ಲೀಗ್‌ ಮ್ಯಾಚ್‌ನಲ್ಲಿ 200ಕ್ಕಿಂತ ಅಧಿಕ ರನ್‌ಗಳನ್ನು ಬಹಳ ಸರಾಗವಾಗಿ ಬಾರಿಸುತ್ತಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಐಪಿಎಲ್‌ನ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿದೆ. 

ಅಹಮದಾಬಾದ್ (ಮೇ.21): 200, 260, 280 ರನ್‌ಗಳನ್ನು ಲೀಗ್‌ ಹಂತದಲ್ಲಿ ಲೀಲಾಜಾಲವಾಗಿ ಚಚ್ಚುತ್ತಿದ್ದ ಸನ್‌ರೈಸರ್ಸ್‌ ಬ್ಯಾಟಿಂಗ್‌ ವಿಭಾಗ ಐಪಿಎಲ್‌ನ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಮಹಾ ಬ್ಯಾಟಿಂಗ್‌ ವೈಫಲ್ಯ ಎದುರಿಸಿದೆ. ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಕೆಕೆಆರ್‌ ತಂಡದ ಶಿಸ್ತಿನ ಬೌಲಿಂಗ್‌ ಮುಂದೆ ರನ್‌ ಗಳಿಸಲು ತಿಣುಕಾಡಿದ ಸನ್‌ರೈಸರ್ಸ್‌ ಹೈದರಬಾದ್‌ ತಂಡ ಕೇವಲ 159 ರನ್‌ಗೆ ಆಲೌಟ್‌ ಆಗಿದೆ. ಸ್ಪೋಟಕ ಬ್ಯಾಟ್ಸ್‌ಮನ್‌ ಹಾಗೂ ಆರಂಭಿಕ ಆಟಗಾರ ಟ್ರಾವಿಡ್‌ ಹೆಡ್‌ ಅವರನ್ನು ಮೊದಲ ಓವರ್‌ನಲ್ಲಿಯೇ ಕಳೆದುಕೊಂಡ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಬ್ಯಾಟಿಂಗ್‌ ಕೊನೆಯವರೆಗೂ ಲಯಕ್ಕೆ ಬರಲೇ ಇಲ್ಲ. ರನ್‌ರೇಟ್‌ ಉತ್ತಮವಾಗಿದ್ದರೂ, ಅಬ್ಬರದ ಆಟವಾಡುವ ಪ್ರಯತ್ನದಲ್ಲಿ ಕೆಕೆಆರ್‌ ಬೌಲರ್‌ಗಳಿಗೆ ವಿಕೆಟ್‌ ಒಪ್ಪಿಸುತ್ತಲೇ ಸಾಗಿದರು. ಲೀಗ್‌ ಹಂತದಲ್ಲಿ ಬೌಲಿಂಗ್‌ನಲ್ಲಿ ಅಷ್ಟೇನೂ ಮಿಂಚದ ಅನುಭವಿ ವೇಗಿ ಮಿಚೆಲ್‌ ಸ್ಟಾರ್ಕ್‌ ಪ್ರಮುಖ ಪಂದ್ಯದಲ್ಲಿ ಲಯ ಕಂಡುಕೊಳ್ಳುವ ಮೂಲಕ ಮೂರು ಪ್ರಮುಖ ವಿಕೆಟ್‌ ಉರುಳಿಸಿದರು. 130ರ ಒಳಗಿನ ಮೊತ್ತಕ್ಕೆ ಆಲೌಟ್‌ ಆಗುವ ಅಪಾಯ ಎದುರಿಸಿದ್ದ ಸನ್‌ರೈಸರ್ಸ್‌ ತಂಡಕ್ಕೆ ಕೊನೆಯ ವಿಕೆಟ್‌ಗೆ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಕೆಲ ರನ್‌ ಗಳಿಸಿದ್ದರಿಂದ 159 ರನ್‌ ಬಾರಿಸಲು ಕಾರಣವಾಯಿತು.

126 ರನ್‌ಗೆ 9 ವಿಕೆಟ್‌ ಕಳೆದುಕೊಂಡಿದ್ದ ಸನ್‌ರೈಸರ್ಸ್‌ ತಂಡಕ್ಕೆ ಕೊನೆಯಲ್ಲಿ ನಾಯಕ ಪ್ಯಾಟ್‌ ಕಮ್ಮಿನ್ಸ್‌ 24 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್‌ ಇದ್ದ 30 ರನ್‌ ಸಿಡಿಸುವ ಮೂಲಕ ತಂಡ ಸಾಧಾರಣ ಮೊತ್ತ ಪೇರಿಸಲು ನೆರವಾದರು. ಕೊನೆಗೆ ಸನ್‌ರೈಸರ್ಸ್‌ ತಂಡ 19.3 ಓವರ್‌ಗಳಲ್ಲಿ 159 ರನ್‌ಗೆ ಆಲೌಟ್‌ ಆಯಿತು.

IPL 2024: ಇಂದು ಫೈನಲ್‌ ಟಿಕೆಟ್‌ಗೆ ಕೆಕೆಆರ್‌-ಸನ್‌ರೈಸರ್ಸ್‌ ಬಿಗ್ ಫೈಟ್‌

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಿಸಿಕೊಂಡಿದ್ದ ಸನ್‌ರೈಸರ್ಸ್‌ ತಂಡಕ್ಕೆ ಮೊದಲ ಓವರ್‌ನಿಂದಲೇ ಕೆಕೆಆರ್‌ ಪ್ರತಿರೋಧ ಒಡ್ಡಿತು. ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌ ಕೇವಲ 2 ಎಸೆತ ಎದುರಿಸಿ ಮಿಚೆಲ್‌ ಸ್ಟಾರ್ಕ್‌ ಅವರ ಅದ್ಭುತ ಎಸೆತಲ್ಲಿ ಬೌಲ್ಡ್‌ ಆಗಿ ನಿರ್ಗಮಿಸಿದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಹೊತ್ತಿಗಾಗಲೇ ವೈಭವ್‌ ಅರೋರಾ ಸನ್‌ರೈಸರ್ಸ್‌ ತಂಡಕ್ಕೆ ಮತ್ತೊಂದು ಆಘಾತ ನೀಡಿದರು. 4 ಎಸೆತದಲ್ಲಿ 3 ರನ್‌ ಬಾರಿಸಿದ ಅಭಿಷೇಕ್‌ ಶರ್ಮ, ವೈಭವ್‌ ಎಸೆತದಲ್ಲಿ ರಸೆಲ್‌ಗೆ ಕ್ಯಾಚ್‌ ನೀಡಿ ನಿರ್ಮಿಸಿದರು. 

ಮಳೆಯಿಂದ GT vs SRH ಪಂದ್ಯ ರದ್ದು: ಅಧಿಕೃತವಾಗಿ ಪ್ಲೇ-ಆಫ್‌ಗೇರಿದ ಸನ್‌ರೈಸರ್ಸ್‌