ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ, ರಜತ್ ಪಟಿದಾರ್ ಅವರ ವಿವಾದಾತ್ಮಕ ಕ್ಯಾಚ್‌ಗೆ ಅಂಪೈರ್ ಔಟ್ ನೀಡಿದರು. ಈ ತೀರ್ಪಿನಿಂದ ಕೆರಳಿದ ವಿರಾಟ್ ಕೊಹ್ಲಿ, ಡಗೌಟ್‌ನಿಂದ ಮೈದಾನದ ಅಂಚಿಗೆ ಬಂದು ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದ್ದು, ಈ ಘಟನೆ ಚರ್ಚೆಗೆ ಗ್ರಾಸವಾಗಿದೆ.

ಐಪಿಎಲ್ 2026ರ ಕಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ರಜತ್ ಪಟಿದಾರ್ ಅವರು ಹೊಡೆದ ಚೆಂಡನ್ನು ಕ್ಯಾಚ್ ಹಿಡಿದು ನೆಲಕ್ಕೆ ಮುಟ್ಟಿಸಿದರೂ ಅಂಪೈರ್ ಔಟ್ ಕೊಟ್ಟಿದ್ದಾರೆ. ಅಂಪೈರ್ ನೀಡಿದ ತೀರ್ಪಿನ ವಿರುದ್ಧ ವಿರಾಟ್ ಕೊಹ್ಲಿ ಮೈದಾನಕ್ಕಿಳಿದು ವಾದ ನಡೆಸಿದ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Add Asianetnews Kannada as a Preferred SourcegooglePreferred

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ರಜತ್ ಪಾಟಿದಾರ್ ಅವರ ವಿವಾದಾತ್ಮಕ ವಿಕೆಟ್‌ನಿಂದಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ಏನಿದು ವಿವಾದಾತ್ಮಕ ವಿಕೆಟ್ ಪ್ರಸಂಗ?

ಆರ್‌ಸಿಬಿ ಇನ್ನಿಂಗ್ಸ್‌ನ 8ನೇ ಓವರ್‌ನಲ್ಲಿ ಈ ಹೈ-ಡ್ರಾಮಾ ನಡೆಯಿತು. ಅರ್ಷದ್ ಖಾನ್ ಎಸೆದ ಚೆಂಡನ್ನು ರಜತ್ ಪಾಟಿದಾರ್ ಪುಲ್ ಶಾಟ್ ಹೊಡೆಯಲು ಪ್ರಯತ್ನಿಸಿದರು. ಆದರೆ, ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ಗಾಳಿಯಲ್ಲಿ ಹಾರಿತು. ಗುಜರಾತ್ ಟೈಟಾನ್ಸ್ ಆಟಗಾರ ಜೇಸನ್ ಹೋಲ್ಡರ್ ಓಡಿ ಬಂದು ಕ್ಯಾಚ್ ಹಿಡಿದರು. ಮೇಲ್ನೋಟಕ್ಕೆ ಇದು ಅದ್ಭುತ ಕ್ಯಾಚ್ ಎನಿಸಿದರೂ, ಹತ್ತಿರದ ರೀಪ್ಲೇಗಳನ್ನು ಗಮನಿಸಿದಾಗ ಚೆಂಡು ಅಥವಾ ಹೋಲ್ಡರ್ ಅವರ ಬೆರಳುಗಳು ನೆಲಕ್ಕೆ ತಾಗಿದಂತೆ ಭಾಸವಾಗುತ್ತಿತ್ತು.

ಮೈದಾನದಲ್ಲಿದ್ದ ಅಂಪೈರ್‌ಗಳು ತೀರ್ಪನ್ನು ಥರ್ಡ್ ಅಂಪೈರ್‌ಗೆ ವರ್ಗಾಯಿಸಿದರು. ಟಿವಿ ಅಂಪೈರ್ ವಿವಿಧ ಕೋನಗಳಿಂದ ರೀಪ್ಲೇಗಳನ್ನು ಪರಿಶೀಲಿಸಿದರೂ, ಅಂತಿಮವಾಗಿ 'ಔಟ್' ಎಂಬ ತೀರ್ಪು ನೀಡಿದರು. ಇದು ಆರ್‌ಸಿಬಿ ಕ್ಯಾಂಪ್‌ನಲ್ಲಿ ಸಂಚಲನ ಮೂಡಿಸಿತು.

ಡಗೌಟ್‌ನಿಂದ ಹೊರಬಂದ ವಿರಾಟ್ ಕೊಹ್ಲಿ:

ಆಗಷ್ಟೇ ಬ್ಯಾಟಿಂಗ್ ಮುಗಿಸಿ ಪೆವಿಲಿಯನ್ ತಲುಪಿದ್ದ ವಿರಾಟ್ ಕೊಹ್ಲಿ, ಟಿವಿ ಸ್ಕ್ರೀನ್‌ನಲ್ಲಿ ರೀಪ್ಲೇ ನೋಡಿ ಕೆಂಡಾಮಂಡಲವಾದರು. ಚೆಂಡು ಸ್ಪಷ್ಟವಾಗಿ ನೆಲಕ್ಕೆ ತಾಗುತ್ತಿದೆ ಎಂಬುದು ಕೊಹ್ಲಿ ವಾದವಾಗಿತ್ತು. ತಕ್ಷಣವೇ ಡಗೌಟ್‌ನಿಂದ ಹೊರಬಂದ ಕೊಹ್ಲಿ, ಬೌಂಡರಿ ಲೈನ್ ಹತ್ತಿರವಿದ್ದ ಅಂಪೈರ್‌ಗಳ ಬಳಿ ತೆರಳಿ ತೀವ್ರವಾಗಿ ಪ್ರಶ್ನಿಸಿದರು. ಥರ್ಡ್ ಅಂಪೈರ್ ಇಂತಹ ತಪ್ಪು ತೀರ್ಪು ಹೇಗೆ ನೀಡಲು ಸಾಧ್ಯ ಎಂದು ವಿರಾಟ್ ಆಕ್ರೋಶ ಹೊರಹಾಕುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ವಿರಾಟ್ ಅವರ ಈ ಆಕ್ರಮಣಕಾರಿ ವರ್ತನೆಯ ವಿಡಿಯೋ ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಐಸಿಸಿ ನಿಯಮ ಏನು ಹೇಳುತ್ತದೆ?

ಕ್ರಿಕೆಟ್ ನಿಯಮಗಳ ಪ್ರಕಾರ, ಫೀಲ್ಡರ್ ಕ್ಯಾಚ್ ಹಿಡಿಯುವಾಗ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಬೇಕು ಮತ್ತು ಚೆಂಡು ನೆಲಕ್ಕೆ ತಾಗಬಾರದು. ಆದರೆ, ಫೀಲ್ಡರ್‌ನ ಕೈಗಳು ಚೆಂಡಿನ ಅಡಿಯಲ್ಲಿರುವಾಗ ಅವು ನೆಲಕ್ಕೆ ತಾಗಿದರೂ ಅದನ್ನು ಲೀಗಲ್ ಕ್ಯಾಚ್ ಎನ್ನಲಾಗುತ್ತದೆ. ಇಲ್ಲಿ ಜೇಸನ್ ಹೋಲ್ಡರ್ ಬೆರಳುಗಳು ಚೆಂಡಿನ ಅಡಿ ಇತ್ತೇ ಅಥವಾ ಚೆಂಡು ನೇರವಾಗಿ ಹುಲ್ಲಿಗೆ ತಾಗಿತ್ತೇ ಎಂಬ ಗೊಂದಲವೇ ವಿವಾದಕ್ಕೆ ಮೂಲ ಕಾರಣ.

Scroll to load tweet…

ಆರ್‌ಸಿಬಿಗೆ ಹಿನ್ನಡೆ:

ವಿರಾಟ್ ಕೊಹ್ಲಿ ಶೀಘ್ರವಾಗಿ ಔಟಾದ ಬೆನ್ನಲ್ಲೇ ರಜತ್ ಪಾಟಿದಾರ್ ಕೂಡ ವಿವಾದಾತ್ಮಕವಾಗಿ ಪೆವಿಲಿಯನ್ ಸೇರಿದ್ದು ಆರ್‌ಸಿಬಿಗೆ ದೊಡ್ಡ ಹೊಡೆತ ನೀಡಿತು. ಪಂದ್ಯದ ನಿರ್ಣಾಯಕ ಹಂತದಲ್ಲಿ ಇಂತಹ ತೀರ್ಪುಗಳು ತಂಡದ ಮೊನೊಬಲವನ್ನು ಕುಗ್ಗಿಸುತ್ತವೆ ಎಂಬುದು ಅಭಿಮಾನಿಗಳ ಆಕ್ರೋಶ. ಸದ್ಯ ಈ ಘಟನೆಯ ಬಗ್ಗೆ ಐಪಿಎಲ್ ಸಮಿತಿ ಅಥವಾ ಮ್ಯಾಚ್ ರೆಫರಿ ಕೊಹ್ಲಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.