ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಂಪೈರ್, ಆಕ್ಷನ್ ಫಿಕ್ಸಿಂಗ್ ಆರೋಪ ಮಾಡಿದ ಐಪಿಎಲ್ ಮಾಜಿ ಕಮೀಷನರ್!
ಐಪಿಎಲ್‌ನ ಮಾಜಿ ಕಮೀಷನರ್ ಲಲಿತ್ ಮೋದಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಎನ್. ಶ್ರೀನಿವಾಸನ್ ಅಂಪೈರ್‌ಗಳನ್ನು ಫಿಕ್ಸ್ ಮಾಡುತ್ತಿದ್ದರು ಮತ್ತು ಹರಾಜಿನಲ್ಲಿಯೂ ಫಿಕ್ಸಿಂಗ್ ನಡೆಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಬೆಂಗಳೂರು (ನ.27): ಚೆನ್ನೈ ಸೂಪರ್ ಕಿಂಗ್ಸ್ ಟೀಮ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಈ ಬಾರಿ ಆರೋಪ ಮಾಡಿದ್ದು ಬೇರೆ ಯಾರೂ ಅಲ್ಲ. ಐಪಿಎಲ್‌ನ ಮಾಜಿ ಕಮೀಷನರ್ ಲಲಿತ್ ಮೋದಿ ಸ್ವತಃ ಈ ಆರೋಪ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಾಗಿರುವ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಎನ್.ಶ್ರೀನಿವಾಸನ್ ಅಂಪೈರ್‌ಗಳನ್ನು ಫಿಕ್ಸ್ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. 2025ರ ಐಪಿಎಲ್‌ಗೆ ಹರಾಜು ಪ್ರಕ್ರಿಯೆ ಮುಗಿದ ಬೆನ್ನಲ್ಲಿಯೇ ಲಲಿತ್ ಮೋದಿ ಈ ಸ್ಫೋಟಕ ಆರೋಪ ಮಾಡಿದ್ದಾರೆ. ಹರಾಜಿನ ಸಮಯದಲ್ಲೂ ಎನ್.ಶ್ರೀನಿವಾಸನ್ ಫಿಕ್ಸಿಂಗ್ ಮಾಡುತ್ತಿದ್ದರು. ಇನ್‌ಡೈರೆಕ್ಟ್ ಫಿಕ್ಸಿಂಗ್ ಅನ್ನು ನಾನು ಗಮನಿಸಿದ್ದ ಕಾರಣಕ್ಕಾಗಿ ಎನ್.ಶ್ರೀನಿವಾಸನ್ ಸಂಪೂರ್ಣವಾಗಿ ನನ್ನ ಮೇಲೆ ವೈರತ್ವ ಸಾಧಿಸಲು ಆರಂಭ ಮಾಡಿದ್ದರು ಎಂದು ತಿಳಿಸಿದ್ದಾರೆ.
ಇಂಗ್ಲೆಂಡ್ ಆಲ್‌ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಅವರನ್ನು ಆಯ್ಕೆ ಮಾಡಲು ಶ್ರೀಲಂಕಾದ ತಿಸಾರಾ ಪೆರೆರಾ ಅವರನ್ನು ಸಿಎಸ್‌ಕೆ ಪಟ್ಟಿಯಿಂದ ಹೊರಗಿಡುವಂತೆ ಶ್ರೀನಿವಾಸನ್ ಆಗಿನ ಐಪಿಎಲ್ ಕಮಿಷನರ್ ಆಗಿದ್ದ ನನ್ನನ್ನು ಕೇಳಿದ್ದರು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ. 2009ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಆಂಡ್ರ್ಯೂ ಫ್ಲಿಂಟಾಫ್ ಅವರನ್ನು ಚೆನ್ನೈ ತಂಡ ₹7.5 ಕೋಟಿಗೆ ಅಂದಿನ ದಾಖಲೆ ಮೊತ್ತಕ್ಕೆ ಖರೀದಿಸಿತ್ತು.
ಭಾರೀ ನಿರೀಕ್ಷೆಯ ಹೊರತಾಗಿಯೂ ಫ್ಲಿಂಟಾಪ್ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ನಿರಾಸೆ ಮೂಡಿಸಿದ್ದರು. ಆಡಿದ್ದ ಮೂರು ಪಂದ್ಯಗಳಿಂದ 31ರ ಸರಾಸರಿ ಹಾಗೂ 120ರ ಸ್ಟ್ರೈಕ್‌ರೇಟ್‌ನಲ್ಲಿ 62 ರನ್ ಬಾರಿಸಿದ್ದರು. ಬೌಲಿಂಗ್‌ನಲ್ಲಿ ಮಾಜಿ ವೇಗಿ 9.55 ಎಕಾನಮಿಯಲ್ಲಿ ಕೇವಲ 2 ವಿಕೆಟ್ ಉರುಳಿಸಿದ್ದರು.
ಇತ್ತೀಚಿನ ಸಂದರ್ಶನವೊಂದರಲ್ಲಿ, ಲಲಿತ್ ಮೋದಿ ಅವರು ಆಂಡ್ರ್ಯೂ ಫ್ಲಿಂಟಾಫ್ ಅವರನ್ನು ಸಿಎಸ್‌ಕೆ ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿತ್ತು. ಇದೇ ಕಾರಣಕ್ಕೆ ಹರಾಜಿನಲ್ಲಿ ಬೇರೆ ಯಾವ ತಂಡಗಳು ಫ್ಲಿಂಟಾಫ್‌ಗೆ ಹೆಚ್ಚಿನ ಬಿಡ್ ಮಾಡದಂತೆ ಅವರು ನೀಡಿದ್ದ ಸೂಚನೆಯನ್ನು ತಂಡಗಳಿಗೆ ತಿಳಿಸಿದ್ದೆ. ಹರಾಜಿನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಲು ಶ್ರೀನಿವಾಸನ್ ಈ ರೀತಿ ಮಾಡುತ್ತಿದ್ದರು ಎಂದಿದ್ದಾರೆ.
ಹರಾಜು ಕೂಡ ಫಿಕ್ಸಿಂಗ್ ಆಗುತ್ತಿತ್ತು: ನಾನು ಶ್ರೀನಿವಾಸನ್ ಅವರಿಗೆ ಫ್ಲಿಂಟಾಫ್‌ರನ್ನು ನೀಡಿದ್ದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಎಲ್ಲಾ ತಂಡಗಳಿಗೂ ಇದು ಗೊತ್ತಿತ್ತು. ಇಲ್ಲದೇ ಇದ್ದಲ್ಲಿ ಐಪಿಎಲ್ ಆಗಲು ಅವರು ಬಿಡುತ್ತಿರಲಿಲ್ಲ. ಬಿಸಿಸಿಐ ಸಿಂಹಾಸನದಲ್ಲಿ ಅವರು ರಾಜರಾಗಿದ್ದರು. ಅದೇ ಕಾರಣಕ್ಕೆ ಯಾರೂ ಕೂಡ ಫ್ಲಿಂಟಾಫ್‌ಗೆ ಬಿಡ್ ಮಾಡದೇ ಇರುವಂತೆ ಹೇಳಿದ್ದೆವು. ಶ್ರೀನಿವಾಸನ್‌ಗೆ ಫ್ಲಿಂಟಾಫ್ ಬೇಕಿದ್ದ ಕಾರಣಕ್ಕೆ ಈ ರೀತಿ ಮಾಡಿದ್ದೆವು ಎಂದಿದ್ದಾರೆ.
ಅಂಪೈರ್‌ಗಳನ್ನು ಸಿಎಸ್‌ಕೆ ಫಿಕ್ಸ್ ಮಾಡ್ತಿತ್ತು: ಐಪಿಎಲ್ ಆಯೋಜನೆಯ ಸವಾಲುಗಳ ಬಗ್ಗೆ ಲಲಿತ್ ಮೋದಿ ಮಾತನಾಡಿದ್ದಾರೆ. ಸ್ವತಃ ಶ್ರೀನಿವಾಸನ್ ಆರಂಭದಲ್ಲಿ ಐಪಿಎಲ್ ಯಶಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ನನಗೇ ಅವರು ದೊಡ್ಡ ಎದುರಾಳಿಯಾದರು. ಶ್ರೀನಿವಾಸನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ತೀರ್ಪುಗಳು ಬರುವಂತೆ ಅಂಪೈರ್ ಫಿಕ್ಸಿಂಗ್ ಮಾಡುತ್ತಿದ್ದರು. ಇದನ್ನು ಪರೋಕ್ಷ ಫಿಕ್ಸಿಂಗ್ ಎಂದು ಹೇಳುತ್ತಿದ್ದೆವು ಎಂದು ಆರೋಪಿಸಿದ್ದಾರೆ.
ಐಪಿಎಲ್‌ನಂಥ ಟೂರ್ನಿಯನ್ನು ನಾನು ಏಕಾಂಗಿಯಾಗಿ ಆಯೋಜನೆ ಮಾಡುತ್ತಿದ್ದೆ. ಪ್ರತಿ ಆಟಗಾರ ಮೂರು ತಿಂಗಳು ಐಪಿಎಲ್‌ನಲ್ಲಿ ಇರುತ್ತಿದ್ದರು. ಕೆಲವೊಬ್ಬರು ಟೀಮ್‌ನಲ್ಲಿ ಮೂರು ವರ್ಷ. ಐಪಿಎಲ್ ಯಶಸ್ಸಾಗುವ ಬಗ್ಗೆ ಅವರಿಗೆ ಅನುಮಾನಗಳಿದ್ದವು. ಆದರೆ, ಒಮ್ಮೆ ಯಶಸ್ಸು ಕಂಡ ಬಳಿಕ ಬೋರ್ಡ್‌ನಲ್ಲಿ ನನಗೇ ಅವರು ದೊಡ್ಡ ಎದುರಾಳಿಯಾದರು. ನಾನು ಅವರ ವಿರುದ್ಧ ಹೋದೆ. ಆತ ಸುಮಾರು ಕೆಲಸ ಮಾಡಿದ್ದಾರೆ. ಅಂಪೈರ್ ಫಿಕ್ಸಿಂಗ್ ಬಗ್ಗೆ ನನ್ನ ಮೇಲೆ ಆರೋಪ ಮಾಡಿದ್ದರು. ನಾನು ಕೂಡ ಅದೇ ಆರೋಪ ಮಾಡಿದ್ದೆ. ಆತ ಚೆನ್ನೈ ಪಂದ್ಯಕ್ಕೆ ತಮಿಳುನಾಡಿನ ಅಂಪೈರ್‌ಗಳೇ ಇರುವಂತೆ ಮಾಡುತ್ತಿದ್ದರು. ಅಂಪೈರ್‌ಗಳನ್ನು ಬದಲಾಯಿಸುವ ಕೆಲಸ ಮಾಡುತ್ತಿದ್ದರು ಎಂದಿದ್ದಾರೆ.
'ಚಾಣಕ್ಯನಿಗಿಂತ ಮಾಸ್ಟರ್‌ಮೈಂಡ್..' ಡೆಲ್ಲಿ ಮಾಲೀಕ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್!
ಆರಂಭದಲ್ಲಿ ನಾನು ಇದರ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ. ಆದರೆ, ಚೆನ್ನೈ ಪಂದ್ಯಕ್ಕೆ ಚೆನ್ನೈನ ಅಂಪೈರ್‌ಗಳನ್ನೇ ಹಾಕಲು ಆರಂಭಿಸಿದಾಗ ನಾನು ವಿರೋಧಿಸಿದೆ. ಇದನ್ನ ಪರೋಕ್ಷ ಫಿಕ್ಸಿಂಗ್ ಎಂದು ಕರೆದಿದ್ದೆ. ಈ ವಿಚಾರಗಳನ್ನು ಎಕ್ಸ್‌ಪೋಸ್ ಮಾಡಲು ಬಯಸಿದ ಬಳಿಕ ನನಗೆ ಅವರು ಎದುರಾಳಿಯಾದರು ಎಂದಿದ್ದಾರೆ.
ಶಬರಿಮಲೆಯ 18 ಪವಿತ್ರ ಮೆಟ್ಟಿಲು ಮೇಲೆ ನಿಂತು ಕೇರಳ ಪೊಲೀಸರ ಫೋಟೋಶೂಟ್!
CSK ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಚೆನ್ನೈ ಮೂಲದ ಫ್ರಾಂಚೈಸಿ ಟೂರ್ನಿಯಲ್ಲಿ ಐದು ಐಪಿಎಲ್ ಪ್ರಶಸ್ತಿಗಳನ್ನು (ಮುಂಬೈ ಇಂಡಿಯನ್ಸ್‌ನೊಂದಿಗೆ ಜಂಟಿ ದಾಖಲೆ) ಗೆದ್ದಿದೆ. ಲೆಜೆಂಡರಿ ಎಂಎಸ್ ಧೋನಿ ಅವರು ತಮ್ಮ ಎಲ್ಲಾ ಪ್ರಶಸ್ತಿಗಳ ಗೆಲುವಿನಲ್ಲಿ ತಂಡದ ನಾಯಕರಾಗಿದ್ದರು. 2016-17ರಲ್ಲಿ ಸಿಎಸ್‌ಕೆಯನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಗಿತ್ತು.