ಕೈಗಳಿಲ್ಲದ ಪ್ಯಾರಾ ಕ್ರಿಕೆಟಿಗ ಅಮೀರ್‌ಗೆ ನೀರು ಕುಡಿಸಿದ ಇರ್ಫಾನ್ ಪುತ್ರ: ವೀಡಿಯೋ ವೈರಲ್

ಕಾಶ್ಮೀರಿ ಪ್ಯಾರಾ ಕ್ರಿಕೆಟ್ ಟೀಮ್‌ನ ನಾಯಕ ಅಮಿರ್ ಹುಸೈನ್ ಲೊನ್‌ಗೆ ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾನ್‌ ಪುತ್ರ ನೀರು ಕುಡಿಯುವುದಕ್ಕೆ ಸಹಾಯ ಮಾಡುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Irfan Pathan son gives water to para cricketer Amir Hussain Lone who have no hands Video goes viral akb

ಕಾಶ್ಮೀರಿ ಪ್ಯಾರಾ ಕ್ರಿಕೆಟ್ ಟೀಮ್‌ನ ನಾಯಕ ಅಮಿರ್ ಹುಸೈನ್ ಲೊನ್ ಬಗ್ಗೆ ಈಗ ತಿಳಿಯದವರಿಲ್ಲ, ಎರಡು ಕೈಗಳಿಲ್ಲದ ಈ ಹುಡುಗ ಕೈಗಳೇ ಅಗತ್ಯವಾಗಿ ಬೇಕಿರುವ ಕ್ರಿಕೆಟ್ ಲೋಕದಲ್ಲಿ ಮಾಡಿದ ಸಾಧನೆ ಅಮೋಘ. ಇಂತಹ ಕ್ರಿಕೆಟಿಗನಿಗೆ ಮತ್ತೊಬ್ಬ ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾನ್‌ ಪುತ್ರ ನೀರು ಕುಡಿಯುವುದಕ್ಕೆ ಸಹಾಯ ಮಾಡುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು ನಾಗಲ್ಯಾಂಡ್‌ನ ಸಚಿವ ತೇಮ್ಜೆನ್ ಇಮ್ನಾ ಅಲೊಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

ನೀವೇ ನಿಮ್ಮನ್ನು ಸೋಲಿಸುವವರೆಗೆ ಜಗತ್ತು ನಿಮ್ಮನ್ನು ಸೋಲಿಸುವುದಿಲ್ಲ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ 24 ವರ್ಷದ ಈ ಕಾಶ್ಮೀರದ ಕ್ರಿಕೆಟಿಗ ಅಮೀರ್ ಹುಸೈನ್ ಲೋನ್‌ಗೆ ಕೈಗಳಿಲ್ಲ, ಹೀಗಾಗಿ ಮೈದಾನವೊಂದರಲ್ಲಿ ಚೇರ್ ಮೇಲೆ ಕುಳಿತಿರುವ ಆ ಯುವ ಕ್ರಿಕೆಟಿಗನಿಗೆ ಇರ್ಫಾನ್ ಪುತ್ರ ಬಾಟಲ್‌ನಲ್ಲಿದ್ದ ನೀರನ್ನು ಕುಡಿಸುತ್ತಿದ್ದಾರೆ.

ನಿಮ್ಮ ಧೈರ್ಯಕ್ಕೆ ಸೆಲ್ಯೂಟ್‌ ಎಂದ ಗೌತಮ್ ಅದಾನಿ: ಜಮ್ಮು ಕಾಶ್ಮೀರ ವಿಕಲಚೇತನ ಕ್ರಿಕೆಟಿಗನಿಗೆ ಉದ್ಯಮಿ ನೆರವು!

ಥಾಣೆಯ ದಾದೋಜಿ ಕೊಂಡದೇವ ಸ್ಟೇಡಿಂಯನಲ್ಲಿ ಮೇ 6 ರಿಂದ 15ರವರೆಗೆ ನಡೆದ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನ ವೇಳೆ ಸೆರೆ ಹಿಡಿದ ವೀಡಿಯೋ ಇದಾಗಿದೆ. 20 ನಿಮಿಷಗಳ ವೀಡಿಯೋದಲ್ಲಿ ಬಾಲಕ ಅಮಿರ್‌ ಹುಸೈನ್‌ಗೆ ನೀರು ಕುಡಿಸುತ್ತಿದ್ದಾನೆ. ಆತನ ಪಕ್ಕದಲ್ಲೇ ನಟ ಕುನಾಲ್ ಕೇಮು ಕೂಡ ಇದ್ದು, ಬಾಲಕ ಇಮ್ರಾನ್‌ನ ಮಾನವೀಯ ಕೆಲಸಕ್ಕೆ ಅವರು ಬೆನ್ನು ತಟ್ಟಿ ಮೆಚ್ಚುಗೆ ಸೂಚಿಸುತ್ತಾರೆ. 

ಈ ವೀಡಿಯೋವನ್ನು ಇಮ್ರಾನ್ ಪಠಾಣ್ ಕೂಡ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು,  ಕರುಣೆ ಎಳವೆಯಲ್ಲೇ ಶುರುವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.  ಈ ವೀಡಿಯೋವನ್ನು 8 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇನ್ನು ವಿಶೇಷ ಚೇತನ ಕ್ರಿಕೆಟಿಗನಾಗಿರುವ ಅಮೀರ್ ಹುಸೈನ್ ಲೊನ್ ಅವರು ಕಾಶ್ಮೀರದ ಬಜ್ಬೆಹ್ರಾ ಗ್ರಾಮದವರಾಗಿದ್ದು, ಈ ಹಿಂದೆ ಈ ಯುವ ಕ್ರಿಕೆಟಿಗನನ್ನು ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಕೂಡ ಭೇಟಿ ಮಾಡಿದ್ದರು.

ಕಾಲಿನಲ್ಲೇ ಬೌಲಿಂಗ್ ಹೆಗಲನ್ನು ಬಳಸಿ ಬ್ಯಾಟಿಂಗ್: ಕೈಗಳೇ ಇಲ್ಲದ ಈ ಹುಡುಗ ಕಾಶ್ಮೀರಿ ಕ್ರಿಕೆಟ್ ಟೀಮ್‌ನ ನಾಯಕ

24 ವರ್ಷದ ಅಮೀರ್ ಹುಸೈನ್ ಲೋನ್ ಅವರು 2013ರಿಂದಲೂ ಜಮ್ಮು ಕಾಶ್ಮೀರ ಕ್ರಿಕೆಟ್ ತಂಡಕ್ಕೆ ಆಡುತ್ತಿದ್ದಾರೆ. ಹುಟ್ಟುವಾಗ ಎಲ್ಲರಂತೆ ಸಹಜವಾಗಿ ಎರಡು ಕೈಗಳ ಸಮೇತವೇ ಹುಟ್ಟಿದ ಅಮೀರ್ ಕೈಗಳು ಇಲ್ಲವಾದುದು ಒಂದು ದುರಂತದಲ್ಲಿ.  ತಾವು 8 ವರ್ಷದವರಿದ್ದಾಗ ತನ್ನ ತಂದೆಯ ಮಿಲ್ಲೊಂದರಲ್ಲಿ ಇದ್ದ ಯಂತ್ರವೊಂದಕ್ಕೆ ಸಿಲುಕಿ ಅಮೀರ್ ತಮ್ಮ ಎರಡು ಕೈಗಳನ್ನು ಕಳೆದುಕೊಂಡಿದ್ದರು. ಆದರೆ ಈ ಆಘಾತದಿಂದ ನಿಧಾನವಾಗಿ ಚೇತರಿಸಿಕೊಂಡ ಇವರು ಎಲ್ಲವನ್ನು ಕಾಲುಗಳಿಂದ ಮಾಡಲು ಅಭ್ಯಾಸ ಮಾಡಿಕೊಂಡರು. ಎಲ್ಲೂ ಗೆಲ್ಲುವ ಛಲ ಬಿಡದ ಆಮೀರ್ ಈಗ ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಕೈಗಳೇ ಇಲ್ಲದ ಆಮೀರ್ ಮಾಡಿದ ಈ ಸಾಧನೆ ಯಾವುದಕ್ಕೂ ಕಡಿಮೆ ಏನಲ್ಲ.

 

 

Latest Videos
Follow Us:
Download App:
  • android
  • ios