Asianet Suvarna News Asianet Suvarna News

ಟೀಂ ಇಂಡಿಯಾ ಕೀಪರ್‌-ಬ್ಯಾಟರ್‌ ಸ್ಥಾನಕ್ಕೆ ಕೆ ಎಸ್‌ ಭರತ್‌, ಇಶಾನ್ ಕಿಶನ್‌ ನಡುವೆ ಸ್ಪರ್ಧೆ

ಆಸೀಸ್‌ ಎದುರಿನ ಟೆಸ್ಟ್‌ ಸರಣಿಗೆ ಪಂತ್‌ ಅಲಭ್ಯ ಹಿನ್ನೆಲೆ
ವಿಕೆಟ್ ಕೀಪರ್ ಸ್ಥಾನಕ್ಕಾಗಿ ಇಶಾನ್ ಕಿಶನ್-ಕೆ ಎಸ್ ಭರತ್ ನಡುವೆ ಫೈಟ್
ಫೆಬ್ರವರಿ-ಮಾರ್ಚ್‌ ತಿಂಗಳಿನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ

Ishan Kishan KS Bharat In Contention To Replace Wicket Keeper Rishabh Pant In Test Squad For Australia Series Says report kvn
Author
First Published Jan 2, 2023, 10:48 AM IST

ನವದೆಹಲಿ(ಜ.02): ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಭ್‌ ಪಂತ್‌, ಫೆಬ್ರವರಿ-ಮಾರ್ಚ್‌ನಲ್ಲಿ ತವರಿನಲ್ಲಿ ನಡೆಯಲಿರುವ ಆಸ್ಪ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಬಿಸಿಸಿಐನಿಂದ ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಇದೆ. ಪ್ರಮುಖ ಸದಸ್ಯರಾಗಿದ್ದ ಪಂತ್‌ ಅನುಪಸ್ಥಿತಿ ತಂಡವನ್ನು ಕಾಡಲಿದ್ದು, ಅವರ ಬದಲು ಸ್ಥಾನ ಪಡೆಯಲು ಕೆ.ಎಸ್‌.ಭರತ್‌ ಹಾಗೂ ಇಶಾನ್‌ ಕಿಶನ್‌ ನಡುವೆ ಪೈಪೋಟಿ ಏರ್ಪಡಬಹುದು ಎನ್ನಲಾಗಿದೆ.

ವೃದ್ಧಿಮಾನ್‌ ಸಾಹ ತೆರೆ ಮೆರೆಗೆ ಸರಿದ ಬಳಿಕ ಭರತ್‌ ತಂಡದ 2ನೇ ಆಯ್ಕೆ ವಿಕೆಟ್‌ ಕೀಪರ್‌ ಆಗಿ ಸ್ಥಾನ ಪಡೆಯುತ್ತಿದ್ದಾರೆ. ಆಸೀಸ್‌ ವಿರುದ್ಧ ಸರಣಿಗೆ ಅವರನ್ನೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. 84 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಭರತ್‌, 4,533 ರನ್‌ ಕಲೆಹಾಕಿದ್ದಾರೆ. ಆದರೆ ರಿಷಭ್ ಪಂತ್‌ರಂತೆಯೇ ಆಕ್ರಮಣಕಾರಿ ಆಟವಾಡಬಲ್ಲ ಆಟಗಾರನಿಗೆ ಮಣೆ ಹಾಕಲು ಬಿಸಿಸಿಐ ನಿರ್ಧರಿಸಿದರೆ, ಆಗ ಇಶಾನ್‌ ಕಿಶನ್‌ ಹೆಸರು ಆಯ್ಕೆ ಸಮಿತಿ ಸಭೆಯಲ್ಲಿ ಕೇಳಿಬರಬಹುದು. ಇಶಾನ್ ಕಿಶನ್‌ 48 ಪ್ರಥಮ ದರ್ಜೆ ಪಂದ್ಯಗಳಲ್ಲಿ 39ರ ಸರಾಸರಿಯಲ್ಲಿ 2,985 ರನ್‌ ಗಳಿಸಿದ್ದಾರೆ. 6 ಶತಕ, 16 ಅರ್ಧಶತಕ ಬಾರಿಸಿದ್ದಾರೆ. ಇತ್ತೀಚೆಗಷ್ಟೇ ಏಕದಿನದಲ್ಲಿ ಕಿಶನ್‌ ದ್ವಿಶತಕ ಬಾರಿಸಿ ಗಮನ ಸೆಳೆದಿದ್ದರು.

ರಿಷಭ್ ಪಂತ್ ಕಾಪಾಡಿದ ಡ್ರೈವರ್‌ ರಿಯಲ್ ಹೀರೋ ಎಂದು ಬಣ್ಣಿಸಿದ ವಿವಿಎಸ್ ಲಕ್ಷ್ಮಣ್‌..! ಟ್ವೀಟ್ ವೈರಲ್

ರಸ್ತೆ ಅಪಘಾತಕ್ಕೂ ಮೊದಲೇ ರಿಷಭ್ ಪಂತ್‌ ಗಾಯದ ಸಮಸ್ಯೆಯಿಂದಾಗಿ ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದರು. ಅವರು ಪುನಶ್ಚೇತನ ಶಿಬಿರಕ್ಕಾಗಿ ಬೆಂಗಳೂರಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಗೆ ಬರಬೇಕಿತ್ತು. ರಿಷಭ್ ಪಂತ್‌ ಇನ್ನೂ ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದು, ಅವರು ಎನ್‌ಸಿಎಗೆ ಆಗಮಿಸಲೇ ಕೆಲ ತಿಂಗಳುಗಳು ಬೇಕಾಗಬಹುದು ಎನ್ನಲಾಗಿದೆ.

ರಿಷಭ್‌ ಪಂತ್‌ರನ್ನು ಭೇಟಿಯಾದ ಉತ್ತರಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ

ಡೆಹರಾಡೂನ್‌: ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್‌ರನ್ನು ಭಾನುವಾರ ಉತ್ತರಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ವೈದ್ಯರಿಂದ ರಿಷಭ್ ಪಂತ್ ಆರೋಗ್ಯ ವಿಚಾರಿಸಿದ್ದರು. ವೈದ್ಯರಿಂದ ಪಂತ್‌ ಆರೋಗ್ಯದ ಬಗ್ಗೆ ಸಿಎಂ ಸಂಪೂರ್ಣ ಮಾಹಿತಿ ಪಡೆದರು. ರಿಷಭ್‌ರ ತಾಯಿ, ಸಹೋದರರಿಗೆ ಸಿಎಂ ಧೈರ್ಯ ತುಂಬಿದ್ದಲ್ಲದೇ ಅಗತ್ಯವಿರುವ ಎಲ್ಲಾ ನೆರವನ್ನು ಸರ್ಕಾರದ ವತಿಯಿಂದ ನೀಡುವುದಾಗಿ ಭರವಸೆ ನೀಡಿದರು ಎಂದು ತಿಳಿದುಬಂದಿದೆ.

ಭಾರತ ಟೆಸ್ಟ್‌ಗೂ ಮುನ್ನ ಅಭ್ಯಾಸ ಪಂದ್ಯ ಬೇಕಿಲ್ಲ: ಆಸೀಸ್‌ ತಂಡದ ಕೋಚ್‌

ಸಿಡ್ನಿ: ಫೆಬ್ರವರಿ-ಮಾರ್ಚ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಪ್ರೇಲಿಯಾ ತಂಡಕ್ಕೆ 4 ಪಂದ್ಯಗಳ ಟೆಸ್ಟ್‌ ಸರಣಿಗೂ ಮೊದಲು ಅಭ್ಯಾಸ ಪಂದ್ಯ ಆಯೋಜಿಸುವ ಅವಶ್ಯಕತೆ ಇಲ್ಲ ಎಂದು ತಂಡದ ಪ್ರಧಾನ ಕೋಚ್‌ ಆ್ಯಂಡ್ರೂ ಮೆಕ್‌ಡೊನಾಲ್ಡ್‌ ಕ್ರಿಕೆಟ್‌ ಆಸ್ಪ್ರೇಲಿಯಾಗೆ ತಾಕೀತು ಮಾಡಿದ್ದಾರೆ. 

ಫೆಬ್ರವರಿ 9ಕ್ಕೆ ಸರಣಿ ಆರಂಭಗೊಳ್ಳಲಿದ್ದು, ಕೇವಲ ಒಂದು ವಾರ ಮುಂಚಿತವಾಗಿ ಭಾರತ ತಲುಪಿದರೆ ಸಾಕು. ಆಟಗಾರರ ದೈಹಿಕ ಹಾಗೂ ಮಾನಸಿಕ ಫಿಟ್ನೆಸ್‌ ಅಷ್ಟೇ ಮುಖ್ಯ, ಭಾರತೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಹೆಚ್ಚಿನ ಸಮಯವೇನೂ ಬೇಕಾಗದು ಎಂದು ಮೆಕ್‌ಡೊನಾಲ್ಡ್‌ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Follow Us:
Download App:
  • android
  • ios