ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್, ಆರ್‌ಸಿಬಿ ತಂಡಕ್ಕೆ ರೊಮಾರಿಯೋ ಶೆಪರ್ಡ್ ಅವರನ್ನು ಆಡಿಸದಂತೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಗುಜರಾತ್ ಟೈಟಾನ್ಸ್ ಗೆಲ್ಲಬೇಕಾದರೆ ಆರ್‌ಸಿಬಿಯ ಅಗ್ರ ಕ್ರಮಾಂಕವನ್ನು ಬೇಗನೆ ಔಟ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಅಹಮದಾಬಾದ್: ಐಪಿಎಲ್ ಫೈನಲ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಅಹಮದಾಬಾದ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್, ಆರ್‌ಸಿಬಿಗೆ ಒಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೋ ಶೆಪರ್ಡ್‌ನನ್ನು ಇಂದಿನ ಪಂದ್ಯದಲ್ಲಿ ಆಡಿಸಬಾರದು. ಒಂದು ವೇಳೆ ಆಡಿಸಿದರೂ, ಒಂದೇ ಒಂದು ಓವರ್ ಕೂಡ ಬೌಲಿಂಗ್ ಕೊಡಬಾರದು ಅಂತ ಶ್ರೀಕಾಂತ್ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಒತ್ತಾಯಿಸಿದ್ದಾರೆ. ಕಳೆದ ಸೀಸನ್‌ನಲ್ಲಿ 1.5 ಕೋಟಿ ರೂಪಾಯಿಗೆ ಆರ್‌ಸಿಬಿ ಸೇರಿದ್ದ ಶೆಪರ್ಡ್, 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬೌಲಿಂಗ್‌ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಶ್ರೀಕಾಂತ್ ಹೇಳಿದ್ದಾರೆ.

ಈ ಸೀಸನ್‌ನಲ್ಲಿ ಆರ್‌ಸಿಬಿ ಫೈನಲ್‌ಗೆ ಬಂದಿದ್ದರೂ, ಶೆಪರ್ಡ್ ತಂಡದ ಬೌಲಿಂಗ್‌ನ ಅತಿ ದುರ್ಬಲ ಕೊಂಡಿಯಾಗಿದ್ದರು. ಆಡಿದ 14 ಪಂದ್ಯಗಳಿಂದ ಈ ವಿಂಡೀಸ್ ಆಟಗಾರ ಪಡೆದಿದ್ದು ಕೇವಲ 7 ವಿಕೆಟ್ ಮಾತ್ರ. ಅವರ ಬೌಲಿಂಗ್ ಸರಾಸರಿ 42.57 ಆಗಿದ್ದರೆ, ಎಕಾನಮಿ ರೇಟ್ 12ರ ಸಮೀಪದಲ್ಲಿದೆ. ಇದೇ ಕಾರಣಕ್ಕೆ ಶ್ರೀಕಾಂತ್ ಆರ್‌ಸಿಬಿಗೆ ಎಚ್ಚರಿಕೆ ನೀಡಿದ್ದಾರೆ.

ಆರ್‌ಸಿಬಿ ಆಟಗಾರನನ್ನು ಗೇಲಿ ಮಾಡಿದ ಶ್ರೀಕಾಂತ್

"ಇವತ್ತಿನ ಮ್ಯಾಚ್‌ನಲ್ಲಿ ಆರ್‌ಸಿಬಿ ಸೋಲಬೇಕು ಅಂದ್ರೆ ಅದಕ್ಕೆ ಒಂದೇ ದಾರಿ. ರೊಮಾರಿಯೋ ಶೆಪರ್ಡ್ ಕೈಲಿ ಮೂರು ಓವರ್ ಬೌಲಿಂಗ್ ಮಾಡಿಸೋದು. ಅವನು ಮೂರು ಓವರ್ ಬೌಲ್ ಮಾಡಿದ್ರೆ, ಆರ್‌ಸಿಬಿ ಕೈಯಿಂದ ಮ್ಯಾಚ್ ಜಾರಿ ಹೋಗುತ್ತೆ. ಅವನಿಗೆ ಬೌಲಿಂಗ್ ಕೊಡಬಾರದು ಅಷ್ಟೇ ಅಲ್ಲ, ಫೈನಲ್‌ನ ಪ್ಲೇಯಿಂಗ್ ಇಲೆವೆನ್‌ನಲ್ಲೇ ಶೆಪರ್ಡ್‌ನನ್ನು ಸೇರಿಸಬಾರದು," ಎಂದು ಶ್ರೀಕಾಂತ್ ಖಡಕ್ಕಾಗಿ ಹೇಳಿದ್ದಾರೆ.

ಗಾಯದಿಂದಾಗಿ ಸೀಸನ್‌ನ ಬಹುತೇಕ ಪಂದ್ಯಗಳಿಂದ ಹೊರಗುಳಿದಿದ್ದ ಇಂಗ್ಲೆಂಡ್ ಓಪನರ್ ಫಿಲ್ ಸಾಲ್ಟ್ ಫಿಟ್ ಆಗಿ ತಂಡಕ್ಕೆ ಮರಳಿದರೂ, ಆರ್‌ಸಿಬಿಯ ಓಪನಿಂಗ್ ಜೋಡಿಯನ್ನು ಬದಲಿಸಬಾರದು ಎಂದು ಶ್ರೀಕಾಂತ್ ಸಲಹೆ ನೀಡಿದ್ದಾರೆ. ಸದ್ಯ ಓಪನರ್ ಆಗಿ ಮಿಂಚುತ್ತಿರುವ ವೆಂಕಟೇಶ್ ಅಯ್ಯರ್ ಅವರನ್ನೇ ಮುಂದುವರಿಸಬೇಕು. ಆಡಿದ 5 ಇನ್ನಿಂಗ್ಸ್‌ಗಳಲ್ಲಿ 2 ಬಾರಿ ಓಪನ್ ಮಾಡಿರುವ ಅಯ್ಯರ್, 184ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ 59ರ ಸರಾಸರಿಯೊಂದಿಗೆ ರನ್ ಗಳಿಸಿದ್ದಾರೆ.

ಬಲಿಷ್ಠವಾಗಿದೆ ಆರ್‌ಸಿಬಿ ಬ್ಯಾಟಿಂಗ್ ಲೈನ್‌ಅಪ್‌:

ಇನ್ನೊಂದೆಡೆ, ಗುಜರಾತ್ ಟೈಟಾನ್ಸ್ ಕಪ್ ಗೆಲ್ಲಬೇಕಾದರೆ, ಆರ್‌ಸಿಬಿಯ ಟಾಪ್ ಆರ್ಡರ್ ಬ್ಯಾಟಿಂಗ್ ಲೈನ್-ಅಪ್ ಅನ್ನು ಬೇಗನೆ ಮುರಿಯಬೇಕು ಎಂದು ಶ್ರೀಕಾಂತ್ ಕಿವಿಮಾತು ಹೇಳಿದ್ದಾರೆ. ವಿರಾಟ್ ಕೊಹ್ಲಿ (600 ರನ್), ದೇವದತ್ ಪಡಿಕ್ಕಲ್ (463 ರನ್) ಮತ್ತು ನಾಯಕ ರಜತ್ ಪಾಟಿದಾರ್ (486 ರನ್) ಆರ್‌ಸಿಬಿಯ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.

"ಗುಜರಾತ್‌ ಟೈಟಾನ್ಸ್ ಶತಾಯಗತಾಯ ಗೆಲ್ಲಬೇಕೆಂದಿದ್ದರೇ, ಅವರು ವಿರಾಟ್ ಕೊಹ್ಲಿ-ದೇವದತ್ ಪಡಿಕ್ಕಲ್ ಜೋಡಿಯನ್ನು ಬೇಗನೆ ಔಟ್ ಮಾಡಬೇಕು. ಕೊಹ್ಲಿ ಕೇವಲ 40 ರನ್ ಗಳಿಸಿದರೂ ಆರ್‌ಸಿಬಿ ಗೆಲ್ಲುತ್ತೆ. ಆದರೆ ಪಡಿಕ್ಕಲ್ ಜೊತೆಗಿನ ಅವರ ಜೊತೆಯಾಟ ಬಹಳ ಮುಖ್ಯ. ಇವರ ಜೊತೆ ರಜತ್ ಪಾಟಿದಾರ್ ಕೂಡ ಸೇರಿದಾಗ ಆರ್‌ಸಿಬಿ ಬ್ಯಾಟಿಂಗ್ ಇನ್ನಷ್ಟು ಬಲಿಷ್ಠವಾಗುತ್ತದೆ. ಈ ಮೂವರಲ್ಲಿ ಕನಿಷ್ಠ ಇಬ್ಬರನ್ನಾದರೂ ಆರಂಭದಲ್ಲೇ ಪೆವಿಲಿಯನ್‌ಗೆ ಕಳುಹಿಸಿದರೆ ಮಾತ್ರ ಗುಜರಾತ್‌ಗೆ ಪಂದ್ಯದಲ್ಲಿ ಹಿಡಿತ ಸಾಧಿಸಲು ಸಾಧ್ಯ. ಇದಕ್ಕಾಗಿ ಕಗಿಸೋ ರಬಾಡ ಮತ್ತು ಮೊಹಮ್ಮದ್ ಸಿರಾಜ್ ಆರಂಭದಲ್ಲಿಯೇ ಉತ್ತಮ ಸ್ಪೆಲ್‌ಗಳನ್ನು ಹಾಕಬೇಕಾಗುತ್ತದೆ," ಎಂದು ಶ್ರೀಕಾಂತ್ ಐಡಿಯಾ ಕೊಟ್ಟಿದ್ದಾರೆ.

ಸಂಭಾವ್ಯ ಆಟಗಾರರ ಪಟ್ಟಿ:

ಆರ್‌ಸಿಬಿ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್‌/ವೆಂಕಟೇಶ್ ವೆಂಕಟೇಶ್‌, ದೇವದತ್ ಪಡಿಕ್ಕಲ್‌, ರಜತ್‌ ಪಾಟೀದಾರ್(ನಾಯಕ), ಜಿತೇಶ್‌ ಶರ್ಮಾ, ರೊಮ್ಯಾರಿಯೋ ಶೆಫರ್ಡ್‌, ಟಿಮ್ ಡೇವಿಡ್‌, ಕೃನಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್, ಜೇಕಬ್ ಡಫಿ, ಜೋಶ್ ಹೇಜಲ್‌ವುಡ್‌, ರಸಿಕ್‌ ಸಲಾಂ ಧರ್.

ಗುಜರಾತ್‌: ಶುಭ್‌ಮನ್ ಗಿಲ್‌(ನಾಯಕ), ಸಾಯಿ ಸುದರ್ಶನ್‌, ಜೋಸ್ ಬಟ್ಲರ್‌, ವಾಷಿಂಗ್ಟನ್‌ ಸುಂದರ್, ಜೇಸನ್‌ ಹೋಲ್ಡರ್‌, ರಾಹುಲ್‌ ತೆವಾಟಿಯಾ, ನಿಶಾಂತ್‌ ಸಿಂಧು, ರಶೀದ್‌ ಖಾನ್, ಮೊಹಮ್ಮದ್ ಸಿರಾಜ್‌, ಪ್ರಸಿದ್ಧ್ ಕೃಷ್ಣ‌, ಸಾಯಿ ಕಿಶೋರ್‌, ಕಗಿಸೋ ರಬಾಡ.

ಪಂದ್ಯ ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್