ಆಂಡರ್ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಬೃಹತ್ ಮುನ್ನಡೆ ಸಾಧಿಸಿದೆ. ಯಶಸ್ವಿ ಜೈಸ್ವಾಲ್ ಅಜೇಯ ಶತಕ ಮತ್ತು ಆಕಾಶ್ ದೀಪ್ ಅರ್ಧಶತಕದ ನೆರವಿನಿಂದ ಭಾರತ ಮೂರನೇ ದಿನದ ಲಂಚ್ ವೇಳೆಗೆ 166 ರನ್‌ಗಳ ಮುನ್ನಡೆ ಸಾಧಿಸಿದೆ.

ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್‌ ಸರಣಿಯ 5ನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ ತಿರುಗೇಟು ನೀಡವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಬಾರಿಸಿದ ಅಜೇಯ ಶತಕ ಹಾಗೂ ನೈಟ್ ವಾಚ್‌ಮನ್ ಆಕಾಶ್‌ದೀಪ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಬೃಹತ್ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಮೂರನೇ ದಿನದಾಟದ ಲಂಚ್‌ ಬ್ರೇಕ್ ವೇಳೆಗೆ ಭಾರತ 3 ವಿಕೆಟ್ 189 ರನ್ ಗಳಿಸಿದ್ದು ಒಟ್ಟಾರೆ ಭಾರತ 166 ರನ್ ಮುನ್ನಡೆ ಸಾಧಿಸಿದೆ. ಯಶಸ್ವಿ ಜೈಸ್ವಾಲ್ 85 ಹಾಗೂ ಶುಭ್‌ಮನ್ ಗಿಲ್ 11 ರನ್ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಎರಡನೇ ದಿನದಾಟದಂತ್ಯಕ್ಕೆ ಭಾರತ ಎರಡು ವಿಕೆಟ್ ಕಳೆದುಕೊಂಡು 75 ರನ್ ಗಳಿಸಿತ್ತು. ಈ ಮೂಲಕ ಭಾರತ 52 ರನ್‌ಗಳ ಅಮೂಲ್ಯ ಮುನ್ನಡೆ ಸಾಧಿಸಿತ್ತು. ಜೈಸ್ವಾಲ್ 51 ಹಾಗೂ ನೈಟ್‌ ವಾಚ್‌ಮನ್ ಆಕಾಶ್‌ದೀಪ್ 4 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರು. ಇನ್ನು ಮೂರನೇ ದಿನದಾಟದಲ್ಲಿ ಈ ಇಬ್ಬರು ಆಟಗಾರರು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಒಂದು ಕಡೆ ಆಕಾಶ್‌ದೀಪ್ ಸ್ಪೋಟಕ ಬ್ಯಾಟಿಂಗ್ ನಡೆಸಿದರೆ, ಯಶಸ್ವಿ ಜೈಸ್ವಾಲ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು.

Scroll to load tweet…

ನೈಟ್‌ವಾಚ್‌ಮನ್ ಆಗಿ ಕಣಕ್ಕಿಳಿದ ಆಕಾಶ್‌ದೀಪ್ ಆರಂಭದಿಂದಲೇ ಚುರುಕಾಗಿ ರನ್ ಗಳಿಸುವತ್ತ ಗಮನ ಹರಿಸಿದರು. ಕೇವಲ 70 ಎಸೆತಗಳನ್ನು ಎದುರಿಸಿ ಆಕಾಶ್‌ದೀಪ್ ಚೊಚ್ಚಲ ಟೆಸ್ಟ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ 2011ರ ಬಳಿಕ ಭಾರತ ಪರ ನೈಟ್‌ ವಾಚ್‌ಮನ್ ಆಗಿ ಕಣಕ್ಕಿಳಿದು ಅರ್ಧಶತಕ ಸಿಡಿಸಿದ ಮೊದಲ ಬ್ಯಾಟರ್ ಎನ್ನುವ ಹಿರಿಮೆಗೆ ಆಕಾಶ್‌ದೀಪ್ ಪಾತ್ರರಾದರು. ಈ ಮೊದಲು 2011ರಲ್ಲಿ ಇಂಗ್ಲೆಂಡ್ ಎದುರು ಇದೇ ಓವಲ್ ಮೈದಾನಲ್ಲಿ ಅಮಿತ್ ಮಿಶ್ರಾ ನೈಟ್‌ ವಾಚ್‌ಮನ್ ಆಗಿ ಕಣಕ್ಕಿಳಿದು ಅರ್ಧಶತಕ ಸಿಡಿಸಿದ್ದರು.

ಆಕಾಶ್‌ದೀಪ್ ಹಾಗೂ ಯಶಸ್ವಿ ಜೈಸ್ವಾಲ್ ಮೂರನೇ ವಿಕೆಟ್‌ಗೆ 150 ಎಸೆತಗಳನ್ನು ಎದುರಿಸಿ 107 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 175ರ ಗಡಿ ದಾಟಿಸುವಲ್ಲಿ ಯಸಸ್ವಿಯಾದರು. ಅಂತಿಮವಾಗಿ ಆಕಾಶ್‌ದೀಪ್ 94 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ ಆಕರ್ಷಕ 66 ರನ್ ಸಿಡಿಸಿ ಜೇಮಿ ಓವರ್‌ಟನ್‌ಗೆ ವಿಕೆಟ್ ಒಪ್ಪಿಸಿದರು.

ಮತ್ತೊಂದು ತುದಿಯಲ್ಲಿ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುತ್ತಿರುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 106 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 85 ರನ್ ಬಾರಿಸಿದ್ದು, ಶತಕದತ್ತ ದಾಪುಗಾಲಿಡುತ್ತಿದ್ದಾರೆ.