ಐಪಿಎಲ್ 2026 ಸೀಸನ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಸೂಪರ್‌ಸ್ಟಾರ್ ಆಟಗಾರರನ್ನು ಸೇರಿಸಿ 'ಫ್ಲಾಪ್ XI' ತಂಡವನ್ನು ರಚಿಸಲಾಗಿದೆ. ರಿಷಭ್ ಪಂತ್ ನಾಯಕತ್ವದ ಈ ತಂಡದಲ್ಲಿ ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾರಂತಹ ದೊಡ್ಡ ಹೆಸರುಗಳು ಸೇರಿವೆ.

ಅಹಮದಾಬಾದ್: ಐಪಿಎಲ್ 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುವುದರೊಂದಿಗೆ ಮತ್ತೊಂದು ಐಪಿಎಲ್ ಸೀಸನ್‌ಗೆ ತೆರೆ ಬಿದ್ದಿದೆ. ಪ್ರತಿ ಸೀಸನ್‌ನಂತೆ ಈ ಬಾರಿಯೂ ದೊಡ್ಡ ಮಟ್ಟದ ನಿರೀಕ್ಷೆಗಳೊಂದಿಗೆ ಬಂದು, ಮೈದಾನದಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಸೂಪರ್‌ಸ್ಟಾರ್ ಆಟಗಾರರಿದ್ದಾರೆ. ಅಂತಹ ಆಟಗಾರರನ್ನು ಸೇರಿಸಿ ಒಂದು 'ಫ್ಲಾಪ್ XI' ತಂಡವನ್ನು ಮಾಡಿದರೆ ಅದರಲ್ಲಿ ಯಾರಿಗೆಲ್ಲಾ ಜಾಗ ಸಿಗುತ್ತೆ ಅಂತ ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಫ್ಲಾಪ್ ತಂಡದ ಓಪನರ್‌ ಆಗಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದ ಒತ್ತಡ ಹೊತ್ತು ಆಡಿದ ಋತುರಾಜ್ ಗಾಯಕ್ವಾಡ್ ಆಯ್ಕೆಯಾಗಿದ್ದಾರೆ. ಅವರ ಜೊತೆ ಕೋಲ್ಕತ್ತಾ ನಾಯಕ ಅಜಿಂಕ್ಯ ರಹಾನೆ ಇನ್ನೊಬ್ಬ ಆರಂಭಿಕ ಆಟಗಾರ. ಋತುರಾಜ್ ಈ ಸೀಸನ್‌ನಲ್ಲಿ 14 ಇನ್ನಿಂಗ್ಸ್‌ಗಳಿಂದ 28.08ರ ಸರಾಸರಿಯಲ್ಲಿ ಕೇವಲ 337 ರನ್ ಗಳಿಸಿದರು. ಇತ್ತ ಕೋಲ್ಕತಾ ನೈಟ್ ರೈಡರ್ಸ್ ನಾಯಕ ರಹಾನೆ 14 ಇನ್ನಿಂಗ್ಸ್‌ಗಳಲ್ಲಿ ಕೇವಲ 335 ರನ್ ಗಳಿಸಿ ಸಂಪೂರ್ಣ ನಿರಾಸೆ ಮೂಡಿಸಿದರು.

ಮೂರನೇ ಕ್ರಮಾಂಕದಲ್ಲಿ ಲಖನೌ ಸೂಪರ್ ಜೈಂಟ್ಸ್‌ನ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ಇದ್ದಾರೆ. ಪೂರನ್ 14 ಇನ್ನಿಂಗ್ಸ್‌ಗಳಿಂದ ಕೇವಲ 234 ರನ್ ಗಳಿಸಲಷ್ಟೇ ಶಕ್ತರಾದರು. ಅವರ ಸ್ಟ್ರೈಕ್ ರೇಟ್ ಕೂಡ 127.86ಕ್ಕೆ ಸೀಮಿತವಾಗಿತ್ತು. ಈ ಫ್ಲಾಪ್ XI ತಂಡದ ನಾಯಕನಾಗಿ, ಈ ಸೀಸನ್‌ನಲ್ಲಿ ಕೊನೆಯ ಸ್ಥಾನ ಪಡೆದ ಲಖನೌ ತಂಡದ ನಾಯಕ ರಿಷಭ್ ಪಂತ್ ಅವರನ್ನೇ ಆಯ್ಕೆ ಮಾಡಲಾಗಿದೆ. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕ್ಯಾಮರೂನ್ ಗ್ರೀನ್ ಮತ್ತು ಅಕ್ಷರ್ ಪಟೇಲ್ ಮಧ್ಯಮ ಕ್ರಮಾಂಕದಲ್ಲಿರುವ ಇತರ ಆಟಗಾರರು.

ಪ್ಲಾಫ್ ತಂಡಕ್ಕೆ ರಿಷಭ್ ಪಂತ್ ನಾಯಕ!

ರಿಷಭ್ ಪಂತ್ ಈ ಸೀಸನ್‌ನಲ್ಲಿ 13 ಇನ್ನಿಂಗ್ಸ್‌ಗಳಿಂದ ಕೇವಲ 312 ರನ್ ಗಳಿಸಿದರು. ಅವರ ನಾಯಕತ್ವದಲ್ಲಿ ಲಖನೌ ತಂಡ 14 ಪಂದ್ಯಗಳಲ್ಲಿ ಗೆದ್ದಿದ್ದು ಕೇವಲ 4ರಲ್ಲಿ ಮಾತ್ರ. ಮುಂಬೈ ಇಂಡಿಯನ್ಸ್‌ನ ಭರವಸೆಯ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಈ ಬಾರಿ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲರಾದರು. ಸೂರ್ಯಕುಮಾರ್ 13 ಇನ್ನಿಂಗ್ಸ್‌ಗಳಲ್ಲಿ 270 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 10 ಇನ್ನಿಂಗ್ಸ್‌ಗಳಲ್ಲಿ 206 ರನ್ ಗಳಿಸಿದರು. ಬೌಲಿಂಗ್‌ನಲ್ಲೂ ಪಾಂಡ್ಯ ಕೇವಲ 4 ವಿಕೆಟ್ ಪಡೆದರು.

ಐಪಿಎಲ್ 2026ರ ಹರಾಜಿನಲ್ಲಿ ಬರೋಬ್ಬರಿ 25.20 ಕೋಟಿ ರೂಪಾಯಿಗೆ ಕೋಲ್ಕತಾ ತಂಡ ಸೇರಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಈ ತಂಡದ ಪ್ರಮುಖ ಆಲ್‌ರೌಂಡರ್. ಬ್ಯಾಟಿಂಗ್‌ನಲ್ಲಿ 322 ರನ್ ಗಳಿಸಿದರೂ, ಬೌಲಿಂಗ್‌ನಲ್ಲಿ 10ಕ್ಕಿಂತ ಹೆಚ್ಚು ಎಕಾನಮಿಯಲ್ಲಿ ರನ್ ನೀಡಿ ಕೇವಲ 7 ವಿಕೆಟ್ ಪಡೆದರು. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಈ ತಂಡದ ಸ್ಪಿನ್ ಆಲ್‌ರೌಂಡರ್. ಅಕ್ಷರ್ 13 ಇನ್ನಿಂಗ್ಸ್‌ಗಳಲ್ಲಿ 11 ವಿಕೆಟ್ ಪಡೆದರೆ, ಬ್ಯಾಟಿಂಗ್‌ನಲ್ಲಿ 11 ಇನ್ನಿಂಗ್ಸ್‌ಗಳಿಂದ ಗಳಿಸಿದ್ದು ಕೇವಲ 173 ರನ್.

ಕೆಟ್ಟ ದಾಖಲೆಗೆ ಪಾತ್ರರಾದ ಜಸ್ಪ್ರೀತ್ ಬುಮ್ರಾ!

ಮುಂಬೈ ಇಂಡಿಯನ್ಸ್‌ನ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬುಮ್ರಾ ಕೂಡ ಈ ಫ್ಲಾಪ್ ತಂಡದಲ್ಲಿದ್ದಾರೆ. ಬುಮ್ರಾ 13 ಪಂದ್ಯಗಳಿಂದ ಕೇವಲ 4 ವಿಕೆಟ್ ಪಡೆದಿದ್ದು, 102.50ರ ಕೆಟ್ಟ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದು ಎಲ್ಲರಿಗೂ ಶಾಕ್ ನೀಡಿತ್ತು. ಮುಂಬೈನ ಮತ್ತೊಬ್ಬ ವಿಶ್ವದರ್ಜೆಯ ವೇಗಿ ಟ್ರೆಂಟ್ ಬೋಲ್ಟ್ ಕೂಡ ಪವರ್‌ಪ್ಲೇನಲ್ಲಿ ವಿಕೆಟ್ ಪಡೆಯಲು ಪರದಾಡಿದರು. ಅವರು 5 ಪಂದ್ಯಗಳಿಂದ ಕೇವಲ 2 ವಿಕೆಟ್ ಪಡೆದರು. 10 ಪಂದ್ಯಗಳಲ್ಲಿ 5 ವಿಕೆಟ್ ಪಡೆದ ಲಖನೌ ತಂಡದ ಲೆಗ್ ಸ್ಪಿನ್ನರ್ ದಿಗ್ವೇಷ್ ರಾಠಿ ಕೂಡ ಈ ತಂಡದಲ್ಲಿದ್ದಾರೆ.

**ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಗಳು**

ಸೂಪರ್‌ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ (283 ರನ್), ಆರ್‌ಸಿಬಿಯ ವಿಕೆಟ್ ಕೀಪರ್ ಜಿತೇಶ್ ಶರ್ಮಾ (116 ರನ್), ದಕ್ಷಿಣ ಆಫ್ರಿಕಾದ ಆಟಗಾರ ಡೆವಾಲ್ಡ್ ಬ್ರೆವಿಸ್ (151 ರನ್), ಒಂದೂ ವಿಕೆಟ್ ಪಡೆಯದ ವೇಗಿ ಹರ್ಷಲ್ ಪಟೇಲ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ (10 ವಿಕೆಟ್) ಫ್ಲಾಪ್ ಲಿಸ್ಟ್‌ನಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್‌ಗಳು.