ಆರ್‌ಸಿಬಿಗೆ ಬ್ರಹ್ಮಾಸ್ತ್ರ ಎಂಟ್ರಿ; ಮ್ಯಾಕ್ಸಿ ಸೇರ್ಪಡೆಗೆ ಜೈ ಹೋ ಎಂದ ಫ್ಯಾನ್ಸ್..!
ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡ ಕೂಡಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡಲಾರಂಭಿಸಿದ್ದು, ಅಭಿಮಾನಿಗಳು ಆರ್‌ಸಿಬಿ ಫ್ರಾಂಚೈಸಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು(ಫೆ.18): 14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ನಿರೀಕ್ಷೆಯಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ. ಚೆನ್ನೈನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಬರೋಬ್ಬರಿ 14.25 ಕೋಟಿ ರುಪಾಯಿ ನೀಡಿ ಮ್ಯಾಕ್ಸ್‌ವೆಲ್‌ರನ್ನು ಖರೀದಿಸಿದೆ.
ಆರಂಭದಲ್ಲೇ ಮ್ಯಾಕ್ಸ್‌ವೆಲ್ ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಳು ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಕೊನೆಯವರೆಗೂ ಪಟ್ಟು ಬಿಡದ ಆರ್‌ಸಿಬಿ ಆಸ್ಟ್ರೇಲಿಯಾದ ಆಲ್ರೌಂಡರ್‌ರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಬಳಿಕ ಮತ್ತೋರ್ವ ಸ್ಫೋಟಕ ಬ್ಯಾಟ್ಸ್‌ಮನ್ ತಂಡ ಕೂಡಿಕೊಂಡಿರುವುದು ಆರ್‌ಸಿಬಿ ಅಭಿಮಾನಿಗಳಲ್ಲಿ ಮತ್ತಷ್ಟು ಹುರುಪು ಮೂಡುವಂತೆ ಮಾಡಿದೆ.
RCB ಸೇರಿದ ಬೆನ್ನಲ್ಲೇ ಶಪಥ ಮಾಡಿದ ಗ್ಲೆನ್ ಮ್ಯಾಕ್ಸ್‌ವೆಲ್!
ಕಳೆದ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸಿ 10.75 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ಮ್ಯಾಕ್ಸ್‌ವೆಲ್ 13 ಪಂದ್ಯಗಳನ್ನಾಡಿ ಒಂದೇ ಒಂದು ಸಿಕ್ಸರ್ ಬಾರಿಸದೇ ಕೇವಲ 108 ರನ್ ಬಾರಿಸಿದ್ದರು. ಇದರ ಬೆನ್ನಲ್ಲೇ ಪಂಜಾಬ್ ಫ್ರಾಂಚೈಸಿ ಮ್ಯಾಕ್ಸ್‌ವೆಲ್‌ರನ್ನು ತಂಡದಿಂದ ಕೈಬಿಟ್ಟಿತ್ತು. ಆದರೆ ತವರಿನಲ್ಲಿ ನಡೆದ ಭಾರತ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮೈಚಳಿ ಬಿಟ್ಟು ಬ್ಯಾಟ್ ಬೀಸಿದ್ದರು. ಹೀಗಾಗಿ ಫಾರ್ಮ್‌ಗೆ ಮರಳಿರುವ ಮ್ಯಾಕ್ಸ್‌ವೆಲ್ ಖರೀದಿಸಲು ಬೆಂಗಳೂರು ಫ್ರಾಂಚೈಸಿ ಮನಸು ಮಾಡಿದೆ. ಒಟ್ಟಿನಲ್ಲಿ ಮ್ಯಾಕ್ಸ್‌ವೆಲ್ ಆರ್‌ಸಿಬಿ ಕೂಡಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನವಾಗಿ ಟ್ರೆಂಡ್ ಆಗುತ್ತಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ ನೋಡಿ.