30 ನಿಮಿಷ ಮಳೆ, ಆಟ 2 ಗಂಟೆ ಕಾಲ ಸ್ಥಗಿತ: 3 ದಿನ ನಡೆದ ಫೈನಲ್ ಪಂದ್ಯ!
ಐಪಿಎಲ್ ಫೈನಲ್ ಮೀಸಲು ದಿನದಾಟಕ್ಕೂ ಮಳೆರಾಯ ಅಡ್ಡಿ
ಕೇವಲ ಅರ್ಧಗಂಟೆ ಸುರಿದ ಮಳೆಗೆ 2 ಗಂಟೆ ಆಟ ಸ್ಥಗಿತ
ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿಲ್ಲ ಸಬ್ ಏರ್ ಸಿಸ್ಟಂ
ಅಹಮದಾಬಾದ್(ಮೇ.30): ಅಹಮದಾಬಾದ್: ಚೆನ್ನೈ ಸೂಪರ್ ಕಿಂಗ್‌್ಸ 2023ರ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅನನುಭವಿ ಬೌಲಿಂಗ್ ಪಡೆ, ಇನ್ನೇನು ನಿವೃತ್ತಿಗೆ ಹತ್ತಿರವಿರುವ ಹಲವು ಆಟಗಾರರಿಂದ ಕೂಡಿದ್ದರೂ ತಂಡ 5ನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಲು ಸಫಲವಾಗಿದೆ. ಫೈನಲ್‌ನಲ್ಲಿ ಕಳೆದ ಬಾರಿಯ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಡಕ್ವರ್ತ್ ಲೂಯಿಸ್ ನಿಯಮದನ್ವಯ ಕೊನೆಯ ಎಸೆತದಲ್ಲಿ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಸತತ 2ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಗುಜರಾತ್‌ನ ಕನಸು ಭಗ್ನಗೊಂಡಿತು.
ಮಳೆಯಿಂದಾಗಿ ಮೀಸಲು ದಿನಕ್ಕೆ ಮುಂದೂಡಿಕೆಯಾಗಿದ್ದ ಪಂದ್ಯಕ್ಕೆ ಸೋಮವಾರವೂ ಮಳೆ ಕಾಡಿತು. ಗುಜರಾತ್ ಮೊದಲು ಬ್ಯಾಟ್ ಮಾಡಿ 20 ಓವರಲ್ಲಿ 4 ವಿಕೆಟ್‌ಗೆ 214 ರನ್ ಕಲೆಹಾಕಿತು. ಮಳೆಯಿಂದ 2 ಗಂಟೆ ಆಟ ಸ್ಥಗಿತಗೊಂಡ ಕಾರಣ ಡಕ್ವರ್ತ್ ಲೂಯಿಸ್ ನಿಯಮದನ್ವಯ ಚೆನ್ನೈಗೆ 15 ಓವರಲ್ಲಿ 171 ರನ್ ಗುರಿ ನೀಡಲಾಯಿತು.
ಸಿಎಸ್‌ಕೆ ಕೊನೆಯ ಎಸೆತದಲ್ಲಿ ಗುರಿ ತಲುಪಿತು. ಋುತುರಾಜ್(26) ಹಾಗೂ ಕಾನ್ವೇ(47) ಮೊದಲ ವಿಕೆಟ್‌ಗೆ 6.3 ಓವರಲ್ಲಿ 74 ರನ್ ಜೊತೆಯಾಟವಾಡಿ ಉತ್ತಮ ಆರಂಭ ಒದಗಿಸಿದರು. ಬಳಿಕ ರಹಾನೆ 27, ರಾಯುಡು 19 ರನ್ ಕೊಡುಗೆ ನೀಡಿದ್ದು ತಂಡಕ್ಕೆ ಅನುಕೂಲವಾಯಿತು. ದುಬೆ 21 ಎಸೆತದಲ್ಲಿ 32 ರನ್ ಸಿಡಿಸಿದರೆ, ಗೆಲುವಿಗೆ 2 ಎಸೆತದಲ್ಲಿ 10 ರನ್ ಬೇಕಿದ್ದಾಗ ತಲಾ ಒಂದು ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ ತಂಡವನ್ನು ಜಯದ ದಡ ಸೇರಿಸಿದರು.
ಅರ್ಧ ಗಂಟೆ ಮಳೆ, ಎರಡು ಗಂಟೆ ಆಟ ಸ್ಥಗಿತ
ಭಾನುವಾರ ಭಾರೀ ಮಳೆಯಿಂದಾಗಿ ಫೈನಲ್ ಪಂದ್ಯ ಮುಂದೂಡಿಕೆಯಾದ ಬಳಿಕ ಮೀಸಲು ದಿನವಾದ ಸೋಮವಾರವೂ ಪಂದ್ಯಕ್ಕೆ ಮಳೆರಾಯನ ಕಾಟ ಎದುರಾಯಿತು. ಟಾಸ್ ಹಾಗೂ ಗುಜರಾತ್‌ನ ಮೊದಲ ಇನ್ನಿಂಗ್‌್ಸ ಆಟ ಮಳೆಯಿಲ್ಲದೇ ಸುಸೂತ್ರವಾಗಿ ನಡೆದರೂ 2ನೇ ಇನ್ನಿಂಗ್‌್ಸ ಆರಂಭವಾಗುತ್ತಿದ್ದಂತೆ ಮಳೆ ಕೂಡ ಶುರುವಾಯಿತು. ಚೆನ್ನೈನ ಇನ್ನಿಂಗ್‌್ಸ ಕೇವಲ 3 ಎಸೆತಗಳನ್ನು ಕಂಡಿತ್ತು. ಆಗ ಶುರುವಾದ ಮಳೆ 20-30 ನಿಮಿಷಗಳ ಕಾಲವಷ್ಟೇ ಸುರಿಯಿತು.
ಕೊನೆವರೆಗೂ ರೋಚಕತೆ ಕಾಯ್ದುಕೊಂಡ 16ನೇ ಆವೃತ್ತಿ ಐಪಿಎಲ್ಗೆ ತೆರೆ!
ಆದರೆ ಮೈದಾನ ಸಿಬ್ಬಂದಿ ಅಭ್ಯಾಸ ಪಿಚ್‌ಗಳ ಮೇಲೆ ಹೊದಿಕೆ ಹೊದಿಸಲು ತಡ ಮಾಡಿದ್ದರಿಂದ ದೊಡ್ಡ ಪ್ರಮಾಣದಲ್ಲಿ ನೀರು ಶೇಕರಣೆಯಾಯಿತು. ಇದರಿಂದಾಗಿ ಆಟ ಸುಮಾರು 2 ಗಂಟೆ ವಿಳಂಬಗೊಂಡಿತು. ಕೊನೆಗೆ ರಾತ್ರಿ 11.45ಕ್ಕೆ ಮೈದಾನ ಪರಿಶೀಲನೆ ನಡೆಸಿದ ಅಂಪೈರ್‌ಗಳು ಹಾಗೂ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್, ಆಟವನ್ನು 12.10ಕ್ಕೆ ಪುನಾರಂಭಿಸಲು ನಿರ್ಧರಿಸಿದರು. ಡಕ್ವರ್ತ್ ಲೂಯಿಸ್ ನಿಯಮದನ್ವಯ ಚೆನ್ನೈಗೆ 15 ಓವರಲ್ಲಿ 171 ರನ್ ಗುರಿ ನಿಗದಿಪಡಿಸಲಾಯಿತು.
ಮೈದಾನ ಸಿಬ್ಬಂದಿ ಕೆಲಸಕ್ಕೆ ಸೆಲ್ಯೂಟ್: ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿದ್ದರೂ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವಂತೆ ಸಬ್‌ಏರ್ ಸಿಸ್ಟಂ ಇಲ್ಲ. ಇದು ಪಂದ್ಯ ತಡವಾಗಿ ಆರಂಭವಾಗಲು ಪ್ರಮುಖ ಕಾರಣವೆನಿಸಿತು. ಒಂದು ವೇಳೆ ಸಬ್‌ಏರ್ ಸಿಸ್ಟಂ ಈ ಸ್ಟೇಡಿಯಂ ಅಳವಡಿಸಿಕೊಂಡಿದ್ದರೇ, ಮಳೆ ನಿಂತ 20-25 ನಿಮಿಷದೊಳಗಾಗಿ ಪಂದ್ಯ ಆರಂಭವಾಗುತ್ತಿತ್ತು. ಇನ್ನು ಮೈದಾನದಲ್ಲಿ ಹೆಚ್ಚು ನೀರು ನಿಲ್ಲದಂತೆ ಮೈದಾನ ಸಿಬ್ಬಂದಿ ಮಾಡಿದ ಅವಿರತ ಪ್ರಯತ್ನದಿಂದಾಗಿ ರೋಚಕ ಫೈನಲ್ ಪಂದ್ಯ ಕಣ್ತುಂಬಿಕೊಳ್ಳುವ ಭಾಗ್ಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಕ್ಕಿತು.
3 ದಿನ ನಡೆದ ಫೈನಲ್ ಪಂದ್ಯ!
ಐಪಿಎಲ್ ಫೈನಲ್ ಆರಂಭಗೊಂಡಿದ್ದು ಮೇ 28ರಂದು ಶನಿವಾರ. ಆದರೆ ಪಂದ್ಯ ಮುಗಿದಿದ್ದು ಮೇ 30ರ ಸೋಮವಾರ. 16ನೇ ಆವೃತ್ತಿಯ ಐಪಿಎಲ್‌ನ ವಿಜೇತರು ಯಾರು ಎನ್ನುವುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಬರೋಬ್ಬರಿ 30 ಗಂಟೆಗಳಿಗೂ ಹೆಚ್ಚು ಕಾಲ ಕಾಯಬೇಕಾಯಿತು. 2020-21ರಲ್ಲಿ ಅಹಮದಾಬಾದ್‌ನಲ್ಲೇ ನಡೆದಿದ್ದ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಎರಡು ದಿನಗಳೊಳಗೆ (29.5 ಗಂಟೆ) ಮುಗಿದಿತ್ತು.