ಚೆನ್ನೈ(ಫೆ.05): ಇಂಗ್ಲೆಂಡ್‌ ನಾಯಕ ಜೋ ರೂಟ್‌ ಬಾರಿಸಿದ ಆಕರ್ಷಕ ಶತಕ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ಡೋಮಿನಿಕ್‌ ಸಿಬ್ಲಿ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್‌ ತಂಡವು ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 263 ರನ್‌ ಬಾರಿಸಿದ್ದು ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.

ಹೌದು, ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡು ಇಂಗ್ಲೆಂಡ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ರೋರಿ ಬರ್ನ್ಸ್‌ ಹಾಗೂ ಡೋಮಿನಿಕ್ ಸಿಬ್ಲಿ 63 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮವಾಗಿ ಆಡುತ್ತಿದ್ದ ಬರ್ನ್ಸ್‌ ಅವರನ್ನು ಲಂಚ್‌ ಬ್ರೇಕ್‌ಗೂ ಮುನ್ನ ಪೆವಿಲಿಯನ್ನಿಗಟ್ಟುವಲ್ಲಿ ರವಿಚಂದ್ರನ್ ಅಶ್ವಿನ್‌ ಯಶಸ್ವಿಯಾದರು. ಇದರ ಬೆನ್ನಲ್ಲೇ ಜಸ್ಪ್ರೀತ್ ಬುಮ್ರಾ ಸಹಾ ಡೇನಿಯಲ್ ಲಾರೆನ್ಸ್‌ ಅವರ ವಿಕೆಟ್‌ ಕಬಳಿಸುವ ಮೂಲಕ ಟೀಂ ಇಂಡಿಯಾಗೆ ಮತ್ತೊಂದು ಯಶಸ್ಸು ದಕ್ಕಿಸಿಕೊಟ್ಟರು.

ರೂಟ್‌-ಸಿಬ್ಲಿ ಜುಗಲ್ಬಂದಿ: ಲಂಚ್‌ ಬ್ರೇಕ್‌ ವೇಳೆಗೆ ಸತತ ಎರಡು ವಿಕೆಟ್‌ ಕಳೆದುಕೊಂಡು 67 ರನ್‌ಗಳಿಸಿ ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋ ರೂಟ್‌ ಹಾಗೂ ಸಿಬ್ಲಿ ಜೋಡಿ ಭಾರತೀಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಈ ಜೋಡಿಯನ್ನು ಬೇರ್ಪಡಿಸಲು ವಿರಾಟ್ ಕೊಹ್ಲಿ ತನ್ನ ಬತ್ತಳಿಕೆಯಲ್ಲಿದ್ದ ಎಲ್ಲಾ ಅಸ್ತ್ರಗಳ ಪ್ರಯೋಗ ನಡೆಸಿದರಾದರೂ ಯಾವುದೇ ಯಶಸ್ಸು ದಕ್ಕಲಿಲ್ಲ. ಮೂರನೇ ವಿಕೆಟ್‌ಗೆ ಈ ಜೋಡಿ 200 ರನ್‌ಗಳ ಜತೆಯಾಟವಾಡಿತು.

100ನೇ ಟೆಸ್ಟ್‌ನಲ್ಲಿ ಶತಕ ಚಚ್ಚಿದ ಇಂಗ್ಲೆಂಡ್‌ ನಾಯಕ ಜೋ ರೂಟ್‌ 

ವೃತ್ತಿಜೀವನದ ನೂರನೇ ಟೆಸ್ಟ್‌ ಪಂದ್ಯವನ್ನಾಡುತ್ತಿರುವ ಜೋ ರೂಟ್‌ 128  ರನ್‌ ಬಾರಿಸಿ ಅಜೇಯರಾಗುಳಿದರೆ, ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಡೋಮಿನಿಕ್ ಸಿಬ್ಲಿ ಬರೋಬ್ಬರಿ 285 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ 87 ರನ್‌ ಬಾರಿಸಿ ಮೊದಲ ದಿನದಾಟದ ಕೊನೆಯ ಓವರ್‌ನಲ್ಲಿ ಬುಮ್ರಾ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್‌: 263/3
ಜೋ ರೂಟ್‌: 128
ಜಸ್ಪ್ರೀತ್ ಬುಮ್ರಾ: 40/2
(* ಮೊದಲ ದಿನದಾಟ ಮುಕ್ತಾಯದ ವೇಳೆಗೆ)