* ಮೂವರು ಆಟಗಾರರನ್ನು ರೀಟೈನ್ ಮಾಡಿಕೊಂಡ ರಾಜಸ್ಥಾನ ರಾಯಲ್ಸ್* ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಹಾಗೂ ಮೋರಿಸ್‌ಗೆ ಗೇಟ್‌ ಪಾಸ್* ನಾಯಕ ಸಂಜು, ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್‌ ರಾಯಲ್ಸ್‌ನಲ್ಲೇ ಉಳಿದುಕೊಂಡಿದ್ದಾರೆ

ಬೆಂಗಳೂರು(ನ.30): ಚೊಚ್ಚಲ ಆವೃತ್ತಿಯ ಐಪಿಎಲ್‌ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಸಾಕಷ್ಟು ಅಳೆದು ತೋಗಿ ನಾಯಕ ಸಂಜು ಸ್ಯಾಮ್ಸನ್ ಸೇರಿದಂತೆ ಮೂವರು ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಆದರೆ ಇಂಗ್ಲೆಂಡ್‌ ಮೂಲದ ಟಿ20 ಸ್ಪೆಷಲಿಸ್ಟ್ ಆಟಗಾರರಾದ ಜೋಫ್ರಾ ಅರ್ಚರ್‌, ಬೆನ್ ಸ್ಟೋಕ್ಸ್‌ ಅವರಂತಹ ಆಟಗಾರರನ್ನು ತಂಡದಿಂದ ಕೈಬಿಟ್ಟಿರುವುದು ಹಲುವು ಅಚ್ಚರಿಗೆ ಕಾರಣವಾಗಿದೆ.

ಹೌದು, ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ತನ್ನ ಮೊದಲ ಅಯ್ಕೆಯ ಆಟಗಾರನಾಗಿ ಸಂಜು ಸ್ಯಾಮ್ಸನ್‌, ಎರಡನೇ ಆಯ್ಕೆಯಾಗಿ ಜೋಸ್ ಬಟ್ಲರ್ ಹಾಗೂ ಮೂರನೇ ಆಯ್ಕೆಯಾಗಿ ಅಂಡರ್‌ 19 ಪ್ರತಿಭೆ ಯಶಸ್ವಿ ಜೈಸ್ವಾಲ್ ಅವರನ್ನು ರೀಟೈನ್ ಮಾಡಿಕೊಂಡಿದೆ. ಹೀಗಾಗಿ ಸಂಜು ಸ್ಯಾಮ್ಸನ್ 14 ಕೋಟಿ ರುಪಾಯಿ ಪಡೆದರೆ, ಸ್ಪೋಟಕ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ 10 ಕೋಟಿ ರುಪಾಯಿಗಳನ್ನು ಪಡೆಯಲಿದ್ದಾರೆ. ಇನ್ನು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡದ ಯಶಸ್ವಿ ಜೈಸ್ವಾಲ್ 4 ಕೋಟಿ ರುಪಾಯಿಗಳನ್ನು ಪಡೆಯಲಿದ್ದಾರೆ. ಈ ಮೂವರು ಆಟಗಾರರಿಗೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 28 ಕೋಟಿ ರುಪಾಯಿ ವ್ಯಯಿಸಲಿದೆ.

ರಾಜಸ್ಥಾನ ರಾಯಲ್ಸ್ ಖಾತೆಯಲ್ಲಿದೆ 62 ಕೋಟಿ ರುಪಾಯಿ: ಈಗಾಗಲೇ ಮೂವರು ಅಟಗಾರರನ್ನು ರೀಟೈನ್ ಮಾಡಿಕೊಂಡಿದ್ದರಿಂದ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಖಾತೆಯಿಂದ 28 ಕೋಟಿ ರುಪಾಯಿ ಖರ್ಚಾಗಿದ್ದು, ಇನ್ನುಳಿದ 62 ಕೋಟಿ ರುಪಾಯಿಗಳಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಬೇಕಿದೆ

14ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೊನೆಯಿಂದ ಎರಡನೇ ಸ್ಥಾನ ಪಡೆದಿದ್ದ ರಾಯಲ್ಸ್‌: ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್‌ ತಂಡವು ಬಲಿಷ್ಠ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಹೊಂದಿದ್ದರೂ ಸಹಾ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಕೊನೆಯಿಂದ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಸಂಜು ಪಡೆ 14 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 9 ಸೋಲುಗಳೊಂದಿಗೆ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

IPL Retention: ನಾಯಕ ರಾಹುಲ್‌, ಶಮಿ, ಪೂರನ್ ಕೈಬಿಟ್ಟು ಕೇವಲ ಇಬ್ಬರನ್ನು ರೀಟೈನ್ ಮಾಡಿಕೊಂಡ ಪಂಜಾಬ್‌

ಕೈಕೊಟ್ಟ ಸ್ಟಾರ್ ಆಟಗಾರರು: ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ದುಬಾರಿ ಮೊತ್ತಕ್ಕೆ ಹರಾಜಾಗಿ ಎಲ್ಲರ ಹುಬ್ಬೇರಿಸಿದ್ದ ದಕ್ಷಿಣ ಆಫ್ರಿಕಾ ಸ್ಟಾರ್ ಅಲ್ರೌಂಡರ್ ಕ್ರಿಸ್ ಮೋರಿಸ್ ಕಳಫೆ ಪ್ರದರ್ಶನ ತೋರುವ ಮೂಲಕ ರಾಯಲ್ಸ್ ಪಾಲಿಗೆ ದುಬಾರಿಯಾಗಿದ್ದರು. ಇನ್ನು ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ಮೂಲದ ಜೋಫ್ರಾ ಆರ್ಚರ್ ಇಡೀ ಟೂರ್ನಿಯಿಂದ ಹೊರಗುಳಿದಿದ್ದರು, ಇನ್ನು ಬೆನ್ ಸ್ಟೋಕ್ಸ್‌ ಕೂಡಾ ವೈಯುಕ್ತಿಕ ಕಾರಣದಿಂದ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಿಂದ ಹೊರಗುಳಿದಿದ್ದರು. ಹೀಗಾಗಿ ಇಬ್ಬರು ಆಟಗಾರರನ್ನು ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ ಮುಂಬರುವ ಹರಾಜಿಗೂ ಮುನ್ನ ತಂಡದಿಂದ ಕೈಬಿಟ್ಟಿದೆ. 

ಇದಷ್ಟೇ ಅಲ್ಲದೇ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಲಿಯಾಮ್ ಲಿವಿಂಗ್‌ಸ್ಟೋನ್‌, ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್, ಶ್ರೇಯಸ್ ಗೋಪಾಲ್, ಕೆ.ಸಿ. ಕರಿಯಪ್ಪ, ಮುಷ್ತಾಫಿಜುರ್ ರೆಹಮಾನ್ ಹಾಗೂ ಆಂಡ್ರೋ ಟೈ ಅವರಂತಹ ಆಟಗಾರರಿಗೆ ಗೇಟ್ ಪಾಸ್ ನೀಡಿದೆ. ಇನ್ನು ಭಾರತದ ಯುವ ವೇಗಿಗಳಾದ ಚೇತನ್ ಸಕಾರಿಯಾ, ಅಂಕಿತ್ ತ್ಯಾಗಿ ಅವರನ್ನು ಸಹಾ ರೀಟೈನ್ ಮಾಡಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.

ರಾಜಸ್ಥಾನ ತಂಡವು ಕೇವಲ ಮೂವರನ್ನು ಮಾತ್ರ ಉಳಿಸಿಕೊಳ್ಳುವ ಮೂಲಕ ಹೊಸದಾಗಿ ತಂಡ ಕಟ್ಟುವತ್ತ ಚಿತ್ತ ನೆಟ್ಟಿದೆ. ಸಂಜು ಸ್ಯಾಮ್ಸನ್‌ಗೆ ಉತ್ತಮ ನಾಯಕತ್ವ ಗುಣವಿದ್ದು, ಇಂಗ್ಲೆಂಡ್ ಮೂಲದ ವಿಕೆಟ್ ಕೀಪರ್‌ ಜೋಸ್ ಬಟ್ಲರ್ ಕೂಡಾ ತಂಡ ಕಟ್ಟುವ ನಿಟ್ಟಿನಲ್ಲಿ ನೆರವಾಗಲಿದ್ದಾರೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯಶಸ್ವಿ ಜೈಸ್ವಾಲ್‌ಗೆ ಮಣೆ ಹಾಕಲಾಗಿದೆ.