IPL Auction ರಾಜಸ್ಥಾನ ರಾಯಲ್ಸ್ಗೆ ಹೋಲ್ಡರ್, ಜಂಪಾ ಸೇರ್ಪಡೆ, ಸ್ಪಿನ್ ಪಡೆ ಮತ್ತಷ್ಟು ಸ್ಟ್ರಾಂಗ್..!
5.75 ಕೋಟಿ ರುಪಾಯಿಗೆ ರಾಜಸ್ಥಾನ ರಾಯಲ್ಸ್ ತೆಕ್ಕೆಗೆ ಜಾರಿದ ಜೇಸನ್ ಹೋಲ್ಡರ್
ಮಿನಿ ಹರಾಜಿನಲ್ಲಿ 9 ಆಟಗಾರರನ್ನು ಖರೀದಿಸಿದ ಸಂಜು ಸ್ಯಾಮ್ಸನ್ ಪಡೆ
ಆಡಂ ಜಂಪಾ ಹಾಗೂ ಮುರುಗನ್ ಅಶ್ವಿನ್ ಕೂಡಾ ರಾಜಸ್ಥಾನ ರಾಯಲ್ಸ್ ಪಾಲು

ಕೊಚ್ಚಿ(ಡಿ.24): ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವು, ಇದೀಗ ಎರಡನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಮಿನಿ ಹರಾಜಿನಲ್ಲಿ ಸಾಕಷ್ಟು ಲೆಕ್ಕಾಚಾರ ಹಾಕಿಯೇ ಪ್ರಮುಖ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಯುಜುವೇಂದ್ರ ಚಹಲ್ ಸ್ಪಿನ್ ಮೋಡಿ ಮಾಡುತ್ತಿದ್ದಾರೆ. ಇದೀಗ ರಾಯಲ್ಸ್ ತೆಕ್ಕೆಗೆ ಆಸ್ಟ್ರೇಲಿಯಾದ ಲೆಗ್‌ಸ್ಪಿನ್ನರ್ ಆಡಂ ಜಂಪಾ ಹಾಗೂ ಮುರುಗನ್ ಅಶ್ವಿನ್ ಕೂಡಾ ಮೂಲ ಬೆಲೆ ತಂಡ ಕೂಡಿಕೊಂಡಿರುವುದು ಸಂಜು ಪಡೆಯ ಬೌಲಿಂಗ್ ವಿಭಾಗ ಮತ್ತಷ್ಟು ಬಲವಾಗುವಂತೆ ಮಾಡಿದೆ.
ಹೌದು, ರಾಜಸ್ಥಾನ ರಾಯಲ್ಸ್ ತಂಡವು ಬೆನ್ ಸ್ಟೋಕ್ಸ್ ಹಾಗೂ ಕ್ಯಾಮರೋನ್ ಗ್ರೀನ್ ಖರೀದಿಸಲು ಉಳಿದ ಫ್ರಾಂಚೈಸಿಗಳ ಜತೆ ಪೈಪೋಟಿ ನಡೆಸಿತಾದರೂ ಅದಕ್ಕೆ ಯಶಸ್ಸು ಸಿಗಲಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್‌ನ ನೀಳಕಾಯದ ಆಲ್ರೌಂಡರ್ ಜೇಸನ್ ಹೋಲ್ಡರ್ ಅವರನ್ನು 5.72 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಯಿತು. ಇದರ ಜತೆಗೆ 1.50 ಕೋಟಿ ರುಪಾಯಿ ಹೊಂದಿದ್ದ ಆಡಂ ಜಂಪಾ ಹಾಗೂ 1 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಜೋ ರೂಟ್ ಕೂಡಾ ಮೊದಲಿಗೆ ಅನ್‌ಸೋಲ್ಡ್ ಆಗಿ ಆ ಬಳಿಕ ಎರಡನೇ ಸುತ್ತಿನಲ್ಲಿ ರಾಯಲ್ಸ್ ತಂಡ ಕೂಡಿಕೊಂಡಿದ್ದಾರೆ. ಇನ್ನು ತಮಿಳುನಾಡು ಮೂಲದ ಲೆಗ್‌ಸ್ಪಿನ್ನರ್ ಮುರುಗನ್ ಅಶ್ವಿನ್ ಕೂಡಾ ಕೇವಲ 20 ಲಕ್ಷ ರುಪಾಯಿ ರಾಯಲ್ಸ್ ತೆಕ್ಕೆಗೆ ಸೇರಿಕೊಂಡಿದ್ದಾರೆ. ಇವರಷ್ಟೇ ಅಲ್ಲದೇ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಮಿನಿ ಹರಾಜಿನಲ್ಲಿ 9 ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.
ಮಿನಿ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಖರೀದಿಸಿದ ಆಟಗಾರರ ವಿವರ ಹೀಗಿದೆ ನೋಡಿ:
* ಜೇಸನ್ ಹೋಲ್ಡರ್ - ಅಲ್ರೌಂಡರ್ - 5.75 ಕೋಟಿ ರುಪಾಯಿ
* ಆಡಂ ಜಂಪಾ - ಬೌಲರ್ - 1.50 ಕೋಟಿ ರುಪಾಯಿ
* ಜೋ ರೂಟ್ - ಬ್ಯಾಟರ್ - 1 ಕೋಟಿ ರುಪಾಯಿ
* ಡೊನೊವಾನ್ ಫೆರೆರಿಯಾ - ವಿಕೆಟ್ ಕೀಪರ್ - 50 ಲಕ್ಷ ರುಪಾಯಿ
* ಕೆ ಎಂ ಆಸಿಫ್ - ಬೌಲರ್ - 30 ಲಕ್ಷ ರುಪಾಯಿ
* ಅಬ್ದುಲ್ ಪಿ ಎ - ಆಲ್ರೌಂಡರ್ - 20 ಲಕ್ಷ ರುಪಾಯಿ
* ಆಕಾಶ್ ವಶಿಷ್ಠ್ - ಆಲ್ರೌಂಡರ್ - 20 ಲಕ್ಷ ರುಪಾಯಿ
* ಕುನಾಲ್ ರಾಥೋಡ್ - ವಿಕೆಟ್ ಕೀಪರ್ - 20 ಲಕ್ಷ ರುಪಾಯಿ
* ಮುರುಗನ್ ಅಶ್ವಿನ್ - ಬೌಲರ್ - 20 ಲಕ್ಷ ರುಪಾಯಿ
ಆಟಗಾರರ ರೀಟೈನ್ ಬಳಿಕ, ಮಿನಿ ಹರಾಜಿಗೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡವು ಹೀಗಿತ್ತು:
ಸಂಜು ಸ್ಯಾಮ್ಸನ್(ನಾಯಕ), ಯಶಸ್ವಿ ಜೈಸ್ವಾಲ್, ಶಿಮ್ರೋನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್, ಧುರ್ವ್ ಜುರೆಲ್, ರಿಯಾನ್ ಪರಾಗ್, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೋಲ್ಟ್, ಒಬೆಡ್ ಮೆಕೊಯ್, ನವದೀಪ್ ಸೈನಿ, ಕುಲ್ದೀಪ್ ಸೇನ್, ಕುಲ್ದೀಪ್ ಯಾದವ್, ಆರ್ ಅಶ್ವಿನ್, ಯಜುವೇಂದ್ರ ಚಹಾಲ್, ಕೆಸಿ ಕಾರ್ಯಪ್ಪ.
IPL Retention ರಾಜಸ್ಥಾನ ರಾಯಲ್ಸ್‌ನಿಂದ ಕನ್ನಡಿಗ ಕರುಣ್ ನಾಯರ್ ಸೇರಿ 9 ಕ್ರಿಕೆಟಿಗರು ಔಟ್!
ಸಾಕಷ್ಟು ಯುವ ಹಾಗೂ ಅನುಭವಿ ಆಟಗಾರರನ್ನು ಹೊಂದಿರುವ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಜೇಸನ್ ಹೋಲ್ಡರ್ ಸೇರ್ಪಡೆ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಸದೃಢವಾಗಿಸಿದೆ. ಇದೀಗ ಈ ತಂಡವನ್ನಿಟ್ಟುಕೊಂಡು ರಾಜಸ್ಥಾನ ರಾಯಲ್ಸ್ ತಂಡವು ಎರಡನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.