ಇಂದಿನಿಂದ ಇರಾನಿ ಕಪ್ ಪಂದ್ಯ ಆರಂಭಗ್ವಾಲಿಯರ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಶೇಷ ಭಾರತಕ್ಕೆ ಮಧ್ಯಪ್ರದೇಶ ಸವಾಲುಶೇಷ ಭಾರತ ತಂಡವನ್ನು ಮುನ್ನಡೆಸಲಿರುವ ಮಯಾಂಕ್ ಅಗರ್‌ವಾಲ್
ಗ್ವಾಲಿಯರ್(ಮಾ.01): 2022-23ರ ಇರಾನಿ ಕಪ್ ಕ್ರಿಕೆಟ್ ಟೂರ್ನಿ ಬುಧವಾರ ಆರಂಭವಾಗಲಿದ್ದು, ಶೇಷ ಭಾರತ ತಂಡ 2021-22ರ ಋುತುವಿನ ರಣಜಿ ಟ್ರೋಪಿ ಚಾಂಪಿಯನ್ ಮಧ್ಯಪ್ರದೇಶ ವಿರುದ್ಧ ಸೆಣಸಾಡಲಿದೆ. ಕೋವಿಡ್‌ನಿಂದ ಮುಂದೂಡಿಕೆಯಾಗಿದ್ದ 2021-22ರ ಋುತುವಿನ ಪಂದ್ಯ ಇದಾಗಿದ್ದು, ಶೇಷ ಭಾರತ ತಂಡಕ್ಕೆ ಕರ್ನಾಟಕದ ಮಯಾಂಕ್ ಅಗರ್‌ವಾಲ್ ನಾಯಕತ್ವ ವಹಿಸಲಿದ್ದಾರೆ.
ಮತ್ತೊಮ್ಮೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಲು ಎದುರು ನೋಡುತ್ತಿರುವ ಮಯಾಂಕ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ನಿರೀಕ್ಷೆಯಲ್ಲಿದ್ದಾರೆ. ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ಹಾರ್ವಿಕ್ ದೇಸಾಯಿ, ಚೇತನ್ ಸಕಾರಿಯಾ, ಯಶ್ ಧುಳ್ ಸೇರಿದಂತೆ ಪ್ರಮುಖರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಧ್ಯಪ್ರದೇಶ ತಂಡವನ್ನು ಹಿಮಾಂಶು ಮಂತ್ರಿ ಮುನ್ನಡೆಸಲಿದ್ದು, ರಜತ್ ಪಾಟೀದಾರ್, ಆದಿತ್ಯ ಶ್ರಿವಾಸ್ತವ ಅನುಪಸ್ಥಿತಿ ತಂಡವನ್ನು ಕಾಡಬಹುದು. ಆದರೆ ವೆಂಕಟೇಶ್ ಅಯ್ಯರ್, ಆವೇಶ್ ಖಾನ್, ಕುಮಾರ್ ಕಾರ್ತಿಕೇಯ, ಯಶ್ ದುಬೆ ತಂಡದಲ್ಲಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯವಾದ ರಣಜಿ ಟ್ರೋಫಿ ಟೂರ್ನಿಯಲ್ಲಿ ಮಯಾಂಕ್ ಅಗರ್‌ವಾಲ್ 13 ಇನಿಂಗ್ಸ್‌ಗಳನ್ನಾಡಿ 990 ರನ್ ಬಾರಿಸುವ ಮೂಲಕ ರನ್ ಮಳೆ ಹರಿಸಿದ್ದರು. ಮಯಾಂಕ್ ಅಗರ್‌ವಾಲ್ ನೇತೃತ್ವದ ಕರ್ನಾಟಕ ತಂಡವು ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತಾದರೂ, ಸೌರಾಷ್ಟ್ರ ಎದುರು ಮುಖಭಂಗ ಅನುಭವಿಸುವ ಮೂಲಕ ಫೈನಲ್‌ಗೇರುವ ಅವಕಾಶ ಕೈಚೆಲ್ಲಿತ್ತು. ಮಯಾಂಕ್ ಅಗರ್‌ವಾಲ್ 2022ರ ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ದ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಕಾಣಿಸಿಕೊಂಡಿದ್ದರು. ರಣಜಿ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವ ಮಯಾಂಕ್ ಅಗರ್‌ವಾಲ್, ಇದೀಗ ಇರಾನಿ ಟ್ರೋಫಿಯಲ್ಲೂ ಮಿಂಚಿ, ಟೀಂ ಇಂಡಿಯಾಗೆ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ.
Irani Cup: ಶೇಷ ಭಾರತ ತಂಡಕ್ಕೆ ಮಯಾಂಕ್ ಅಗರ್‌ವಾಲ್ ನಾಯಕ
ಇರಾನಿ ಟ್ರೋಫಿಯು ಇಂದೋರ್‌ನ ಹೋಲ್ಕರ್ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಧರ್ಮಶಾಲಾದಿಂದ ಇಂದೋರ್‌ಗೆ ಸ್ಥಳಾಂತರವಾದ ಹಿನ್ನೆಲೆಯಲ್ಲಿ ಇರಾನಿ ಕಪ್ ಪಂದ್ಯವನ್ನು ಇಂದೋರ್‌ನಿಂದ ಗ್ವಾಲಿಯರ್‌ಗೆ ಶಿಫ್ಟ್ ಮಾಡಲಾಗಿದೆ.
ಶೇಷ ಭಾರತ ತಂಡ: ಮಯಾಂಕ್ ಅಗರ್‌ವಾಲ್(ನಾಯಕ), ಸುದೀಪ್ ಕುಮಾರ್, ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಹಾರ್ವಿಕ್ ದೇಸಾಯಿ, ಮುಕೇಶ್, ಅತಿತ್, ಚೇತನ್ ಸಕಾರಿಯಾ, ನವದೀಪ್ ಸೈನಿ, ಉಪೇಂದ್ರ ಯಾದವ್, ಮಯಾಂಕ್ ಮರ್ಕಂಡೆ, ಸೌರಭ್, ಆಕಾಶ್, ಇಂದ್ರಜಿತ್, ಪುಲ್ಕಿತ್, ಯಶ್ ಧುಳ್.
ಮಧ್ಯಪ್ರದೇಶ ತಂಡ: ಹಿಮಾಂಶು ಮಂತ್ರಿ(ನಾಯಕ& ವಿಕೆಟ್ ಕೀಪರ್), ರಜತ್ ಪಾಟೀದಾರ್, ಯಶ್ ದುಬೆ, ಹರ್ಷ್ ಗೌಲಿ, ಶುಭಂ ಶರ್ಮಾ, ವೆಂಕಟೇಶ್ ಅಯ್ಯರ್, ಅಕ್ಷಾಂತ್ ರಘುವಂಶಿ, ಅಮನ್ ಸೋಲಂಕಿ, ಕುಮಾರ್ ಕಾರ್ತಿಕೇಯ, ಸಾರಾಂಶ್ ಜೈನ್, ಆವೇಶ್ ಖಾನ್, ಅಂಕಿತ್ ಕುಶ್ವಾ, ಗೌರವ್ ಯಾದವ್, ಅನುಭವ್ ಅಗರ್‌ವಾಲ್, ಮಿಹಿರ್ ಹಿರ್ವಾನಿ.
ಪಂದ್ಯ: ಬೆಳಗ್ಗೆ 9.30ಕ್ಕೆ
