ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ ಗೆಲುವು ಕಂಡಿದೆ.

ಬೆಂಗಳೂರು (ಮಾ.28): ಐಪಿಎಲ್ 2026ರ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಬ್ಬರಿಸಿದೆ. ತವರಿನ ಮೈದಾನವಾದ ಚಿನ್ನಸ್ವಾಮಿಯಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆರ್‌ಸಿಬಿ ಈ ಸೀಸನ್‌ನಲ್ಲಿ ವಿಜಯದ ನಗಾರಿ ಬಾರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೈದರಾಬಾದ್ ನೀಡಿದ 202 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿ ಫಿಲ್‌ ಸಾಲ್ಟ್‌ ವಿಕೆಟ್‌ಅನ್ನು ಬೇಗನೆ ಕಳೆದುಕೊಂಡು ಆಘಾತ ಎದುರಿಸಿತಾದರೂ, ಸ್ಟಾರ್ ಬ್ಯಾಟರ್‌ಗಳ ಅಬ್ಬರದಿಂದಾಗಿ ಗೆಲುವು ಸುಲಭಗೊಂಡಿತು. ಕಿಂಗ್ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಕ್ಲಾಸ್ ಆಟ ಪ್ರದರ್ಶಿಸಿ 38 ಎಸೆತಗಳಲ್ಲಿ 5 ಸಿಕ್ಸರ್ 5 ಬೌಂಡರಿ ಸಹಿತ ಅಜೇಯ 61 ರನ್ ಚಚ್ಚಿದರು.

ಇನ್ನೊಂದೆಡೆ ಆರ್‌ಸಿಬಿ ಪರ ಈ ಬಾರಿ ಕಣಕ್ಕಿಳಿದಿದ್ದ ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 26 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 7 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಸಿಡಿಸಿ 61 ರನ್ ಗಳಿಸುವ ಮೂಲಕ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ಪಾಟಿದಾರ್ ಆರ್ಭಟ, ಟಿಮ್ ಡೇವಿಡ್ ಸಾಥ್

ನಾಯಕ ರಜತ್ ಪಾಟಿದಾರ್ ಕೂಡ ಕೇವಲ 12 ಎಸೆತಗಳಲ್ಲಿ 31 ರನ್ (3 ಸಿಕ್ಸರ್, 2 ಬೌಂಡರಿ) ಸಿಡಿಸಿ ರನ್ ವೇಗವನ್ನು ಹೆಚ್ಚಿಸಿದರು. ಕೊನೆಯ ಹಂತದಲ್ಲಿ ಟಿಮ್ ಡೇವಿಡ್ (ಅಜೇಯ 16 ರನ್, 10 ಎಸೆತ) ತಾಳ್ಮೆಯ ಆಟವಾಡಿ ತಂಡವನ್ನು ಗೆಲುವಿನ ದಡ ತಲುಪಿಸಿದರು. ಆರ್‌ಸಿಬಿ ಇನ್ನೂ 26 ಎಸೆತ ಬಾಕಿ ಇರುವಂತೆಯೇ ಗೆಲುವು ಸಾಧಿಸಿತು.

ಸನ್‌ರೈಸರ್ಸ್ ಬೌಲಿಂಗ್ ವೈಫಲ್ಯ

ಹೈದರಾಬಾದ್ ಪರ ಡೇವಿಡ್ ಪೇನ್ 2 ವಿಕೆಟ್ ಪಡೆದರಾದರೂ, ಆರ್‌ಸಿಬಿ ಬ್ಯಾಟರ್‌ಗಳ ಅಬ್ಬರವನ್ನು ತಡೆಯಲು ಸಾಧ್ಯವಾಗಲಿಲ್ಲ. ಜಯದೇವ್ ಉನಾದ್ಕಟ್ ಮತ್ತು ಹರ್ಷ್ ದುಬೆ ತಲಾ ಒಂದು ವಿಕೆಟ್ ಪಡೆದರು. ಇಬ್ಬನಿ ಮತ್ತು ಮೈದಾನದ ಪರಿಸ್ಥಿತಿಯ ಲಾಭ ಪಡೆದ ಆರ್‌ಸಿಬಿ ಮೊದಲ ಪಂದ್ಯದಲ್ಲೇ ಪಾಯಿಂಟ್ಸ್ ಟೇಬಲ್‌ನಲ್ಲಿ ಶುಭಾರಂಭ ಮಾಡಿದೆ.

Scroll to load tweet…