* ದಶಕದ ಹಿಂದೆಯೇ ಸೂರ್ಯಕುಮಾರ್ ಯಾದವ್ ಪ್ರತಿಭೆ ಹುಡುಕಿದ್ದ ರೋಹಿತ್ ಶರ್ಮಾ* 10 ವರ್ಷಗಳ ಹಿಂದೆ ಸೂರ್ಯಕುಮಾರ್ ಕುರಿತಾಗಿ ರೋಹಿತ್ ಮಾಡಿದ್ದ ಟ್ವೀಟ್ ವೈರಲ್* ಇಂಗ್ಲೆಂಡ್ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಶತಕ ಚಚ್ಚಿದ್ದ ಸೂರ್ಯಕುಮಾರ್
ಬೆಂಗಳೂರು(ಜು.12): ವಾರೆ ವ್ಹಾ, ನಿಜಕ್ಕೂ ಎಂತಹ ಟಾಪ್ ಕ್ಲಾಸ್ ಇನ್ನಿಂಗ್ಸ್. ಬಿಗ್ ಟಾರ್ಗೆಟ್ ಕಣ್ಣ ಮುಂದಿದೆ. ಆದರೂ ಒತ್ತಡವನ್ನ ಲೆಕ್ಕಿಸದೇ ನಿರ್ಭೀತಿ ಆಟ. ಘಟಾನುಘಟಿ ಆಟಗಾರರ ವೈಫಲ್ಯದ ಮಧ್ಯೆ ಸದಾ ಸ್ಮರಿಸುವ ಡೇರಿಂಗ್ ಇನ್ನಿಂಗ್ಸ್. ಪಂದ್ಯ ಸೋತ್ರೂ ಸ್ಪೋಟಕ ಸೆಂಚುರಿ ವೈಭವ. 55 ಎಸೆತಗಳಲ್ಲಿ ಸಿಡಿಲಬ್ಬರದ 117 ರನ್. ಗೆಲುವಿಗಾಗಿ ಕೊನೆಯವರೆಗೆ ಒಂಟಿಸಲಗಂತೆ ಹೋರಾಡಿದ ಪರಿಯಂತೂ ಇನ್ನೂ ಅತ್ಯಾದ್ಭುತ. ನಿಜಕ್ಕೂ ಸೂರ್ಯಕುಮಾರ್ ಯಾದವ್ ಯೂ ಆರ್ ದಿ ರಿಯಲ್ ವಾರಿಯರ್.
ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20ಯಲ್ಲಿ ಭಾರತ ಕ್ರಿಕೆಟ್ ತಂಡವು ವೀರೋಚಿತ ಸೋಲುಂಡ್ರು, ಆ ನೋವನ್ನು ಸೂರ್ಯಕುಮಾರ್ ಯಾದವ್ ಅವರ ಮಾಸ್ ಆಟ ಎಲ್ಲವನ್ನು ಮರೆಸಿಬಿಟ್ಟಿತ್ತು. ಸೋಲಿನಲ್ಲೂ SKYಮ್ಯಾನ್ ಅದೆಷ್ಟೋ ಜನರ ಹೃದಯ ಗೆದ್ದು ಬಿಟ್ರು. ನಾಟಿಂಗ್ಹ್ಯಾಮ್ನಲ್ಲಿ ಸೂರ್ಯ ಶತಕ ಸಿಡಿಸಿ ಪ್ರಖರಿಸ್ತಿದ್ದಂತೆ ಕ್ಯಾಪ್ಟನ್ ರೋಹಿತ್ ಶರ್ಮಾ 10 ವರ್ಷದ ಹಿಂದೆ ಮಾಡಿದ್ದ ಟ್ವೀಟ್ವೊಂದು ಭಾರೀ ವೈರಲ್ ಆಗ್ತಿದೆ.
ಸೂರ್ಯ, ಭವಿಷ್ಯದಲ್ಲಿ ದೊಡ್ಡ ಪ್ಲೇಯರ್ ಆಗ್ತಾನೆ ಎಂದಿದ್ದ ರೋಹಿತ್: ಭಾರತ ತಂಡದ ಅಗ್ರೆಸ್ಸಿವ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬಗ್ಗೆ ರೋಹಿತ್ ಶರ್ಮಾ 11 ವರ್ಷಗಳ ಹಿಂದೆ ಒಂದು ಟ್ವೀಟ್ ಮಾಡಿದ್ರು. ಸದ್ಯ ಆ ಟ್ವೀಟ್ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಟ್ವೀಟ್ ಅನ್ನ ಹಿಟ್ಮ್ಯಾನ್ ಡಿಸೆಂಬರ್ 10, 2011 ರಂದು ಪೋಸ್ಟ್ ಮಾಡಿದ್ರು. ಈಗಷ್ಟೇ ಚೆನ್ನೈನಲ್ಲಿ ಪ್ರಶಸ್ತಿ ಸಮಾರಂಭ ಮುಗಿಯಿತು. ಮುಂಬೈನ ಸೂರ್ಯಕುಮಾರ್ ಯಾದವ್ ಭವಿಷ್ಯದಲ್ಲಿ ದೊಡ್ಡ ಆಟಗಾರ ಆಗುತ್ತಾನೆ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ರು. ಈಗ ಅದು ನಿಜವಾಗಿದೆ.
ಸೂರ್ಯ ಟೀಂ ಇಂಡಿಯಾದ ಮಿಸ್ಟರ್ 360:
ಸೂರ್ಯಕುಮಾರ್ ಯಾದವ್ ಚೊಚ್ಚಲ ಟಿ20 ಸೆಂಚುರಿ ನೋಡುಗರನ್ನು ನಿಜಕ್ಕೂ ಚಕಿತಗೊಳಿಸಿತ್ತು. ಅವರ ಒಂದೊಂದು ಶಾಟ್ ಸೆಲೆಕ್ಷನ್ ಅದ್ಭುತ ಅನ್ನಿಸಿತು. ನಾಟಿಂಗ್ಹ್ಯಾಮ್ನಲ್ಲಿ ಅಷ್ಟ ದಿಕ್ಕಿಗೂ ಚೆಂಡುನ್ನು ಅಟ್ಟಿ ಎದುರಾಳಿ ಪಡೆಯನ್ನು 19ನೇ ಓವರ್ನ ತನಕ ಕಕ್ಕಾಬಿಕ್ಕಿಯಾಗಿಸಿದ್ರು. ನಿಜಕ್ಕೂ SKY ಟೀಂ ಇಂಡಿಯಾಗೆ ಸಿಕ್ಕ ಮಿಸ್ಟರ್ 360 ಡಿಗ್ರಿ ಮ್ಯಾನ್. ಸೂರ್ಯ ಟೀಂ ಇಂಡಿಯಾದ ಖಾಯಂ ಆಟಗಾರ ಎನಿಸಿಕೊಂಡಿದ್ರೂ, ಟಿ20 ವಿಶ್ವಕಪ್ನಲ್ಲಿ ಅವರ ಸ್ಥಾನ ಇನ್ನೂ ಖಚಿತವಾಗಿರ್ಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಇಂಗ್ಲೆಂಡ್ ಸರಣಿಯಿಂದಲೇ ವಿಶ್ವಕಪ್ ಸಿದ್ಧತೆಗೆ ಕಹಳೆ ಊದಿತ್ತು. ಸದ್ಯ ಇದೇ ಟೂರ್ನಲ್ಲಿ ಅಗ್ರೆಸ್ಸಿವ್ ಬ್ಯಾಟರ್ ಸೆಂಚುರಿ ಸಿಡಿಸಿ ಚುಟುಕು ಮಹಾಸಮರ ಆಡುವ ಕೆಪಾಸಿಟಿ ನನ್ನಲ್ಲಿದೆ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.
Rohit Sharma 8 ತಿಂಗಳ ಕ್ಯಾಪ್ಟನ್ಸಿಯಲ್ಲಿ ದಿಗ್ಗಜರ ದಾಖಲೆಗಳು ದಮನ..!
ಸೂರ್ಯಕುಮಾರ್ ಯಾದವ್ ಗುಣಗಾನ ಮಾಡಿದ ರೋಹಿತ್ ಶರ್ಮಾ
ಇಂಗ್ಲೆಂಡ್ ಎದುರಿನ ಮೂರನೇ ಟಿ20 ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಮುಂಬೈ ಮೂಲದ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಕೊಂಡಾಡಿದ್ದಾರೆ. ನಾವು ಅಲ್ಪ ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿದ್ದರೂ ಸಹಾ, ಇದೊಂದು ರೀತಿಯ ಅದ್ಭುತ ಚೇಸ್ ಆಗಿತ್ತು. ನಮ್ಮ ಹೋರಾಟದ ಬಗ್ಗೆ ಹೆಮ್ಮೆಯಿದೆ. ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ನೋಡಲು ಅದ್ಭುತವಾಗಿತ್ತು. ನಾನು ಸಾಕಷ್ಟು ಸಮಯದಿಂದ ಅವರ ಆಟವನ್ನು ನೋಡುತ್ತಾ ಬಂದಿದ್ದೇನೆ. ಅವರು ಈ ಮಾದರಿಯ ಕ್ರಿಕೆಟ್‌ನಲ್ಲಿ ಸೊಗಸಾದ ಆಟವನ್ನು ಆಡುತ್ತಾರೆ. ಅವರು ನಮ್ಮ ತಂಡ ಕೂಡಿಕೊಂಡ ಬಳಿಕ ಹಂತ ಹಂತವಾಗಿ ಬೆಳೆಯುತ್ತಾ ಬಂದಿದ್ದಾರೆ ಎಂದು ರೋಹಿತ್ ಶರ್ಮಾ ಮುಂಬೈನ ಸಹ ಆಟಗಾರರನ ಪ್ರದರ್ಶನವನ್ನು ಕೊಂಡಾಡಿದ್ದಾರೆ.
