Asianet Suvarna News Asianet Suvarna News

Jhulan Goswami Retires: ಲಾರ್ಡ್ಸ್‌ನಲ್ಲಿ ವಿದಾಯದ ಪಂದ್ಯವಾಡಲಿರುವ ಜೂಲನ್‌..!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಜೂಲನ್ ಗೋಸ್ವಾಮಿ ಗುಡ್‌ಬೈ?
ಸೆಪ್ಟೆಂಬರ್‌ನಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಿರುವ ಅನುಭವಿ ವೇಗಿ
ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಜೂಲನ್

Jhulan Goswami To Retire From International Cricket  Set To Play Farewell match at Lords Says report kvn
Author
Bengaluru, First Published Aug 20, 2022, 1:09 PM IST

ನವದೆಹಲಿ(ಆ.20): ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ವೇಗಿ ಜೂಲನ್ ಗೋಸ್ವಾಮಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದು ಖಚಿತವಾಗಿದ್ದು, ಇಂಗ್ಲೆಂಡ್‌ ಎದುರು ಜೂಲನ್ ವೃತ್ತಿಜೀವನ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನಾಡಲಿದ್ದಾರೆ. 2022ರ ಸೆಪ್ಟೆಂಬರ್ 24ರಂದು ಲಾರ್ಡ್ಸ್‌ನಲ್ಲಿ ನಡೆಯಲಿರುವ ಪಂದ್ಯವು ಜೂಲನ್ ಗೋಸ್ವಾಮಿ ಪಾಲಿಗೆ ಕೊನೆಯ ಅಂತರಾಷ್ಟ್ರೀಯ ಪಂದ್ಯ ಎನಿಸಲಿದೆ. 39 ವರ್ಷದ ಜೂಲನ್ ಗೋಸ್ವಾಮಿ ಭಾರತ ಪರ ದಶಕಗಳ ಕಾಲ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು.

ಶುಕ್ರವಾರವಷ್ಟೇ ಬಿಸಿಸಿಐ ಆಯ್ಕೆ ಸಮಿತಿಯು ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಿತ್ತು. ಈ ಸರಣಿಗೆ ಜೂಲನ್ ಗೋಸ್ವಾಮಿ ಅವರಿಗೆ ತಂಡದಲ್ಲಿ ಮಣೆ ಹಾಕಲಾಗಿತ್ತು. ಭಾರತ ಮಹಿಳಾ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದ್ದು, ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವು ಸೆಪ್ಟೆಂಬರ್ 24ರಂದು ಕ್ರಿಕೆಟ್ ಕಾಶಿ ಎನಿಸಿಕೊಂಡಿರುವ ಲಾರ್ಡ್ಸ್‌ ಮೈದಾನದಲ್ಲಿ ಜರುಗಲಿದ್ದು, ಇದು ಜೂಲನ್ ಗೋಸ್ವಾಮಿ ಪಾಲಿಗೆ ವಿದಾಯದ ಪಂದ್ಯವಾಗಿರಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.

ಜೂಲನ್‌ ಗೋಸ್ವಾಮಿ 2002ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಕಳೆದೆರಡು ದಶಕಗಳಲ್ಲಿ ಭಾರತ ಪರ ಜೂಲನ್ ಗೋಸ್ವಾಮಿ 12 ಟೆಸ್ಟ್‌, 201 ಏಕದಿನ ಹಾಗೂ 68 ಟಿ20 ಪಂದ್ಯಗಳನ್ನಾಡಿ ಒಟ್ಟಾರೆ 352 ವಿಕೆಟ್ ಕಬಳಿಸಿದ್ದಾರೆ. ಒಟ್ಟು 6 ಏಕದಿನ ವಿಶ್ವಕಪ್‌ ಪ್ರತಿನಿಧಿಸಿರುವ ಜೂಲನ್ ಗೋಸ್ವಾಮಿ, ಏಕದಿನ ಕ್ರಿಕೆಟ್‌ನಲ್ಲಿ 252 ವಿಕೆಟ್ ಕಬಳಿಸುವ ಮೂಲಕ ಅತಿಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಜೂಲನ್ ಗೋಸ್ವಾಮಿ, ಕಳೆದ ವರ್ಷ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊನೆಯ ಬಾರಿಗೆ ಭಾರತ ಮಹಿಳಾ ತಂಡದ ಪರ ಕಣಕ್ಕಿಳಿದಿದ್ದರು. ಇದಾದ ಬಳಿಕ ಫಿಟ್ನೆಸ್ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದರು. ESPNcricinfo ವರದಿಯ ಪ್ರಕಾರ, ಬಿಸಿಸಿಐ ಮ್ಯಾನೇಜ್‌ಮೆಂಟ್, ಅನುಭವಿ ವೇಗಿ ಜೂಲನ್ ಗೋಸ್ವಾಮಿಯವರ ಜತೆ ಮಾತುಕತೆ ನಡೆಸಿದ್ದು, ಭವಿಷ್ಯದ ತಂಡವನ್ನು ಕಟ್ಟುವ ಉದ್ದೇಶವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದೆ. ಭಾರತ ತಂಡವು ಮುಂಬರುವ ದಿನಗಳಲ್ಲಿ ಮೂರು ಮಾದರಿ ಪ್ರತಿನಿಧಿಸುವಂತಹ ವೇಗದ ಬೌಲರ್‌ಗಳ ಅಗತ್ಯಯ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡವು ಸೆಪ್ಟೆಂಬರ್ ತಿಂಗಳಿನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಸಪ್ಟೆಂಬರ್ 10ರಿಂದ 24ರ ವರೆಗೆ 3 ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಜಯಿಸಿದ್ದ ಭಾರತ ತಂಡವು, ಇದೀಗ ಹೊಸ ಹುರುಪಿನೊಂದಿಗೆ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿದೆ.

Follow Us:
Download App:
  • android
  • ios