ಇಂಗ್ಲೆಂಡ್ ನಾಯಕ ಜೋ ರೂಟ್‌ ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಚೆನ್ನೈ(ಫೆ.05): ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ ತಮ್ಮ ವೃತ್ತಿ ಜೀವನದ 100ನೇ ಟೆಸ್ಟ್‌ ಪಂದ್ಯವನ್ನಾಡುತ್ತಿದ್ದು, ಈ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ತಮ್ಮ ನೂರನೇ ಟೆಸ್ಟ್‌ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ರೂಟ್‌ ಯಶಸ್ವಿಯಾಗಿದ್ದಾರೆ.

ಹೌದು, ಭಾರತ ವಿರುದ್ದವೇ 2012ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಜೋ ರೂಟ್‌, ಇದೀಗ ಭಾರತ ವಿರುದ್ದವೇ ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ಒಟ್ಟು 164 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ 100 ರನ್‌ ಬಾರಿಸುವಲ್ಲಿ ರೂಟ್‌ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ನೂರನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಇಂಗ್ಲೆಂಡ್‌ನ ಮೂರನೇ ಹಾಗೂ ಒಟ್ಟಾರೆ 9ನೇ ಬ್ಯಾಟ್ಸ್‌ಮನ್ ಎನ್ನುವ ಗೌರವಕ್ಕೆ ಜೋ ರೂಟ್‌ ಭಾಜನರಾಗಿದ್ದಾರೆ.

ಚೆನ್ನೈ ಟೆಸ್ಟ್: ಭಾರತದಲ್ಲಿ ಟೆಸ್ಟ್‌ ವಿಕೆಟ್‌ ಖಾತೆ ತೆರೆದ ಬುಮ್ರಾ..!

Scroll to load tweet…

ಅಪರೂಪದ ದಾಖಲೆ ರೂಟ್‌ ಪಾಲು: ಶ್ರೀಲಂಕಾ ವಿರುದ್ದ ಎರಡು ಟೆಸ್ಟ್‌ ಪಂದ್ಯಗಳಲ್ಲಿ 2 ಶತಕ ಬಾರಿಸಿದ್ದ ರೂಟ್‌ ಇದೀಗ ಭಾರತ ವಿರುದ್ದವೂ ಶತಕ ಬಾರಿಸುವ ಮೂಲಕ ಹ್ಯಾಟ್ರಿಕ್ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇದರೊಂದಿಗೆ 98, 99 ಹಾಗೂ 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಎನ್ನುವ ಅಪರೂಪದ ದಾಖಲೆ ರೂಟ್‌ ಪಾಲಾಗಿದೆ.

Scroll to load tweet…

ಚೆನ್ನೆ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ 78 ಓವರ್ ಮುಕ್ತಾಯದ ವೇಳೆಗೆ ಕೇವಲ 2 ವಿಕೆಟ್ ಕಳೆದುಕೊಂಡು 227 ರನ್‌ ಬಾರಿಸಿದ್ದು ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.