IPL Retention: ಹರ್ಷಲ್, ಹೇಜಲ್‌ವುಡ್ ಹಸರಂಗಗೆ ಗೇಟ್‌ಪಾಸ್..! ಹರಾಜಿಗೆ 40 ಕೋಟಿ ಉಳಿಸಿಕೊಂಡ RCB
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಲಂಕಾದ ಮಿಸ್ತ್ರಿ ಸ್ಪಿನ್ನರ್ ವನಿಂದು ಹಸರಂಗ, ಜೋಶ್ ಹೇಜಲ್‌ವುಡ್, ಹರ್ಷಲ್ ಪಟೇಲ್, ಫಿನ್ ಅಲೆನ್, ಮಿಚೆಲ್ ಬ್ರಾಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್ ಹಾಗೂ ಕೇದಾರ್ ಜಾದವ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ.
ಬೆಂಗಳೂರು(ನ.26): ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇದೀಗ ಸಾಕಷ್ಟು ಅಳೆದುತೂಗಿ 11 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ. 2024ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಳ್ಳಲು ಇಂದು ಫ್ರಾಂಚೈಸಿಗಳಿಗೆ ಕಡೆಯ ದಿನಾಂಕವಾಗಿತ್ತು. ಹೀಗಾಗಿ ಆರ್‌ಸಿಬಿ ಫ್ರಾಂಚೈಸಿಯು ತನ್ನ ಸ್ಟಾರ್ ಕ್ರಿಕೆಟಿಗರಾದ ಜೋಶ್ ಹೇಜಲ್‌ವುಡ್, ಹರ್ಷಲ್ ಪಟೇಲ್, ವನಿಂದು ಹಸರಂಗ ಅವರಂತಹ ವಿಶ್ವದರ್ಜೆಯ ಆಟಗಾರರನ್ನು ಕೈಬಿಟ್ಟಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. 11 ಆಟಗಾರರನ್ನು ರಿಲೀಸ್ ಮಾಡಿದ ಬಳಿಕ ಆರ್‌ಸಿಬಿ ಖಾತೆಯಲ್ಲಿ 40.75 ಕೋಟಿ ರುಪಾಯಿ ಉಳಿದುಕೊಂಡಿದ್ದು, ಹರಾಜಿನಲ್ಲಿ ಅತಿಹೆಚ್ಚಿನ ಮೊತ್ತದೊಂದಿಗೆ ಆರ್‌ಸಿಬಿ ಪಾಲ್ಗೊಳ್ಳಲು ಸಜ್ಜಾಗಿದೆ.
ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಪ್ಲೇ ಆಫ್‌ಗೇರಲು ವಿಫಲವಾಗಿತ್ತು. ಇದರ ಬೆನ್ನಲ್ಲೇ ತಂಡದಲ್ಲಿ ಮೇಜರ್ ಸರ್ಜರಿ ಕೂಡಾ ನಡೆದಿತ್ತು. ಪರಿಣಾಮ ಮೈಕ್ ಹೆಸನ್ ತಲೆದಂಡವಾಗಿತ್ತು. ಇದೀಗ ಇದರ ಮುಂದುವರೆದ ಭಾಗವಾಗಿ ಆರ್‌ಸಿಬಿ ಡಿಸೆಂಬರ್ 19ರಂದು ನಡೆಯಲಿರುವ ಆಟಗಾರರ ಹರಾಜಿಗೂ ಮುನ್ನ 11 ಆಟಗಾರರಿಗೆ ಗೇಟ್ ಪಾಸ್ ನೀಡಿದೆ.
2024ರ ಐಪಿಎಲ್‌ಗೂ ಮುನ್ನ ಆರ್‌ಸಿಬಿಯಿಂದ ಸ್ಟಾರ್ ಪ್ಲೇಯರ್ ಔಟ್ ..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಲಂಕಾದ ಮಿಸ್ತ್ರಿ ಸ್ಪಿನ್ನರ್ ವನಿಂದು ಹಸರಂಗ, ಜೋಶ್ ಹೇಜಲ್‌ವುಡ್, ಹರ್ಷಲ್ ಪಟೇಲ್, ಫಿನ್ ಅಲೆನ್, ಮಿಚೆಲ್ ಬ್ರಾಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್ ಹಾಗೂ ಕೇದಾರ್ ಜಾದವ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ.
ಆರ್‌ಸಿಬಿ ತಂಡವು ಪ್ರಮುಖ ಬೌಲರ್‌ಗಳನ್ನು ಕೈಬಿಟ್ಟರೂ ಕೂಡಾ ಮೇಲ್ನೋಟಕ್ಕೆ ಬ್ಯಾಟಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿಯೇ ಕಂಡುಬರುತ್ತಿದೆ. ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡಕ್ಕೆ ಬಲ ತುಂಬಲಿದ್ದಾರೆ. ಇದರ ಜತೆಗೆ ಇಂಗ್ಲೆಂಡ್ ಬ್ಯಾಟರ್ ವಿಲ್ ಜೇಕ್ಸ್ ಕೂಡಾ ತಂಡಕ್ಕೆ ಆಸರೆಯಾಗಬಲ್ಲರು. ಇನ್ನು ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರನ್ನು ರೀಟೈನ್ ಮಾಡಿಕೊಂಡಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಇನ್ನುಳಿದಂತೆ ಕನ್ನಡಿಗರಾದ ವೈಶಾಕ್ ವಿಜಯ್‌ಕುಮಾರ್ ಹಾಗೂ ಮನೋಜ್ ಭಾಂಡ್ಗೆ ಅವರನ್ನು ರೀಟೈನ್ ಮಾಡಿಕೊಂಡಿದೆ. ವೇಗಿ ಮೊಹಮ್ಮದ್ ಸಿರಾಜ್ ಮತ್ತೊಮ್ಮೆ ಆರ್‌ಸಿಬಿ ವೇಗದ ದಾಳಿಯನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.
IPL Retention ಗಾಳಿ ಸುದ್ದಿ ಠುಸ್; ಗುಜರಾತ್ ಟೈಟಾನ್ಸ್ ತಂಡದಲ್ಲೇ ಉಳಿದ ಹಾರ್ದಿಕ್ ಪಾಂಡ್ಯ..!
ಆರ್‌ಸಿಬಿ ರಿಲೀಸ್ ಮಾಡಿದ ಆಟಗಾರರಿವರು:
ವನಿಂದು ಹಸರಂಗ, ಜೋಶ್ ಹೇಜಲ್‌ವುಡ್, ಹರ್ಷಲ್ ಪಟೇಲ್, ಫಿನ್ ಅಲೆನ್, ಮಿಚೆಲ್ ಬ್ರಾಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್ ಹಾಗೂ ಕೇದಾರ್ ಜಾದವ್
ಹರಾಜಿಗೂ ಮುನ್ನ ಆರ್‌ಸಿಬಿ ರೀಟೈನ್ ಮಾಡಿಕೊಂಡ ಆಟಗಾರರಿವರು:
ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ದಿನೇಶ್ ಕಾರ್ತಿಕ್, ರಜತ್ ಪಾಟೀದಾರ್, ರೀಸ್ ಟಾಪ್ಲೆ, ವಿಲ್ ಜೇಕ್ಸ್, ಸುಯಾಶ್ ಪ್ರಭುದೇಸಾಯಿ, ಅನುಜ್ ರಾವತ್, ಮಹಿಪಾಲ್ ಲೋಮ್ರರ್, ಮನೋಜ್ ಭಾಂಡ್ಗೆ, ಕರ್ಣ್ ಶರ್ಮಾ, ಮಯಾಂಕ್ ಡಾಗರ್, ವೈಶಾಖ್ ವಿಜಯ್‌ಕುಮಾರ್, ಆಕಾಶ್ ದೀಪ್, ರಜನ್ ಕುಮಾರ್, ಹಿಮಾಂಶು ಶರ್ಮಾ.