ಮಹೇಲಾ ಜಯವರ್ಧನೆ ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಮುಂದಿನ ಕೋಚ್ ಸ್ಥಾನಕ್ಕಾಗಿ ಫ್ರಾಂಚೈಸಿಯು ಮೈಕಲ್ ಹಸ್ಸಿ, ಆ್ಯರನ್ ಫಿಂಚ್ ಸೇರಿದಂತೆ ಐವರು ದಿಗ್ಗಜರ ಶಾರ್ಟ್ ಲಿಸ್ಟ್ ಸಿದ್ಧಪಡಿಸಿದೆ. ಭಾನುವಾರದಿಂದಲೇ ಈ ಹುದ್ದೆಗಾಗಿ ಇಂಟರ್ವ್ಯೂ ಪ್ರಕ್ರಿಯೆಗಳು ಆರಂಭವಾಗಲಿವೆ.

Mumbai Indians’ Next Coach: 5 Candidates in the Race:

ಮಹೇಲಾ ಜಯವರ್ಧನೆ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಂದ ಬೆನ್ನಲ್ಲೇ, ಫ್ರಾಂಚೈಸಿ ತನ್ನ ಮುಂದಿನ ಹೆಡ್ ಕೋಚ್ ಹುಡುಕಾಟ ಶುರು ಮಾಡಿದೆ. ಸುಮಾರು 10 ವರ್ಷಗಳ ಸುದೀರ್ಘ ಒಡನಾಟದ ನಂತರ ಜಯವರ್ಧನೆ ಹುದ್ದೆ ತೊರೆಯುತ್ತಿದ್ದಾರೆ ಎಂದು ಶನಿವಾರ ಮುಂಬೈ ಇಂಡಿಯನ್ಸ್ ಅಧಿಕೃತವಾಗಿ ಪ್ರಕಟಿಸಿದೆ. ಹೆಡ್ ಕೋಚ್ ಸ್ಥಾನಕ್ಕೆ ಮಾಲೀಕರು ಈಗಾಗಲೇ ಐವರ ಶಾರ್ಟ್ ಲಿಸ್ಟ್ ಸಿದ್ಧಪಡಿಸಿದ್ದು, ಭಾನುವಾರದಿಂದಲೇ ಇಂಟರ್ವ್ಯೂ ಪ್ರಕ್ರಿಯೆಗಳು ಶುರುವಾಗಲಿವೆ ಎಂದು ಮುಂಬೈ ಇಂಡಿಯನ್ಸ್ ಮೂಲಗಳು ತಿಳಿಸಿವೆ.

ಐಪಿಎಲ್ ಹರಾಜಿಗೆ ಎರಡು ತಿಂಗಳಿರುವಾಗಲೇ ಮುಂಬೈಗೆ ಗುಡ್‌ ಬೈ:

ಜಯವರ್ಧನೆ ತಮ್ಮ ಮೊದಲ ಅವಧಿಯಲ್ಲಿ 2017ರಿಂದ 2022ರವರೆಗೆ ಮುಂಬೈ ತಂಡಕ್ಕೆ ಕೋಚ್‌ ಆಗಿದ್ದರು. 2017, 2019, 2020ರಲ್ಲಿ ತಂಡ ಚಾಂಪಿಯನ್‌ ಆಗಿತ್ತು. ಬಳಿಕ 2022ರಿಂದ 2024ರ ವರೆಗೆ ಫ್ರಾಂಚೈಸಿಯ ಜಾಗತಿಕ ಮಟ್ಟದ ತಂಡಗಳ ಮುಖ್ಯಸ್ಥರಾಗಿದ್ದರು. 2025ರಲ್ಲಿ ಮತ್ತೆ ಹೆಡ್ ಕೋಚ್‌ ಆಗಿ ಮರಳಿದ್ದ ಅವರು, ಕಳೆದ ಆವೃತ್ತಿಯಲ್ಲೂ ತಂಡದ ಜೊತೆಗಿದ್ದರು. ಈಗ ಆಟಗಾರರ ಹರಾಜಿಗೆ 2 ತಿಂಗಳಿರುವಾಗ ತಂಡ ತೊರೆದಿದ್ದಾರೆ.

ಶಾರ್ಟ್‌ಲಿಸ್ಟ್‌ನ ಐವರಲ್ಲಿ ಇಬ್ಬರು ಆಸೀಸ್ ಆಟಗಾರರು:

ಶಾರ್ಟ್ ಲಿಸ್ಟ್ ಆಗಿರುವ ಐವರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಸೇರಿದಂತೆ ಇಬ್ಬರು ಆಸ್ಟ್ರೇಲಿಯಾ ದಿಗ್ಗಜರಿದ್ದಾರೆ. ಹಸ್ಸಿ ಜೊತೆಗೆ ಆ್ಯರನ್ ಫಿಂಚ್, ಆಡ್ರಿಯನ್ ಬಿರೆಲ್, ಮಾರ್ಕ್ ಬೌಚರ್ ಮತ್ತು ಇಯಾನ್ ಮಾರ್ಗನ್ ಇಂಟರ್ವ್ಯೂನಲ್ಲಿ ಭಾಗವಹಿಸುತ್ತಿದ್ದಾರೆ. ಐಪಿಎಲ್ 2027ರ ಹರಾಜಿಗೆ ಹೆಚ್ಚು ಸಮಯವಿಲ್ಲದ ಕಾರಣ, ಮುಂದಿನ ಕೆಲವೇ ದಿನಗಳಲ್ಲಿ ಜಯವರ್ಧನೆ ಅವರ ಉತ್ತರಾಧಿಕಾರಿಯನ್ನು ಫ್ರಾಂಚೈಸಿ ಘೋಷಿಸುವ ನಿರೀಕ್ಷೆಯಿದೆ.

ಚೆನ್ನೈ ಫ್ರಾಂಚೈಸಿಯಲ್ಲಿ ಸುಮಾರು 9 ವರ್ಷಗಳ ಕಾಲ ಕೋಚ್ ಆಗಿ ಕೆಲಸ ಮಾಡಿದ ಅನುಭವ ಹೊಂದಿರುವ ಮೈಕಲ್ ಹಸ್ಸಿ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾಗೆ ಟ್ರೋಫಿ ಗೆದ್ದುಕೊಟ್ಟ ಆ್ಯರನ್ ಫಿಂಚ್ ಹೆಸರೂ ಕೂಡ ಪರಿಗಣನೆಯಲ್ಲಿದೆ. ವಿವಿಧ ಐಪಿಎಲ್ ಫ್ರಾಂಚೈಸಿಗಳ ಪರ ಆಡಿದ ಅನುಭವ ಅವರಿಗಿದ್ದು, ಟೂರ್ನಿಯ ಸ್ವರೂಪ ಮತ್ತು ಭಾರತೀಯ ಪಿಚ್‌ಗಳ ಬಗ್ಗೆ ಅವರಿಗೆ ಸ್ಪಷ್ಟ ಅರಿವಿದೆ. ಇನ್ನು ಇಯಾನ್ ಮಾರ್ಗನ್ ವಿಚಾರಕ್ಕೆ ಬಂದರೆ, ಮುಂಬೈ ಇಂಡಿಯನ್ಸ್ ತಂಡದ ಅಗ್ರೆಸಿವ್ ಆಟದ ಶೈಲಿಗೆ ಅವರ ಕಾರ್ಯತಂತ್ರಗಳು ಹೇಳಿ ಮಾಡಿಸಿದಂತಿವೆ.

ಸೂಪರ್ ಸ್ಟಾರ್‌ಗಳಿಂದ ತುಂಬಿದ್ದ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ ಅನುಭವ ಮಾರ್ಗನ್ ಅವರಿಗಿದೆ. ಹೀಗಾಗಿ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಸ್ಟಾರ್ ಆಟಗಾರರಿರುವ ಮುಂಬೈ ಡ್ರೆಸ್ಸಿಂಗ್ ರೂಮ್ ಅನ್ನು ನಿಭಾಯಿಸಲು ಅವರು ಹೆಚ್ಚು ಸೂಕ್ತರಾಗಿದ್ದಾರೆ. 2023-2024ರ ಸೀಸನ್‌ಗಳಲ್ಲಿ ಮುಂಬೈ ಹೆಡ್ ಕೋಚ್ ಆಗಿ ಕೆಲಸ ಮಾಡಿದ್ದ ಮತ್ತು 2023ರಲ್ಲಿ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ದಿದ್ದ ಮಾರ್ಕ್ ಬೌಚರ್ ಹೆಸರು ಕೂಡ ಈ ಲಿಸ್ಟ್‌ನಲ್ಲಿದೆ. ಒಟ್ಟಿನಲ್ಲಿ ಈ ಐವರ ಪೈಕಿ ಯಾರು ಮುಂಬೈ ಇಂಡಿಯನ್ಸ್ ತಂಡದ ಹೆಡ್‌ ಕೋಚ್ ಆಗಬಹುದು ಎನ್ನುವುದನ್ನು ಕಮೆಂಟ್ ಮಾಡಿ.