ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ರೋಹಿತ್ ಶರ್ಮಾ ಅವರನ್ನು ಜಯ್ ಶಾ 'ಕ್ಯಾಪ್ಟನ್' ಎಂದು ಶ್ಲಾಘಿಸಿದ್ದಾರೆ. ಆದರೆ, ಇಷ್ಟೆಲ್ಲಾ ಯಶಸ್ಸಿನ ನಡುವೆಯೂ ಬಿಸಿಸಿಐ ಏಕಾಏಕಿ ಏಕದಿನ ನಾಯಕತ್ವದಿಂದ ರೋಹಿತ್ ಅವರನ್ನು ಕೆಳಗಿಳಿಸಿ, ಶುಭ್‌ಮನ್ ಗಿಲ್‌ಗೆ ಜವಾಬ್ದಾರಿ ನೀಡಿದೆ.

ಮುಂಬೈ: ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ರೋಹಿತ್ ಶರ್ಮಾ ಸದ್ಯ ಭಾರತದ ಏಕದಿನ ತಂಡದಲ್ಲಿ ಮಾತ್ರ ಆಡುತ್ತಿದ್ದಾರೆ. ಆದರೆ ಏಕದಿನ ತಂಡದಲ್ಲಿ ಓಪನರ್ ಆಗಿ ಮಾತ್ರ ಆಡುತ್ತಿರುವ ಮಾಜಿ ನಾಯಕನನ್ನು ಐಸಿಸಿ ಅಧ್ಯಕ್ಷ ಮತ್ತು ಮಾಜಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇತ್ತೀಚೆಗೆ ಕ್ಯಾಪ್ಟನ್ ಎಂದು ಕರೆದಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ರಿಲಯನ್ಸ್ ಫೌಂಡೇಶನ್ ಭಾರತದ ವಿಶ್ವಕಪ್ ವಿಜೇತರನ್ನು ಗೌರವಿಸಲು ಆಯೋಜಿಸಿದ್ದ ಯುನೈಟೆಡ್ ಟ್ರಯಂಫ್ ಕಾರ್ಯಕ್ರಮದಲ್ಲಿ ಜಯ್ ಶಾ ರೋಹಿತ್‌ನನ್ನು ಭಾರತದ ಕ್ಯಾಪ್ಟನ್ ಎಂದು ಕರೆದಿದ್ದರು.

ರೋಹಿತ್ ಶರ್ಮಾರನ್ನು ಕ್ಯಾಪ್ಟನ್ ಎಂದು ಕರೆದ ಜಯ್ ಶಾ

ಮೊದಲು ಜಯ್ ಶಾ ಅವರ ನಾಲಿಗೆ ತಪ್ಪಿರಬಹುದು ಎಂದು ಭಾವಿಸಲಾಗಿತ್ತು, ಆದರೆ ನಂತರ ತಾನು ಯಾಕೆ ರೋಹಿತ್‌ನನ್ನು ಕ್ಯಾಪ್ಟನ್ ಎಂದು ಕರೆಯುತ್ತೇನೆ ಎಂದು ಜಯ್ ಶಾ ವಿವರಿಸಿದರು. 'ನಮ್ಮ ಕ್ಯಾಪ್ಟನ್ ಇಲ್ಲೇ ಕುಳಿತಿದ್ದಾರೆ' ಎಂದು ಜಯ್ ಶಾ ಹೇಳಿದಾಗ ರೋಹಿತ್ ನಕ್ಕರು. 'ನಾನು ಅವರನ್ನು ಕ್ಯಾಪ್ಟನ್ ಎಂದೇ ಕರೆಯುತ್ತೇನೆ, ಏಕೆಂದರೆ ಅವರು ಭಾರತವನ್ನು ಎರಡು ಐಸಿಸಿ ಟ್ರೋಫಿಗಳಿಗೆ ಮುನ್ನಡೆಸಿದ ನಾಯಕ. 2023ರ ಏಕದಿನ ವಿಶ್ವಕಪ್‌ನಲ್ಲಿ 10 ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿದ ನಾವು ಅಭಿಮಾನಿಗಳ ಹೃದಯ ಗೆದ್ದರೂ, ಕಪ್ ಕೈತಪ್ಪಿತು. 2024ರ ಫೆಬ್ರವರಿಯಲ್ಲಿ ರಾಜ್‌ಕೋಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಹೇಳಿದ್ದೆ, ಮುಂದಿನ ಬಾರಿ ನಾವು ಅಭಿಮಾನಿಗಳ ಹೃದಯ ಮತ್ತು ಕಪ್ ಎರಡನ್ನೂ ಗೆಲ್ಲುತ್ತೇವೆ ಎಂದು. ಅದು ಟಿ20 ವಿಶ್ವಕಪ್ ಗೆಲುವಿನ ಮೂಲಕ ಸಾಧ್ಯವಾಯಿತು' ಎಂದು ಜಯ್ ಶಾ ಹೇಳಿದರು.

Scroll to load tweet…

ಇದಾದ ಬಳಿಕ 2025ರ ಆರಂಭದಲ್ಲೇ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಸತತ ಎರಡು ಐಸಿಸಿ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ದಶಕದ ಬಳಿಕ ಭಾರತ ಐಸಿಸಿ ಟ್ರೋಫಿ ಬರ ನೀಗಿಸುವಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಯಶಸ್ವಿಯಾಗಿದ್ದರು.

2021ರಲ್ಲಿ ವಿರಾಟ್ ಕೊಹ್ಲಿಯಿಂದ ಏಕದಿನ ನಾಯಕತ್ವ ವಹಿಸಿಕೊಂಡ ರೋಹಿತ್ ಶರ್ಮಾ, ಭಾರತವನ್ನು 56 ಪಂದ್ಯಗಳಲ್ಲಿ ಮುನ್ನಡೆಸಿದ್ದು, ಅದರಲ್ಲಿ 42 ಪಂದ್ಯಗಳಲ್ಲಿ ಭಾರತ ಗೆದ್ದಿದೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಫೈನಲ್‌ಗೆ ಕೊಂಡೊಯ್ದ ರೋಹಿತ್, 2024ರ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಕಪ್ ತಂದುಕೊಟ್ಟರು. ನಂತರ 2025ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತವನ್ನು ಚಾಂಪಿಯನ್ ಮಾಡಿದರು. 62 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ ರೋಹಿತ್ ನಾಯಕತ್ವದಲ್ಲಿ ಭಾರತ 49 ಪಂದ್ಯಗಳನ್ನು ಗೆದ್ದಿದೆ. ಟಿ20ಯಲ್ಲಿ 79.03% ಗೆಲುವಿನ ಶೇಕಡಾವಾರು ಹೊಂದಿರುವ ರೋಹಿತ್, ಅತಿ ಹೆಚ್ಚು ಯಶಸ್ವಿ ನಾಯಕರಾಗಿದ್ದಾರೆ.

ಹೀಗಿದ್ದೂ ನಾಯಕತ್ವದಿಂದ ಹಿಟ್‌ಮ್ಯಾನ್‌ಗೆ ಗೇಟ್‌ಪಾಸ್:

ಹೌದು, ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ರೋಹಿತ್ ಶರ್ಮಾ ಇದೀಗ 2027ರ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲೂ ಏಕದಿನ ಮಾದರಿಯಲ್ಲಿ ಐಸಿಸಿ ಚಾಂಪಿಯನ್ಸ್ ಗೆಲ್ಲಿಸಿಕೊಟ್ಟಿದ್ದ ನಾಯಕನನ್ನು ಬಿಸಿಸಿಐ ಏಕಾಏಕಿ ನಾಯಕತ್ವದಿಂದ ಕೆಳಗಿಳಿಸಿ, ಏಕದಿನ ಕ್ರಿಕೆಟ್‌ಗೆ ಶುಭ್‌ಮನ್ ಗಿಲ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ರೋಹಿತ್ ಶರ್ಮಾ ಸದ್ಯ ಆರಂಭಿಕನಾಗಿ ಏಕದಿನ ಮಾದರಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.