ಅಜೇಯ ಓಟದಲ್ಲಿರುವ ಪಂಜಾಬ್ ಕಿಂಗ್ಸ್, ಸ್ಥಿರತೆ ಇಲ್ಲದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಇನ್ನೊಂದು ಪಂದ್ಯದಲ್ಲಿ, ಸೇಡು ತೀರಿಸಿಕೊಳ್ಳಲು ರಾಜಸ್ಥಾನ ರಾಯಲ್ಸ್ ಕಾಯುತ್ತಿದ್ದು, ಸ್ಫೋಟಕ ಬ್ಯಾಟರ್‌ಗಳಾದ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ವರ್ಮಾ ಅವರ ಮೇಲೆ ಎಲ್ಲರ ಕಣ್ಣಿದೆ.
ನವದೆಹಲಿ: ಅಜೇಯ ಓಟ ಮುಂದುವರಿಸಿರುವ ಪಂಜಾಬ್ ಕಿಂಗ್ಸ್ ಲೀಗ್ ಹಂತ ಇನ್ನೂ ಅರ್ಧದಷ್ಟು ಬಾಕಿ ಇರುವಾಗಲೇ ಪ್ಲೇ-ಆಫ್‌ನತ್ತ ದಾಪುಗಾಲು ಇಡಲು ಕಾತರಿಸುತ್ತಿದೆ.
ಶನಿವಾರ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿರುವ ಪಂಜಾಬ್ ಮತ್ತೊಮ್ಮೆ ಅಮೋಘ ಪ್ರದರ್ಶನ ತೋರಲು ಎದುರು ನೋಡುತ್ತಿದೆ. ಈ ಆವೃತ್ತಿಯಲ್ಲಿ ಪಂಜಾಬ್, ಸ್ಥಿರತೆ ಹಾಗೂ ಆತ್ಮವಿಶ್ವಾಸ ಎರಡನ್ನೂ ಪ್ರದರ್ಶಿಸಿದ್ದು, ಇತ್ತೀಚೆಗಷ್ಟೇ ಈ ಆವೃತ್ತಿಯ ಅತ್ಯಧಿಕ ಮೊತ್ತ ದಾಖಲಿಸಿತ್ತು. ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಸಮತೋಲನ ಹೊಂದಿರುವ ಪಂಜಾಬ್ ಮತ್ತೊಮ್ಮೆ ಫೇವರಿಟ್ ಆಗಿ ಕಣಕ್ಕಿಳಿಯಲಿದೆ.
ಮತ್ತೊಂದೆಡೆ ಡೆಲ್ಲಿ, ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಸೋತಿದೆ. ಹಿಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ ದೊಡ್ಡ ಸೋಲಿಗೆ ಗುರಿಯಾಗಿತ್ತು. ತನ್ನ ಆಟದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಡೆಲ್ಲಿ ಮುಂದಿರುವ ಅತಿದೊಡ್ಡ ಸವಾಲು.
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ , ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಇಂದು ವೈಭವ್ vs ಅಭಿ: ಸಿಕ್ಸರ್ ಸುರಿಮಳೆ ನಿರೀಕ್ಷೆ
ಜೈಪುರ: ಶನಿವಾರ 2ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದ್ರಾಬಾದ್ ಮುಖಾಮುಖಿಯಾಗಲಿದ್ದು, ಈ ಪಂದ್ಯ ಭಾರತದ ಇಬ್ಬರು ಸ್ಫೋಟಕ ಆರಂಭಿಕ ಬ್ಯಾಟರ್‌ಗಳಾದ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ವರ್ಮಾ ನಡುವಿನ ಸೆಣಸಾಟ ಎಂದೇ ಬಿಂಬಿತವಾಗಿದೆ. ಇಬ್ಬರೂ ಈ ಆವೃತ್ತಿಯಲ್ಲಿ ಉತ್ತಮ ಲಯದಲ್ಲಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದಾರೆ.
ರಾಯಲ್ಸ್-ಸನ್‌ರೈಸರ್ಸ್ ಎರಡನೇ ಬಾರಿ ಮುಖಾಮುಖಿ
ಈ ತಂಡಗಳ ನಡುವೆ ಇದು 2ನೇ ಮುಖಾಮುಖಿ. ಏ.13ರಂದು ನಡೆದಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್ 57 ರನ್ ಗೆಲುವು ಸಾಧಿಸಿತ್ತು. ಪ್ರಫುಲ್ ಹಿಂಗೆ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದರು. ಈ ಪಂದ್ಯದಲ್ಲಿ ರಾಜಸ್ಥಾನ ಸೇಡಿಗೆ ಕಾಯುತ್ತಿದೆ. ರಾಜಸ್ಥಾನ 6ನೇ ಗೆಲುವಿನ ಮೇಲೆ ಕಣ್ಣಿಟ್ಟರೆ, ಸನ್‌ರೈಸರ್ಸ್ 5ನೇ ಜಯಕ್ಕಾಗಿ ಹಾತೊರೆಯುತ್ತಿದೆ.
ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್


