ಐಪಿಎಲ್ 2026ರ ಮೊದಲ ಪಂದ್ಯದಲ್ಲಿ, ಆರಂಭಿಕ ಕುಸಿತದ ಹೊರತಾಗಿಯೂ ನಾಯಕ ಇಶಾನ್ ಕಿಶನ್ (80) ಮತ್ತು ಅನಿಕೇತ್ ವರ್ಮಾ (43) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರ್‌ಸಿಬಿ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ.

ಬೆಂಗಳೂರು (ಮಾ.28): ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಅದ್ಧೂರಿ ಆರಂಭಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಿದ್ದು, ಮೊದಲ ಪಂದ್ಯದಲ್ಲೇ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ರನ್ ಮಳೆ ಹರಿಸಿದೆ. ನಾಯಕ ಇಶಾನ್ ಕಿಶನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಎಸ್‌ಆರ್‌ಹೆಚ್ ತಂಡ ಆರ್‌ಸಿಬಿಗೆ 202 ರನ್‌ಗಳ ಸವಾಲಿನ ಗುರಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕೇವಲ 29 ರನ್ ಆಗುವಷ್ಟರಲ್ಲಿ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಒಂದಾದ ನಾಯಕ ಇಶಾನ್ ಕಿಶನ್ ಮತ್ತು ಹೆನ್ರಿಕ್ ಕ್ಲಾಸನ್ ಜೋಡಿ ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿತು. ಇವರಿಬ್ಬರು ಸೇರಿ 4ನೇ ವಿಕೆಟ್‌ಗೆ 97 ರನ್‌ಗಳ ಅಮೂಲ್ಯ ಜೊತೆಯಾಟವಾಡಿದರು. ಕಿಶನ್ ಕೇವಲ 38 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 80 ರನ್ ಚಚ್ಚಿ ತಂಡಕ್ಕೆ ಆಸರೆಯಾದರು. ಕ್ಲಾಸನ್ 31 ರನ್ ಕೊಡುಗೆ ನೀಡಿದರು.

ಕೊನೆಯಲ್ಲಿ ಅನಿಕೇತ್ ವರ್ಮಾ ಅಬ್ಬರ

ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಪತನವಾದರೂ, ಕೆಳ ಕ್ರಮಾಂಕದಲ್ಲಿ ಬಂದ ಅನಿಕೇತ್ ವರ್ಮಾ ಪಂದ್ಯದ ಗತಿಯನ್ನೇ ಬದಲಿಸಿದರು. ಕೇವಲ 18 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 43 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಎಸ್‌ಆರ್‌ಹೆಚ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿತು.

ಆರ್‌ಸಿಬಿ ಬೌಲಿಂಗ್ ಪ್ರದರ್ಶನ

ಬೆಂಗಳೂರು ಪರ ಬೌಲಿಂಗ್‌ನಲ್ಲಿ ಮಿಂಚಿದ ಜೇಕಬ್ ಡಫಿ ಮತ್ತು ರೊಮಾರಿಯೊ ಶೇಫರ್ಡ್ ತಲಾ 3 ವಿಕೆಟ್ ಪಡೆದು ಗಮನ ಸೆಳೆದರು. ತವರಿನ ಮೈದಾನದಲ್ಲಿ ಈ ಬೃಹತ್ ಮೊತ್ತವನ್ನು ಬೆನ್ನಟ್ಟಲು ಆರ್‌ಸಿಬಿ ಬ್ಯಾಟರ್‌ಗಳು ಈಗ ಸಜ್ಜಾಗಿದ್ದಾರೆ.