ಸೌಥಾಂಪ್ಟನ್(ಜು.13)‌: ಮಧ್ಯಮ ಕ್ರಮಾಂಕದಲ್ಲಿ ಜರ್ಮೈನ್‌ ಬ್ಲಾಕ್‌ವುಡ್‌ ಶತಕವಂಚಿತ(95) ಬ್ಯಾಟಿಂಗ್ ಹಾಗೂ ರೋಸ್ಟನ್‌ ಚೇಸ್‌ (37) ಅದ್ಭುತ ಬ್ಯಾಟಿಂಗ್‌ ನೆರವಿನಿಂದ ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡ 4 ವಿಕೆಟ್‌ಗಳ ಸ್ಮರಣೀಯ ಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

5ನೇ ಹಾಗೂ ಕೊನೆಯ ದಿನವಾದ ಭಾನುವಾರ 8 ವಿಕೆಟ್‌ಗೆ 284 ರನ್‌ಗಳಿಂದ 2ನೇ ಇನ್ನಿಂಗ್ಸ್‌ ಮುಂದುವರಿಸಿದ ಇಂಗ್ಲೆಂಡ್‌ 313 ರನ್‌ ಗಳಿಸಿ ಆಲೌಟ್‌ ಆಯಿತು. 200 ರನ್‌ಗಳ ಗುರಿ ಪಡೆದ ವಿಂಡೀಸ್‌ಗೆ ವೇಗಿ ಜೋಫ್ರಾ ಆರ್ಚರ್‌ ಆರಂಭಿಕ ಆಘಾತ ನೀಡಿದರು. ಬಳಿಕ ಚೇತರಿಸಿಕೊಂಡ ವಿಂಡೀಸ್‌ ಜಯದತ್ತ ಮುನ್ನುಗ್ಗುತು. ಚಹಾ ವಿರಾಮದ ವೇಳೆಗೆ ವಿಂಡೀಸ್‌ 4 ವಿಕೆಟ್‌ಗೆ 143 ರನ್‌ಗಳಿಸಿದ್ದು, 57 ರನ್‌ಗಳಿಸಿತ್ತು, ಈ ವೇಳೆ ರೋಸ್ಟನ್ ಚೇಸ್ ವಿಕೆಟ್ ಒಪ್ಪಿಸಿದರು. ಇದಾದ ಬಳಿಕವೂ ಕೆಚ್ಚದೆಯ ಬ್ಯಾಟಿಂಗ್ ಪ್ರದರ್ಶನ ತೋರೊದ ಬ್ಲಾಕ್‌ವುಡ್ ತಂಡಕ್ಕೆ ಭರ್ಜರಿ ಗೆಲುವು ತಂದಿತ್ತರು.

ಈ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಕಬಳಿಸಿದ ಶೆನಾನ್ ಗೇಬ್ರಿಯಲ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಲಾಕ್‌ಡೌನ್ ಬಳಿಕ ಆರಂಭವಾದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಇದಾಗಿದ್ದು, ಐದು ದಿನಗಳ ಪಂದ್ಯಾಟವನ್ನು ವೀಕ್ಷಕರು ಟಿವಿಯಲ್ಲಿ ಕಣ್ತುಂಬಿಕೊಂಡರು. ಇನ್ನು ಎರಡನೇ ಪಂದ್ಯ ಜುಲೈ 16ರಿಂದ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.

ವಿಂಡೀಸ್ ಗೆಲುವಿಗೆ ಮಾಜಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಸ್ಕೋರ್‌: ಇಂಗ್ಲೆಂಡ್‌ 204 ಹಾಗೂ 313,

ವಿಂಡೀಸ್‌ 318 ಹಾಗೂ 200/6