ಇಂಗ್ಲೆಂಡ್ ವಿರುದ್ಧದ ಸರಣಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ವಿರುದ್ಧ ಟೀಕೆ ವ್ಯಕ್ತವಾಗಿದೆ. ಗವಾಸ್ಕರ್, ಪಾಂಟಿಂಗ್ ಸೇರಿದಂತೆ ಹಲವರು ತಂಡದ ಆಯ್ಕೆ ಮತ್ತು ಆಟಗಾರರ ಬಳಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಹಾಯಕ ಕೋಚ್‌ಗಳ ವಜಾ ಸಾಧ್ಯತೆಯೂ ಇದೆ.
ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಭಾರತದ ಕೋಚ್ ಗೌತಮ್ ಗಂಭೀರ್‌ರ ಕೋಚಿಂಗ್ ವಿಧಾನದ ಬಗ್ಗೆ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ರಿಕಿ ಪಾಂಟಿಂಗ್ ಸೇರಿ ಹಲವರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸೋನಿ ಸ್ಪೋರ್ಟ್ಸ್ ಜೊತೆ ಮಾತನಾಡಿರುವ ಸುನಿಲ್ ಗವಾಸ್ಕರ್, ತಂಡದ ಆಯ್ಕೆಯನ್ನು ನಾಯಕ ಮಾಡಬೇಕೇ ಹೊರತು ಬೇರೆಯವರಲ್ಲ ಎಂದಿದ್ದಾರೆ. ‘ಶುಭ್‌ಮನ್ ಗಿಲ್ ತಂಡವನ್ನು ಆಯ್ಕೆ ಮಾಡಬೇಕು. ಅದರಲ್ಲಿ ಇತರರ ಹಸ್ತಕ್ಷೇಪ ಇರಬಾರದು. ನಮ್ಮ ಕಾಲದಲ್ಲಿ ಕೋಚ್‌ಗಳು ಇರಲಿಲ್ಲ. ಮಾಜಿ ಆಟಾಗಾರರು ಸಲಹೆ ನೀಡುತ್ತಿದ್ದರೇ ಹೊರತು ತಂಡದ ಆಯ್ಕೆ ಮಾಡುತ್ತಿರಲಿಲ್ಲ. ಆಗ ನಾಯಕನ ತೀರ್ಮಾನವೇ ಅಂತಿಮವಾಗಿತ್ತು’ ಎಂದಿದ್ದಾರೆ.
ಇನ್ನು, ಸಾಯಿ ಸುದರ್ಶನ್ ಆಂತರಿಕೆ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ರಿಕಿ ಪಾಂಟಿಂಗ್ ದೂರಿದ್ದು, ಕೋಚ್ ಹಾಗೂ ನಾಯಕ ತಂಡದ ಆಟಗಾರರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಗಂಭೀರ್ ಆಪ್ತ 2 ಸಹಾಯಕ ಕೋಚ್‌ಗಳು ವಜಾ ಸಾಧ್ಯತೆ!
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್‌ರ ಮನವಿಯಂತೆ ಸಹಾಯಕ ಕೋಚ್‌ಗಳಾಗಿ ನೇಮಿಸಲ್ಪಟ್ಟಿದ್ದ ಮಾರ್ನೆ ಮಾರ್ಕೆಲ್(ಬೌಲಿಂಗ್ ಕೋಚ್) ಹಾಗೂ ರ್‍ಯಾನ್ ಟೆನ್ ಡೊಶ್ಕಾಟೆ ಶೀಘ್ರದಲ್ಲೇ ತಮ್ಮ ಹುದ್ದೆಯಿಂದ ವಜಾಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಕಳೆದ ವರ್ಷ ಜುಲೈನಲ್ಲಿ ಗಂಭೀರ್ ಕೋಚ್ ಆಗಿ ನೇಮಕಗೊಂಡಿದ್ದರು. ಅವರ ಜೊತೆ ಐಪಿಎಲ್ ತಂಡಗಳಲ್ಲಿ ಕಾರ್ಯನಿರ್ವಹಿಸಿದ್ದ ಅಭಿಷೇಕ್ ನಾಯರ್, ಮಾರ್ಕೆಲ್ ಹಾಗೂ ಡೊಶ್ಕಾಟೆರನ್ನು ಗಂಭೀರ್‌ರ ಮನವಿಯಂತೆ ಸಹಾಯಕ ಕೋಚ್‌ಗಳಾಗಿ ನೇಮಿಸಲಾಗಿತ್ತು. ಆದರೆ ತವರಿನಲ್ಲೇ ನ್ಯೂಜಿಲೆಂಡ್ ವಿರುದ್ಧ ವೈಟ್‌ವಾಶ್, ಬಳಿಕ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನಿಂದಾಗಿ ಸಹಾಯಕ ಕೋಚ್‌ಗಳ ಬಗ್ಗೆ ಬಿಸಿಸಿಐ ಅಸಮಾಧಾನ ಹೊಂದಿದೆ. ತಂಡದ ಆಯ್ಕೆ, ಆಟಗಾರರ ಕಾರ್ಯದೊತ್ತಡ, ಪಿಚ್‌ಗೆ ತಕ್ಕ ಆಡುವ 11ರ ಬಳಗ ಆಯ್ಕೆ, ತಂಡದ ಸಮತೋಲನ ಕಾಯ್ದುಕೊಳ್ಳುವ ವಿಚಾರದಲ್ಲಿ ಕೋಚ್‌ಗಳ ಕಾರ್ಯವೈಖರಿಗೆ ಬಿಸಿಸಿಐ ಅತೃಪ್ತಿ ಹೊಂದಿದೆ. ಹೀಗಾಗಿ ಶೀಘ್ರದಲ್ಲೇ ಮಾರ್ಕೆಲ್ ಹಾಗೂ ಡೊಶ್ಕಾಟೆ ಗುತ್ತಿಗೆ ರದ್ದುಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಸಹಾಯಕ ಕೋಚ್ ಅಭಿಷೇಕ್ ನಾಯರ್‌ರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು
ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಥಾನಕ್ಕೂ ಕುತ್ತು?
ಟೆಸ್ಟ್‌ನಲ್ಲಿ ಭಾರತ ತಂಡದ ಕಳಪೆ ಪ್ರದರ್ಶನವು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಥಾನಕ್ಕೂ ಕುತ್ತು ತರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ 2023ರ ಜುಲೈನಲ್ಲಿ ಆಯ್ಕೆ ಸಮಿತಿಗೆ ನೇಮಕಗೊಂಡಿದ್ದರು. ಆದರೆ ಕಳೆದೊಂದು ವರ್ಷದಿಂದ ತಂಡದ ಪ್ರದರ್ಶನ ತೀರಾ ಕಳಪೆಯಾಗಿದೆ. ಸಮರ್ಥ ಆಟಗಾರರ ಆಯ್ಕೆಯಲ್ಲಿ ಸಮಿತಿ ಎಡವಿದೆ ಎಂದೇ ವಿಶ್ಲೇಷಿಸಲಾಗುತ್ತಿದ್ದು, ಬಿಸಿಸಿಐ ಕೂಡಾ ಈ ಬಗ್ಗೆ ಅಸಮಾಧಾನ ಹೊಂದಿದೆ ಎನ್ನಲಾಗುತ್ತಿದೆ. ಆಯ್ಕೆ ಸಮಿತಿ ಸದಸ್ಯ ಶಿವಸುಂದರ್ ದಾಸ್ ಕಾರ್ಯವೈಖರಿ ಬಗ್ಗೆಯೂ ಬಿಸಿಸಿಐಗೆ ಆಕ್ಷೇಪವಿದೆ ಎಂದು ವರದಿಯಾಗಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯಲ್ಲಿ ಮೊದಲ 4 ಪಂದ್ಯಗಳು ಮುಕ್ತಾಯವಾಗಿದ್ದು, ಆತಿಥೇಯ ಇಂಗ್ಲೆಂಡ್ ತಂಡವು ಸದ್ಯ 2-1ರ ಮುನ್ನಡೆ ಸಾಧಿಸಿದೆ. ಇದೀಗ ಜುಲೈ 31ರಂದು ಕೊನೆಯ ಟೆಸ್ಟ್ ಪಂದ್ಯ ನಡೆಯಲಿದ್ದು, ಆ ಪಂದ್ಯವನ್ನು ಜಯಿಸುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಲು ಎದುರು ನೋಡುತ್ತಿದೆ. ಹೀಗಾಗಿ ಕೊನೆಯ ಟೆಸ್ಟ್‌ವರೆಗೂ ಈ ಸರಣಿ ಸಾಕಷ್ಟು ರೋಚಕತೆಯನ್ನು ಕಾಯ್ದುಕೊಂಡಿದೆ.
