗ್ಗೆ ಮಾತನಾಡಿದ ಬಟ್ಲರ್‌ ಚಾಹಲ್‌ ಅದ್ಭುತ ಆಟಗಾರ. ಅವರ ಜತೆ ಐಪಿಎಲ್‌ನಲ್ಲಿ ಹಲವು ಪಂದ್ಯಗಳು ಆಡಿದ್ದೇನೆ. ಅವರಿಗೆ ಅವಕಾಶ ಸಿಕ್ಕರೆ ವಿಕೆಟ್‌ ಪಡೆಯಬಲ್ಲ ಬೌಲರ್‌ ಎಂದಿದ್ದಾರೆ. 

ಇಂಗ್ಲೆಂಡ್‌ ತಂಡವನ್ನು ಡೇವಿಡ್‌ ಮಲಾನ್‌ ಮತ್ತು ಮಾರ್ಕ್‌ವುಡ್‌ ಇಂಜುರಿ ಕಾಡುತ್ತಿದೆ. ಇದರ ಬಗ್ಗೆ ಮಾತನಾಡಿದ ಅವರು, "ಅವರು ಹೇಗೆ ಚೇತರಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ಅವರಿಗೆ ಅಗತ್ಯಕ್ಕೆ ಬೇಕಾದಷ್ಟು ವಿಶ್ರಾಂತಿ ನೀಡುತ್ತೇವೆ. ಡೇವಿಡ್‌ ಮಲಾನ್‌ ಕಳೆದ ಪಂದ್ಯದಲ್ಲಿ ಆಟದ ನಡುವೆಯೇ ಆಚೆ ಹೋದರು, ಮಾರ್ಕ್‌ವುಡ್‌ಗೆ ಕೂಡ ಸ್ಟಿಫ್‌ನೆಸ್‌ ಸಮಸ್ಯೆ ಕಾಡುತ್ತಿದೆ. ಅವರಿಬ್ಬರೂ ಬೇಗ ಸಂಪೂರ್ಣ ಚೇತರಿಸಿಕೊಳ್ಳುವ ನಂಬಿಕೆಯಿದೆ," ಎಂದು ಬಟ್ಲರ್‌ ವಿಶ್ವಾಸ ವ್ಯಕ್ತಪಡಿಸಿದರು. 

ಇದನ್ನೂ ಓದಿ: T20 World Cup ಸಿಡ್ನಿಯಲ್ಲಿಂದು ಪಾಕ್ vs ಕಿವೀಸ್ ಹೈವೋಲ್ಟೇಜ್ ಕದನ..!

ನಾಳೆ (ಗುರುವಾರ) ಭಾರತ ಮತ್ತು ಇಂಗ್ಲೆಂಡ್‌ ನಡುವೆ ಪಂದ್ಯ ನಡೆಯಲಿದೆ. ವಿರಾಟ್‌ ಕೊಹ್ಲಿ ಅವರ ನೆಚ್ಚಿನ ಅಡಿಲೇಡ್‌ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು ಎರಡೂ ತಂಡಗಳೂ ಬಲಿಷ್ಟವಾಗಿವೆ. ಇಂಗ್ಲೆಂಡ್‌ ದೈತ್ಯರ ಪಡೆಯನ್ನೇ ಹೊಂದಿದ್ದರೆ ಭಾರತಕ್ಕೆ ವಿರಾಟ್‌ ಕೊಹ್ಲಿ ಮತ್ತು ಸೂರ್ಯಕುಮಾರ್‌ ಯಾದವ್‌ ಆಸರೆಯಾಗಿದ್ದಾರೆ.

Follow Us:
Download App:
  • android
  • ios