ಐಪಿಎಲ್ 2026ರ ಫೈನಲ್‌ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಸೆಣಸುತ್ತಿವೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕವಿದ್ದರೂ, ಮೀಸಲು ದಿನದ ವ್ಯವಸ್ಥೆ ಇದೆ. ಒಂದು ವೇಳೆ ಎರಡೂ ದಿನ ಆಟ ರದ್ದಾದರೆ, ಲೀಗ್ ಹಂತದ ಪ್ರದರ್ಶನದ ಆಧಾರದ ಮೇಲೆ ಆರ್‌ಸಿಬಿ ಚಾಂಪಿಯನ್ ಆಗಲಿದೆ.
ಅಹಮದಾಬಾದ್: ಐಪಿಎಲ್ 2026ರ ಕಿರೀಟಕ್ಕಾಗಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಡುತ್ತಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳು ತಮ್ಮ ಎರಡನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿವೆ. ಕಳೆದ ವರ್ಷ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಆರ್‌ಸಿಬಿ ತನ್ನ ಚೊಚ್ಚಲ ಕಪ್ ಗೆದ್ದಿತ್ತು. ಇನ್ನೊಂದೆಡೆ, 2022ರಲ್ಲಿ ಪದಾರ್ಪಣೆ ಮಾಡಿದ ಸೀಸನ್‌ನಲ್ಲೇ ಚಾಂಪಿಯನ್ ಆಗಿದ್ದ ಗುಜರಾತ್ ಟೈಟನ್ಸ್, ಐದು ವರ್ಷಗಳಲ್ಲಿ ಮೂರನೇ ಬಾರಿಗೆ ಫೈನಲ್ ಆಡುತ್ತಿದೆ.
ವಾಯುವ್ಯ ಭಾರತದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ, ಚಂಡೀಗಢದಿಂದ ಅಹಮದಾಬಾದ್‌ಗೆ ಬರಬೇಕಿದ್ದ ಗುಜರಾತ್ ತಂಡದ ಪ್ರಯಾಣ ತಡವಾಗಿತ್ತು. ಈ ಬೆಳವಣಿಗೆಯಿಂದಾಗಿ, ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ ಎಂಬ ಆತಂಕ ಆರ್‌ಸಿಬಿ ಮತ್ತು ಗುಜರಾತ್ ಅಭಿಮಾನಿಗಳಲ್ಲಿ ಶುರುವಾಗಿದೆ.
ಅಹಮದಾಬಾದ್ ಹವಾಮಾನ ವರದಿ
ಅಭಿಮಾನಿಗಳಿಗೆ ಖುಷಿ ಕೊಡುವ ವಿಚಾರವೆಂದರೆ, ಅಕ್ಯುವೆದರ್ (AccuWeather) ವರದಿ ಪ್ರಕಾರ ಇಂದು ಅಹಮದಾಬಾದ್‌ನಲ್ಲಿ ಮಳೆ ಬರುವ ಸಾಧ್ಯತೆ ಕೇವಲ 5% ಮಾತ್ರ. ಆಕಾಶ ಶೇ. 15ರಷ್ಟು ಮೋಡ ಕವಿದ ವಾತಾವರಣದಿಂದ ಕೂಡಿದ್ದರೂ, ಪಂದ್ಯಕ್ಕೆ ಸಂಪೂರ್ಣವಾಗಿ ಅಡ್ಡಿಯಾಗುವ ಸಾಧ್ಯತೆ ಇಲ್ಲ ಎಂದು ಸ್ಥಳೀಯ ಹವಾಮಾನ ವರದಿಗಳು ಹೇಳಿವೆ. ಆದರೂ, ಅನಿರೀಕ್ಷಿತವಾಗಿ ಮಳೆ ಬಂದರೆ ವಿಜೇತರನ್ನು ಹೇಗೆ ನಿರ್ಧರಿಸುತ್ತಾರೆ ನೋಡೋಣ.
ಮಳೆ ಬಂದರೆ 'ರಿಸರ್ವ್ ಡೇ' ಇದೆ
ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಿಗೆ ರಿಸರ್ವ್ ಡೇ ಇರಲಿಲ್ಲ. ಆದರೆ ಫೈನಲ್‌ಗಾಗಿ ಬಿಸಿಸಿಐ ಜೂನ್ 1, ಸೋಮವಾರವನ್ನು ರಿಸರ್ವ್ ದಿನವನ್ನಾಗಿ ನಿಗದಿಪಡಿಸಿದೆ. ಒಂದು ವೇಳೆ ಇಂದು ಪಂದ್ಯ ಆರಂಭವಾಗಿ ಮಳೆಯಿಂದ ನಿಂತರೆ, ಸೋಮವಾರದಂದು ಎಲ್ಲಿಗೆ ಆಟ ನಿಂತಿರುತ್ತದೋ ಅಲ್ಲಿಂದಲೇ ಪಂದ್ಯವನ್ನು ಮುಂದುವರಿಸಲಾಗುತ್ತದೆ.
ರಿಸರ್ವ್ ದಿನದಂದೂ ಆಟ ನಡೆಯದಿದ್ದರೆ ಯಾರು ಚಾಂಪಿಯನ್?
ಒಂದು ವೇಳೆ ರಿಸರ್ವ್ ದಿನವಾದ ಸೋಮವಾರವೂ ಮಳೆಯಿಂದಾಗಿ ಒಂದೂ ಎಸೆತವನ್ನು ಹಾಕಲು ಸಾಧ್ಯವಾಗದೆ ಪಂದ್ಯ ಸಂಪೂರ್ಣ ರದ್ದಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಯಾಕೆಂದರೆ, ಲೀಗ್ ಹಂತದ ಪಾಯಿಂಟ್ಸ್ ಪಟ್ಟಿಯಲ್ಲಿ ಗುಜರಾತ್ ಟೈಟನ್ಸ್‌ಗಿಂತ ಆರ್‌ಸಿಬಿ ಮೇಲಿನ ಸ್ಥಾನದಲ್ಲಿತ್ತು. ಇದೇ ನಿಯಮ ಆರ್‌ಸಿಬಿಗೆ ವರದಾನವಾಗಲಿದೆ. ಕ್ವಾಲಿಫೈಯರ್ 1ರಲ್ಲಿ ಗುಜರಾತ್ ತಂಡವನ್ನು 92 ರನ್‌ಗಳಿಂದ ಸೋಲಿಸಿ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಪ್ರವೇಶಿಸಿತ್ತು. ಆ ಪಂದ್ಯದಲ್ಲಿ ಸೋತಿದ್ದ ಗುಜರಾತ್, ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ ಫೈನಲ್‌ಗೆ ಅರ್ಹತೆ ಪಡೆದಿತ್ತು.
ರಜತ್ ಪಾಟಿದಾರ್ ಐತಿಹಾಸಿಕ ದಾಖಲೆ ಹೊಸ್ತಿಲಲ್ಲಿ
ಒಂದು ವೇಳೆ ಆರ್‌ಸಿಬಿ ಈ ಬಾರಿ ಕಪ್ ಗೆದ್ದರೆ, ನಾಯಕ ರಜತ್ ಪಾಟಿದಾರ್ ಒಂದು ಐತಿಹಾಸಿಕ ದಾಖಲೆ ಬರೆಯಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನ ಎಂ.ಎಸ್. ಧೋನಿ ಮತ್ತು ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ ನಂತರ, ಐಪಿಎಲ್‌ನಲ್ಲಿ ಸತತ ಎರಡು ಬಾರಿ ಕಪ್ ಗೆದ್ದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ಪಾಟಿದಾರ್ ಪಾತ್ರರಾಗಲಿದ್ದಾರೆ. ಸದ್ಯಕ್ಕೆ ಮಳೆಯ ದೊಡ್ಡ ಭೀತಿ ಇಲ್ಲದಿರುವುದರಿಂದ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪೂರ್ತಿ 20 ಓವರ್‌ಗಳ ಪಂದ್ಯವನ್ನು ನೋಡುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.


