ಐಪಿಎಲ್ ಇತಿಹಾಸದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿದ್ದರೂ, ಐದು ಪ್ರಮುಖ ದಾಖಲೆಗಳು ಇಂದಿಗೂ ಅಬಾಧಿತವಾಗಿವೆ. ಕ್ರಿಸ್ ಗೇಲ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಮತ್ತು ಅತಿ ವೇಗದ ಶತಕ, ವಿರಾಟ್ ಕೊಹ್ಲಿಯ ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ದಾಖಲೆಗಳು ಇದರಲ್ಲಿ ಸೇರಿವೆ.
ಬೆಂಗಳೂರು (ಜೂ.4): ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಮಹಾಸಮರದ 19ನೇ ಆವೃತ್ತಿಯು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇನ್ನು ಹತ್ತು ತಿಂಗಳುಗಳ ಬಳಿಕ 20ನೇ ಸೀಸನ್ ಆರಂಭವಾಗಲಿದೆ. ಈವರೆಗಿನ ಐಪಿಎಲ್ ಇತಿಹಾಸದಲ್ಲಿ ಹತ್ತು ಹಲವು ದಾಖಲೆಗಳು ಧೂಳೀಪಟವಾಗಿವೆ, ಆದರೆ ಕೆಲವು ಐತಿಹಾಸಿಕ ದಾಖಲೆಗಳು ಮಾತ್ರ ಇಂದಿಗೂ ಯಾರ ಕೈಗೂ ಸಿಗದೆ ಅಬಾಧಿತವಾಗಿ ಉಳಿದುಕೊಂಡಿವೆ. ಮುರಿಯಲು ಅಸಾಧ್ಯ ಎಂದೇ ಬಿಂಬಿತವಾಗಿರುವ ಅಂತಹ ಐದು ಮಹತ್ತರ ದಾಖಲೆಗಳ ವಿವರ ಇಲ್ಲಿದೆ.
ಐಪಿಎಲ್ 2026ರ ರೋಮಾಂಚಕ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಹೈವೋಲ್ಟೇಜ್ ಕದನದಲ್ಲಿ ಗುಜರಾತ್ ತಂಡವನ್ನು ಮಣಿಸಿದ ಆರ್‌ಸಿಬಿ, ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿದೆ. ಈ ಇಡೀ ಸೀಸನ್‌ನ ಒಟ್ಟು 74 ಪಂದ್ಯಗಳಲ್ಲಿ ಹಲವು ಹೊಸ ದಾಖಲೆಗಳು ಸೃಷ್ಟಿಯಾದವು. ಆದರೆ, ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್ ಜಗತ್ತನ್ನೇ ಆಳುತ್ತಿರುವ ಐದು ಪ್ರಮುಖ ದಾಖಲೆಗಳ ಹತ್ತಿರ ಸುಳಿಯಲು ಕೂಡ ಈ ಬಾರಿ ಯಾರಿಗೂ ಸಾಧ್ಯವಾಗಿಲ್ಲ.
ಕ್ರಿಸ್ ಗೇಲ್ ಸಿಡಿಲಬ್ಬರದ 175 ರನ್ (ಗರಿಷ್ಠ ವೈಯಕ್ತಿಕ ಸ್ಕೋರ್)
ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ವೈಯಕ್ತಿಕ ರನ್ ಗಳಿಸಿದ ಐತಿಹಾಸಿಕ ದಾಖಲೆ ಈ ಬಾರಿಯೂ ಅಬಾಧಿತವಾಗಿಯೇ ಉಳಿದಿದೆ. ವೆಸ್ಟ್ ಇಂಡೀಸ್‌ನ ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್ ಹೆಸರಿನಲ್ಲಿರುವ ಈ ದಾಖಲೆ ಕಳೆದ 14 ವರ್ಷಗಳಿಂದ ಅಲುಗಾಡಿಲ್ಲ. ಅವರು 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 66 ಎಸೆತಗಳಲ್ಲಿ ಅಜೇಯ 175 ರನ್ ಚಚ್ಚಿದ್ದರು. ಈ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಈ ದಾಖಲೆಯ ಹತ್ತಿರ ಹೋಗಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ, ಅವರು 152 ರನ್‌ಗಳಷ್ಟೇ ಗಳಿಸಲು ಶಕ್ತರಾದರು.
30 ಎಸೆತಗಳಲ್ಲಿ ಶತಕ (ಅತಿ ವೇಗದ ಸೆಂಚುರಿ)
ಐಪಿಎಲ್‌ನಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆ ಕೂಡ ಕ್ರಿಸ್ ಗೇಲ್ ಹೆಸರಲ್ಲೇ ಭದ್ರವಾಗಿದೆ. ಅವರು ಕೇವಲ 30 ಎಸೆತಗಳಲ್ಲಿ ಸೆಂಚುರಿ ಪೂರೈಸಿದ್ದರು. ಈ ಬಾರಿಯ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಈ ದಾಖಲೆಯನ್ನು ಧೂಳೀಪಟ ಮಾಡುವ ಸುವರ್ಣ ಅವಕಾಶ ಹೊಂದಿದ್ದರು. ಕೇವಲ 28 ಎಸೆತಗಳಲ್ಲಿ 97 ರನ್ ಗಳಿಸಿದ್ದ ವೈಭವ್, 29ನೇ ಎಸೆತದಲ್ಲೂ ಭರ್ಜರಿ ಶಾಟ್ ಬಾರಿಸಿದ್ದರು. ಆದರೆ ದುರದೃಷ್ಟವಶಾತ್ ಕ್ಯಾಚ್ ನೀಡಿ ಔಟಾದರು. ಆ ಚೆಂಡು ಬೌಂಡರಿ ದಾಟಿದ್ದರೆ ಗೇಲ್ ದಾಖಲೆ ಮುರಿಯುತ್ತಿತ್ತು. ಕೊನೆಗೆ ವೈಭವ್ 29 ಎಸೆತಗಳಲ್ಲಿ 97 ರನ್ ಗಳಿಸಿ ಔಟಾಗುವ ಮೂಲಕ ಈ ದಾಖಲೆ ಬದುಕುಳಿಯಿತು.
ಒಂದೇ ಸೀಸನ್‌ನಲ್ಲಿ 4 ಶತಕಗಳು (ಕಿಂಗ್ ಕೊಹ್ಲಿ-ಬಟ್ಲರ್ ಜಂಟಿ ದಾಖಲೆ)
ಐಪಿಎಲ್‌ನ ಒಂದೇ ಸೀಸನ್‌ನಲ್ಲಿ ಅತ್ಯಧಿಕ ಶತಕಗಳನ್ನು ಬಾರಿಸಿದ ದಾಖಲೆ ಜಂಟಿಯಾಗಿ ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್ ಹೆಸರಲ್ಲಿದೆ. ವಿರಾಟ್ ಕೊಹ್ಲಿ 2016ರ ಸೀಸನ್‌ನಲ್ಲಿ 4 ಶತಕಗಳನ್ನು ಸಿಡಿಸಿದ್ದರು. ನಂತರ 2022ರಲ್ಲಿ ಜೋಸ್ ಬಟ್ಲರ್ ಕೂಡ 4 ಶತಕ ಬಾರಿಸಿ ಈ ದಾಖಲೆಯನ್ನು ಸಮಗಟ್ಟಿದ್ದರು. ಈ ದಾಖಲೆಯನ್ನು ಬ್ರೇಕ್ ಮಾಡಬೇಕೆಂದರೆ ಒಬ್ಬ ಆಟಗಾರ ಒಂದೇ ಸೀಸನ್‌ನಲ್ಲಿ ಬರೋಬ್ಬರಿ 5 ಶತಕಗಳನ್ನು ಸಿಡಿಸಬೇಕಾಗುತ್ತದೆ, ಅದು ಈ ಬಾರಿಯೂ ಯಾರಿಂದಲೂ ಸಾಧ್ಯವಾಗಿಲ್ಲ.
ಒಂದೇ ಸೀಸನ್‌ನಲ್ಲಿ 973 ರನ್ (ಕೊಹ್ಲಿ ಕಿಂಗ್)
ಐಪಿಎಲ್ ಟೂರ್ನಿಯೊಂದರ ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಕೊಳ್ಳೆಹೊಡೆದ ದಾಖಲೆ ಇಂದಿಗೂ ‘ಕಿಂಗ್’ ವಿರಾಟ್ ಕೊಹ್ಲಿ ಹೆಸರಲ್ಲೇ ರಾಜ ಗಾಂಭೀರ್ಯದಿಂದ ಉಳಿದಿದೆ. 2016ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆಯ 973 ರನ್ ಗಳಿಸಿದ್ದರು. ಈ ಸೀಸನ್‌ನಲ್ಲಿ ಸ್ವತಃ ಕೊಹ್ಲಿ ಅವರಿಗೂ ಈ ಮೈಲಿಗಲ್ಲನ್ನು ಮರುಸೃಷ್ಟಿಸಲು ಸಾಧ್ಯವಾಗಲಿಲ್ಲ. ಅಷ್ಟೇ ಏಕೆ, ಭರ್ಜರಿ ಫಾರ್ಮ್‌ನಲ್ಲಿದ್ದ ಯುವ ಆಟಗಾರರಾದ ವೈಭವ್ ಸೂರ್ಯವಂಶಿ, ಶುಭ್‌ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಕೂಡ ಈ ದಾಖಲೆಯ ಹತ್ತಿರ ಸುಳಿಯಲು ಸಾಧ್ಯವಾಗಲಿಲ್ಲ.
ಒಂದೇ ಸೀಸನ್‌ನಲ್ಲಿ 32 ವಿಕೆಟ್ ಬೇಟೆ (ಬ್ರಾವೋ-ಹರ್ಷಲ್ ಪಟೇಲ್ ಜಂಟಿ ದಾಖಲೆ)
ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ದಾಖಲೆ ಡ್ವೇನ್ ಬ್ರಾವೋ ಮತ್ತು ಹರ್ಷಲ್ ಪಟೇಲ್ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೋ 2013ರ ಸೀಸನ್‌ನಲ್ಲಿ 32 ವಿಕೆಟ್ ಪಡೆದು ಇತಿಹಾಸ ಬರೆದಿದ್ದರು. ತದನಂತರ 2021ರಲ್ಲಿ ಭಾರತದ ಹರ್ಷಲ್ ಪಟೇಲ್ ಕೂಡ 32 ವಿಕೆಟ್ ಕಬಳಿಸಿ ಈ ದಾಖಲೆಯನ್ನು ಸಮಬಲಗೊಳಿಸಿದ್ದರು. ಆದರೆ ಈ ದಾಖಲೆಯನ್ನು ಸಂಪೂರ್ಣವಾಗಿ ಮುರಿದು 33 ವಿಕೆಟ್ ಪಡೆಯುವ ಸಾಹಸಕ್ಕೆ ಈ ಬಾರಿ ಯಾವೊಬ್ಬ ಬೌಲರ್ ಕೂಡ ಮುಂದಾಗಲಿಲ್ಲ. ಹೀಗಾಗಿ ಈ ಬೌಲಿಂಗ್ ದಾಖಲೆ ಕೂಡ ಅಬಾಧಿತವಾಗಿದೆ.

