ಖ್ಯಾತ ಕ್ರಿಕೆಟಿಗನ ವಿರುದ್ಧ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಮಾಡಿದ್ದಾರೆ. ಈ ಗಂಭೀರ ಪ್ರಕರಣದಲ್ಲಿ ಹೈಕೋರ್ಟ್ ಆ ಕ್ರಿಕೆಟಿಗನ ಬಂಧನಕ್ಕೆ ಆದೇಶಿಸಿದ್ದು, ಕ್ರೀಡಾಲೋಕದಲ್ಲಿ ಸಂಚಲನ ಸೃಷ್ಟಿಯಾಗಿದೆ.
ಸ್ಟೇಡಿಯಂ ಗ್ಯಾಲರಿಯಲ್ಲಿ ಸಾವಿರಾರು ಅಭಿಮಾನಿಗಳ ಆರ್ಭಟ, ಬ್ಯಾಟ್‌ನಿಂದ ಮೂಡಿಬರುತ್ತಿದ್ದ ಅಬ್ಬರದ ಬೌಂಡರಿ-ಸಿಕ್ಸರ್‌ಗಳು, ಕ್ರಿಕೆಟ್ ಜಗತ್ತಿನಲ್ಲಿ ಭರವಸೆಯ ಯುವ ತಾರೆಯಾಗಿ ಬೆಳೆಯುತ್ತಿದ್ದ ಖ್ಯಾತಿ. ಆದರೆ, ಈ ಬಣ್ಣದ ಬೆಳಕಿನ ಹಿಂದೆ ಅಡಗಿದ್ದ ಕರಾಳ ಸತ್ಯವೊಂದು ಈಗ ಕೋರ್ಟ್ ಮೆಟ್ಟಿಲೇರಿದೆ. ಪ್ರೀತಿ, ವಂಚನೆ ಮತ್ತು ಅಶ್ಲೀಲ ವೀಡಿಯೊಗಳನ್ನು ಬಳಸಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಜೀವನದ ಜೊತೆ ಚೆಲ್ಲಾಟವಾಡಿದ ಗಂಭೀರ ಆರೋಪವೊಂದು ದೇಶದ ಖ್ಯಾತ ಐಪಿಎಲ್ ಕ್ರಿಕೆಟಿಗನ ಕೊರಳಿಗೆ ಸುತ್ತಿಕೊಂಡಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಯಾರು ಗೊತ್ತಾ ಆ ಪ್ರತಿಭೆ!
ಐಪಿಎಲ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಮಿಂಚುತ್ತಿರುವ ಯುವ ವಿಕೆಟ್ ಕೀಪರ್ ಬ್ಯಾಟರ್ ಅಭಿಷೇಕ್ ಪೊರೆಲ್ ವಿರುದ್ಧ ಬ್ಲ್ಯಾಕ್‌ಮೇಲಿಂಗ್ ಮತ್ತು ಲೈಂಗಿಕ ಕಿರುಕುಳದ ಗಂಭೀರ ದೂರು ದಾಖಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಲ್ಕತ್ತಾ ಹೈಕೋರ್ಟ್ ಕ್ರಿಕೆಟಿಗ ಸೇರಿದಂತೆ ಇಬ್ಬರನ್ನು ತಕ್ಷಣವೇ ಬಂಧಿಸಲು ಆದೇಶ ಹೊರಡಿಸಿದೆ.
ಪ್ರೀತಿಯ ನೆಪದಲ್ಲಿ ಬೆನ್ನಿಗೆ ಇರಿದ ಐಪಿಎಲ್ ಸ್ಟಾರ್!
ಪ್ರಕರಣದ ಸಂತ್ರಸ್ತೆ ಆಗಿರುವ ವೈದ್ಯಕೀಯ (Medical) ವಿದ್ಯಾರ್ಥಿನಿ ನೀಡಿದ ದೂರಿನ ಪ್ರಕಾರ, ಆಕೆಯನ್ನು ಪ್ರೀತಿಸುವುದಾಗಿ ನಂಬಿಸಿದ್ದ ಅಭಿಷೇಕ್ ಪೊರೆಲ್, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಆಕೆಯ ಖಾಸಗಿ ಮತ್ತು ಆಕ್ಷೇಪಾರ್ಹ ಫೋಟೋ ಹಾಗೂ ವೀಡಿಯೊಗಳನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ.
ಪ್ರಗತಿಯಲ್ಲಿದೆ ವಿಚಾರಣೆ!
ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರ ಪೀಠದ ಮುಂದೆ ಈ ಪ್ರಕರಣದ ವಿಚಾರಣೆ ನಡೆದಿದ್ದು, ಸಂತ್ರಸ್ತೆಯ ಪರ ವಾದ ಮಂಡಿಸಿದ ವಕೀಲರಾದ ರಾಂದೇವ್ ಸೇನ್‌ಗುಪ್ತಾ ಮತ್ತು ಆಕಾಶ್ ಗಂಗೋಪಾಧ್ಯಾಯ ನ್ಯಾಯಾಲಯಕ್ಕೆ ಆಘಾತಕಾರಿ ಮಾಹಿತಿಯೊಂದನ್ನು ನೀಡಿದ್ದಾರೆ. "ಈ ಕ್ರಿಕೆಟಿಗ ಕೇವಲ ಒಬ್ಬ ಯುವತಿಯನ್ನಷ್ಟೇ ಅಲ್ಲ, ತನ್ನ ಕ್ರಿಕೆಟರ್ ಇಮೇಜ್ ಬಳಸಿ ಇನ್ನೂ ಹಲವು ಅಮಾಯಕ ಮಹಿಳೆಯರನ್ನು ತನ್ನ ಜಾಲಕ್ಕೆ ಸೆಳೆದು ಇದೇ ರೀತಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ," ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಮೊಬೈಲ್, ಲ್ಯಾಪ್‌ಟಾಪ್ ವಶಕ್ಕೆ ಹೈಕೋರ್ಟ್ ಸೂಚನೆ!
ಯುವತಿಯ ಖಾಸಗಿ ಫೋಟೋಗಳು ಯಾವುದೇ ಕಾರಣಕ್ಕೂ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿರುವ ಹೈಕೋರ್ಟ್, ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಮಾಗ್ರಾ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ತಕ್ಷಣವೇ ಕಾರ್ಯಪ್ರವೃತ್ತರಾಗಲು ಆದೇಶಿಸಿದೆ. ಆರೋಪಿಗಳ ಬಳಿ ಇರುವ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಎಲ್ಲಾ ಡಿಜಿಟಲ್ ಎಲೆಕ್ಟ್ರಾನಿಕ್ ಸಾಧನಗಳನ್ನು ತಕ್ಷಣವೇ ವಶಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಪೊಲೀಸರು ಹೇಳಿದ್ದೇನು?
ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಆರೋಪಿ ಅಭಿಷೇಕ್ ಪೊರೆಲ್ ಹಾಗೂ ಆತನ ಸಹಚರನನ್ನು ಬಂಧಿಸಲು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 11 ಕ್ಕೆ ಕಾಯ್ದಿರಿಸಲಾಗಿದ್ದು, ಅಷ್ಟರೊಳಗೆ ಕೈಗೊಂಡ ಎಲ್ಲಾ ತನಿಖಾ ಕ್ರಮಗಳ ಕುರಿತು ವರದಿ ಸಲ್ಲಿಸಲು ಹೈಕೋರ್ಟ್ ಗಡುವು ನೀಡಿದೆ.
ಅಭಿಷೇಕ್ ಪೊರೆಲ್ ಐಪಿಎಲ್ ಕೆರಿಯರ್!
ಪಶ್ಚಿಮ ಬಂಗಾಳದ ಪರ ದೇಶೀಯ ಕ್ರಿಕೆಟ್ ಆಡುವ ಅಭಿಷೇಕ್ ಪೊರೆಲ್, 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. 35 ಪಂದ್ಯವಾಡಿದ್ದ ಪೊರೆಲ್ 769 ರನ್ ಗಳಿಸಿದ್ದಾರೆ (ಸರಾಸರಿ 25.63, ಸ್ಟ್ರೈಕ್ ರೇಟ್ 145.36) 4 ಅರ್ಧಶತಕ ಗಳಿಸಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಕ್ರಿಕೆಟ್ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ್ದ ಯುವ ಆಟಗಾರ, ಈಗ ಇಂತಹ ಕರಾಳ ಕೃತ್ಯದಿಂದಾಗಿ ಜೈಲು ಪಾಲಾಗುವ ಹಂತಕ್ಕೆ ತಲುಪಿದ್ದು, ಕ್ರೀಡಾಲೋಕದಲ್ಲೂ ಭಾರಿ ಸಂಚಲನ ಮೂಡಿಸಿದೆ.

