ಸರಣಿಯ 3 ಪಂದ್ಯಗಳಲ್ಲಿ ಒಟ್ಟು 80.5 ಓವರ್‌ ಬೌಲ್‌ ಮಾಡಿರುವ ಬುಮ್ರಾ 17 ವಿಕೆಟ್‌ ಪಡೆದಿದ್ದು, ಸರಣಿಯ ಗರಿಷ್ಠ ವಿಕೆಟ್‌ ಸರದಾರ ಎನಿಸಿಕೊಂಡಿದ್ದಾರೆ. ಈಗಾಗಲೇ ಸರಣಿಯಲ್ಲಿ ಟೀಂ ಇಂಡಿಯಾ 2-1ರಿಂದ ಮುನ್ನಡೆಯಲ್ಲಿರುವ ಕಾರಣ, ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚು.

ರಾಜ್‌ಕೋಟ್‌(ಫೆ.20): ರಾಂಚಿಯಲ್ಲಿ ಫೆ.23ರಿಂದ ಆರಂಭವಾಗಲಿರುವ ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ ಪಂದ್ಯಕ್ಕೆ ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾಗೆ ಬಿಸಿಸಿಐ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಟೀಂ ಇಂಡಿಯಾದ ಬೆನ್ನೆಲುಬು ಎನಿಸಿಕೊಂಡಿರುವ ಬುಮ್ರಾ ಸತತ ಕ್ರಿಕೆಟ್‌ನಿಂದ ದಣಿದಿದ್ದು, ಹೀಗಾಗಿ ಅಗತ್ಯ ವಿಶ್ರಾಂತಿ ನೀಡಲು ಮಂಡಳಿ ಚಿಂತಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಸರಣಿಯ 3 ಪಂದ್ಯಗಳಲ್ಲಿ ಒಟ್ಟು 80.5 ಓವರ್‌ ಬೌಲ್‌ ಮಾಡಿರುವ ಬುಮ್ರಾ 17 ವಿಕೆಟ್‌ ಪಡೆದಿದ್ದು, ಸರಣಿಯ ಗರಿಷ್ಠ ವಿಕೆಟ್‌ ಸರದಾರ ಎನಿಸಿಕೊಂಡಿದ್ದಾರೆ. ಈಗಾಗಲೇ ಸರಣಿಯಲ್ಲಿ ಟೀಂ ಇಂಡಿಯಾ 2-1ರಿಂದ ಮುನ್ನಡೆಯಲ್ಲಿರುವ ಕಾರಣ, ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚು. ಈಗಾಗಲೇ ಕಾರ್ಯದೊತ್ತಡ ತಗ್ಗಿಸಲು 2ನೇ ಟೆಸ್ಟ್‌ನಿಂದ ಮೊಹಮದ್‌ ಸಿರಾಜ್‌ಗೆ ವಿರಾಮ ನೀಡಲಾಗಿತ್ತು. ಒಂದು ವೇಳೆ ಬುಮ್ರಾಗೆ 4ನೇ ಪಂದ್ಯದಲ್ಲಿ ವಿಶ್ರಾಂತಿ ನೀಡಿದರೆ ಯುವ ವೇಗಿ ಆಕಾಶ್‌ ದೀಪ್‌ಗೆ ತಂಡದಲ್ಲಿ ಆಡುವ ಅವಕಾಶ ಸಿಗುವ ನಿರೀಕ್ಷೆಯಿದೆ.

ಕೆ.ಎಲ್‌.ರಾಹುಲ್‌ ಫಿಟ್‌: 4ನೇ ಪಂದ್ಯಕ್ಕೆ ಲಭ್ಯ? 

ತೊಡೆಯ ಗಾಯದಿಂದ ಚೇತರಿಸಿಕೊಂಡಿರುವ ಬ್ಯಾಟರ್‌ ಕೆ.ಎಲ್‌.ರಾಹುಲ್‌ ಸಂಪೂರ್ಣ ಫಿಟ್‌ ಆಗಿದ್ದು, 4ನೇ ಪಂದ್ಯದಲ್ಲಿ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ. ರಾಹುಲ್‌ ಶೇ.90ರಷ್ಟು ಗುಣಮುಖರಾಗಿದ್ದು, ಪಂದ್ಯಕ್ಕೆ ಬೇಕಾದ ಫಿಟ್‌ನೆಸ್‌ ಹೊಂದಿದ್ದಾರೆ. ಹೀಗಾಗಿ 4ನೇ ಪಂದ್ಯಕ್ಕೆ ಅವರು ಲಭ್ಯವಿರುವ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ. 

ಆರಂಭಿಕ ಪಂದ್ಯದ ವೇಳೆ ಗಾಯಗೊಂಡಿದ್ದ ಅವರು, ಕಳೆದೆರಡು ಪಂದ್ಯಗಳಿಂದ ತಂಡದಿಂದ ಹೊರಗುಳಿದಿದ್ದರು. ಅವರ ಬದಲು ದೇವದತ್‌ ಪಡಿಕ್ಕಲ್‌ ತಂಡಕ್ಕೆ ಸೇರ್ಪಡೆಗೊಂಡಿದ್ದರೂ, ರಜತ್‌ ಪಾಟೀದಾರ್‌ ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು.

ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳು ಮುಕ್ತಾಯವಾಗಿದ್ದು, ಭಾರತ 2-1ರ ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದ ಸೋಲಿನ ಬಳಿಕ ಎಚ್ಚೆತ್ತುಕೊಂಡಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇದೀಗ ಕಳೆದೆರಡು ಟೆಸ್ಟ್ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಜಯಿಸಿ ಆಂಗ್ಲರಿಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.