ಐಪಿಎಲ್ ಪ್ರತಿ ಆವೃತ್ತಿಯಲ್ಲೂ ಪ್ರತಿಭಾನ್ವಿತ ಯುವ ಆಟಗಾರರಿಗೆ ವೇದಿಕೆ ಒದಗಿಸುತ್ತದೆ. ಈ ಬಾರಿ ರಾಬಿನ್ ಮಿನ್ಜ್, ಸೂರ್ಯಾನ್ಶ್ ಶೆಡ್ಗೆ, ವೈಭವ್ ಸೂರ್ಯವಂಶಿ, ಆಂಡ್ರೆ ಸಿದ್ಧಾರ್ಥ್, ಸ್ವಸ್ತಿಕ್ ಛಿಕಾರ, ಪ್ರಿಯಾನ್ಶ್ ಆರ್ಯ, ಮುಷೀರ್ ಖಾನ್, ಅನಿಕೇತ್ ವರ್ಮಾ, ಜೇಕಬ್ ಬೆತ್‌ಹೆಲ್, ಬೆವೊನ್ ಜೇಕಬ್ಸ್ ಸೇರಿದಂತೆ ಹಲವು ಯುವ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇವರ ಪ್ರದರ್ಶನದ ಮೇಲೆ ಎಲ್ಲರ ಕಣ್ಣಿದೆ.
- ಕನ್ನಡಪ್ರಭ ವಿಶೇಷ
ಅಸಾಧಾರಣ ಪ್ರತಿಭೆಗಳನ್ನು ಹುಡುಕಿ ಅವರಿಗೆ ಸೂಕ್ತ ವೇದಿಕೆ ಒದಗಿಸಿ, ಅವರನ್ನು ಜಾಗತಿಕ ಕ್ರಿಕೆಟ್‌ನಲ್ಲಿ ಸ್ಟಾರ್‌ಗಳನ್ನಾಗಿ ರೂಪಿಸುವುದು ಐಪಿಎಲ್‌ನ ವಿಶೇಷತೆ. ಕಳೆದ 17 ಆವೃತ್ತಿಗಳಲ್ಲಿ ಈ ರೀತಿ ಅದೆಷ್ಟೋ ಆಟಗಾರರು ಐಪಿಎಲ್ ಅನ್ನು ಸ್ಟ್ರಿಂಗ್ ಬೋರ್ಡ್ ಆಗಿ ಬಳಸಿಕೊಂಡು ಆಗಸಕ್ಕೆ ಜಿಗಿದಿದ್ದಾರೆ. ಈ ವರ್ಷದ ಐಪಿಎಲ್ ಕೂಡಾ ಹಲವು ಹೊಸ ತಾರೆಗಳನ್ನು ಸ್ವಾಗತಿಸಲು ಸಜ್ಜಾಗಿದೆ. ದೇಸಿ ಟಿ20 ಟೂರ್ನಿಗಳಲ್ಲಿ ಅಬ್ಬರಿಸಿ ಐಪಿಎಲ್ ಗುತ್ತಿಗೆ ಸಂಪಾದಿಸಿರುವ ಈ 10 ಯುವ ಸ್ಟಾರ್‌ಗಳ ಮೇಲೆ ಖಂಡಿತವಾಗಿಯೂ ಎಲ್ಲರೂ ಕಣ್ಣಿಡಬೇಕು. ಯಾರು ಆ ಯುವ ತಾರೆಯರು ಎನ್ನುವ ವಿವರ ಇಲ್ಲಿದೆ.
ರಾಬಿನ್ ಮಿನ್ಜ್, ಮುಂಬೈ
ಈತ ಜಾರ್ಖಂಡ್‌ನ ಜೂ.ಧೋನಿ ಅಂತಲೇ ಹೆಸರುವಾಸಿಯಾಗಿರುವ ಆಟಗಾರ. ಐಪಿಎಲ್‌ನಲ್ಲಿ ಆಡಲಿರುವ ಮೊದಲ ಬುಡಕಟ್ಟು ಜನಾಂಗದ ವ್ಯಕ್ತಿ ಕೂಡ ಹೌದು. ಸೆಕ್ಯೂರಿಟಿ ಗಾರ್ಡ್ ಮಗ ರಾಬಿನ್ 2024ರ ಐಪಿಎಲ್‌ನಲ್ಲೇ ಆಡಬೇಕಿತ್ತು. ಗುಜರಾತ್ ತಂಡ ಈತನನ್ನು ಬರೋಬ್ಬರಿ ₹3.60 ಕೋಟಿಗೆ ಖರೀದಿಸಿತ್ತು. ಆದರೆ ಐಪಿಎಲ್‌ಗೆ ಕೆಲವೇ ದಿನ ಬಾಕಿ ಇದ್ದಾಗ ಬೈಕ್ ಅಪಘಾತದಲ್ಲಿ ಮಿನ್ಜ್ ಗಾಯಗೊಂಡಿದ್ದರಿಂದ ಆಡುವ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ರಾಬಿನ್ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ. ಬೃಹತ್ ಸಿಕ್ಸರ್‌ಗಳನ್ನು ಬಾರಿಸಲು ಹೆಸರುವಾಸಿಯಾಗಿರುವ ಇವರು ಟಿ20ಯಲ್ಲಿ 181ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ.
ಸೂರ್ಯಾನ್ಶ್ ಶೆಡ್ಗೆ, ಪಂಜಾಬ್
2024ರ ದೇಸಿ ಋತುವಿನಲ್ಲಿ ಅತಿಹೆಚ್ಚು ಗಮನ ಸೆಳೆದ ಪ್ರತಿಭೆಗಳಲ್ಲಿ ಮುಂಬೈನ ಸೂರ್ಯಾನ್ಶ್ ಶೆಡ್ಗೆ ಸಹ ಒಬ್ಬರು. ಮುಷ್ತಾಕ್ ಅಲಿ ಟ್ರೋಫಿಯ ಫೈನಲ್‌ನಲ್ಲಿ ಮಧ್ಯಪ್ರದೇಶ ವಿರುದ್ಧ 175 ರನ್ ಗುರಿ ಬೆನ್ನತ್ತುತಿದ್ದ ಮುಂಬೈ, 129ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಶೆಡ್ಗೆ 15 ಎಸೆತದಲ್ಲಿ ಔಟಾಗದೆ 36 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಬೌಲಿಂಗ್‌ನಲ್ಲೂ ಕೊಡುಗೆ ನೀಡಬಲ್ಲ ಈತ, ವಿಜಯ್ ಹಜಾರೆ ಹಾಗೂ ರಣಜಿ ಟ್ರೋಫಿಯಲ್ಲೂ ಮಿಂಚಿ ತಮ್ಮಲ್ಲಿರುವ ಪ್ರತಿಭೆಯ ಅಗಾಧತೆಯನ್ನು ಪ್ರದರ್ಶಿಸಿದರು. ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ಶೆಡ್ಗೆ, ಐಪಿಎಲ್‌ನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ವೈಭವ್ ಸೂರ್ಯವಂಶಿ, ರಾಜಸ್ಥಾನ
13 ವರ್ಷ ವಯಸ್ಸಿನ ಬಾಲಕನೊಬ್ಬ ಐಪಿಎಲ್‌ಗೆ ಆಯ್ಕೆಯಾಗಿದ್ದಾನೆ ಎನ್ನುವುದನ್ನೇ ಅಗರಿಸಿಕೊಳ್ಳಲು ಅನೇಕರಿಗೆ ಇನ್ನೂ ಸಾಧ್ಯವಾಗಿಲ್ಲ. ಆದರೆ ಬಿಹಾರದ ವೈಭವ್ ಸೂರ್ಯವಂಶಿ, ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ₹1.1 ಕೋಟಿಗೆ ರಾಜಸ್ಥಾನ ತಂಡಕ್ಕೆ ಸೇರ್ಪಡೆಗೊಂಡಿರುವ ಇವರು, ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ಕೇವಲ 62 ಎಸೆತದಲ್ಲಿ 104 ರನ್ ಸಿಡಿಸಿ ದಾಖಲೆ ಬರೆದಿದ್ದರು. 12ನೇ ವಯಸ್ಸಿಗೇ ರಣಜಿ ಟ್ರೋಫಿಗೆ ಕಾಲಿಟ್ಟಿದ್ದ ವೈಭವ್, ಭಾರತ ಅಂಡರ್-19 ತಂಡಕ್ಕೂ ಆಯ್ಕೆಯಾಗಿ ಏಷ್ಯಾಕಪ್‌ನಲ್ಲಿ ಕೇವಲ 36 ಎಸೆತದಲ್ಲಿ 67 ರನ್ ಸಿಡಿಸಿದ್ದರು.
ಆ್ಯಂಡ್ರೆ ಸಿದ್ಧಾರ್ಥ್, ಸಿಎಸ್‌ಕೆ
ತಮಿಳುನಾಡು ಕ್ರಿಕೆಟ್‌ನಲ್ಲಿ ಸದ್ಯ ಭಾರೀ ಚರ್ಚೆಯಲ್ಲಿರುವ ಹೆಸರಿದು. ತಮಿಳುನಾಡಿನ ದಿಗ್ಗಜ ಕ್ರಿಕೆಟಿಗ ಎಸ್.ಶರತ್‌ರ ಸಹೋದರನ ಮಗ ಈ ಆ್ಯಂಡ್ರೆ ಸಿದ್ಧಾರ್ಥ್. ಕಳೆದ ರಣಜಿ ಟ್ರೋಫಿ ಋತುವಿನಲ್ಲಿ ಆಡಿದ 12 ಇನ್ನಿಂಗ್ಸ್‌ಗಳಲ್ಲಿ 612 ರನ್ ಸಿಡಿಸಿ ಗಮನ ಸೆಳೆದಿದ್ದರು. ಇನ್ನಷ್ಟೇ ಅಧಿಕೃತ ಟಿ20 ಪಂದ್ಯವನ್ನು ಆಡಬೇಕಿರುವ ಸಿದ್ಧಾರ್ಥ್, ಟಿಎನ್‌ಪಿಎಲ್‌ನಲ್ಲಿ ಮಿಂಚು ಹರಿಸಿದ್ದರು. ದಿಗ್ಗಜ ಆಲ್ರೌಂಡರ್ ಆರ್.ಅಶ್ವಿನ್ ಸೇರಿ ಅನೇಕರು ಈತ ಭವಿಷ್ಯದ ಸೂಪರ್ ಸ್ಟಾರ್ ಎಂದು ಅಭಿಪ್ರಾಯಿಸಿದ್ದಾರೆ.
ಸ್ವಸ್ತಿಕ್ ಛಿಕಾರ, ಆರ್‌ಸಿಬಿ
ಆರ್‌ಸಿಬಿ ಈ ಬಾರಿ ಕೆಲ ಅತ್ಯುತ್ತಮ ಪ್ರತಿಭೆಗಳನ್ನು ಹುಡುಕಿ ಕರೆತಂದಿದ್ದು, ಅದರಲ್ಲಿ ಉ.ಪ್ರದೇಶದ ಸ್ವಸ್ತಿಕ್ ಛಿಕಾರ ಕೂಡ ಒಬ್ಬರು. 19 ವರ್ಷದ ಈ ಬಲಗೈ ಬ್ಯಾಟರ್ ಎಂಥಾ ಅಸಾಧಾರಣ ಬಲ ಹೊಂದಿದ್ದಾರೆ ಎನ್ನುವುದನ್ನು ಯುಪಿ ಟಿ20 ಲೀಗ್‌ನಲ್ಲಿ ಇವರ ಬ್ಯಾಟಿಂಗ್ ನೋಡಿದವರನ್ನು ಕೇಳಬೇಕು. ಲಖನೌನ ಏಕನಾ ಕ್ರೀಡಾಂಗಣದಲ್ಲಿ 73 ಮೀ. ದೂರದ ಬೌಂಡರಿಗಳಿದ್ದು, ಈತನ ಬ್ಯಾಟ್‌ನಿಂದ ಚಿಮ್ಮುತ್ತಿದ್ದ ಚೆಂಡು ಸಲೀಸಾಗಿ ಬೌಂಡರಿ ದಾಟುತ್ತಿತ್ತು. 12 ಪಂದ್ಯಗಳಲ್ಲಿ 499 ರನ್ ಸಿಡಿಸಿದ್ದ ಸ್ವಸ್ತಿಕ್, ಬರೋಬ್ಬರಿ 47 ಸಿಕ್ಸರ್ ಚಚ್ಚಿದ್ದರು. ಈತನಿಗೆ ಆರ್‌ಸಿಬಿ ಅವಕಾಶ ಕೊಟ್ಟರೆ, ಚೆಂಡನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಕ್ಕೆ ಕಳುಹಿಸಬಹುದು.
ಪ್ರಿಯಾನ್ಶ್ ಆರ್ಯಾ, ಪಂಜಾಬ್
ದೆಹಲಿಯ ಈ 24 ವರ್ಷದ ಬ್ಯಾಟರ್‌ಗಾಗಿ ಹರಾಜಿನಲ್ಲಿ ಭಾರಿ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ₹3.8 ಕೋಟಿ ಕೊಟ್ಟು ಪ್ರಿಯಾನ್ಶ್ ಆರ್ಯಾ ಅವರನ್ನು ಪಂಜಾಬ್ ಕಿಂಗ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಪ್ರಿಯಾನ್ಶ್ 10 ಪಂದ್ಯಗಳಲ್ಲಿ 608 ರನ್ ಪೇರಿಸಿದ್ದರು. ಸೌತ್ ಡೆಲ್ಲಿ ಪರ ಆಡಿದ್ದ ಪ್ರಿಯಾನ್ಶ್, ನಾರ್ಥ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ
ಓವರಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಮುಷ್ತಾಕ್ ಅಲಿ ಟಿ20ಯಲ್ಲಿ ಆರ್ಯಾ, ಡೆಲ್ಲಿ ಪರ 7 ಇನ್ನಿಂಗ್ಸ್‌ಗಳಲ್ಲಿ 167ರ ಸ್ಟ್ರೈಕ್‌ರೇಟ್‌ನಲ್ಲಿ 222 ರನ್ ಚಚ್ಚಿದ್ದರು.
ಮುಷೀರ್ ಖಾನ್, ಪಂಜಾಬ್
ಸರ್ಫರಾಜ್ ಖಾನ್‌ರ ಕಿರಿಯ ಸಹೋದರ ಮುಷೀರ್ ಖಾನ್, ದೇಸಿ ಕ್ರಿಕೆಟ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ಬಳಿಕ ಇದೀಗ ಐಪಿಎಲ್‌ನಲ್ಲೂ ಮಿಂಚಲು ಸಿದ್ಧರಾಗಿದ್ದಾರೆ. ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಅಮೋಘ ಆಲ್ರೌಂಡ್ ಪ್ರದರ್ಶನ ತೋರಿದ್ದ ಮುಷೀರ್, ದೇಸಿ ಟಿ20 ಟೂರ್ನಿಗಳಲ್ಲೂ ಮಿಂಚಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಆಡಬಲ್ಲ ಆಟಗಾರ ಈತ. ಅತ್ಯುತ್ತಮ ಕ್ಷೇತ್ರರಕ್ಷಕ ಎನ್ನುವುದು ಮುಷೀರ್‌ರ ಪ್ಲಸ್ ಪಾಯಿಂಟ್. ಪಂಜಾಬ್ ಕಿಂಗ್ಸ್ ತಂಡ ಈತನಿಗೆ ಅವಕಾಶ ಕಲ್ಪಿಸುತ್ತಾ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.
ಅನಿಕೇತ್ ವರ್ಮಾ, ಸನ್‌ರೈಸರ್ಸ್
ಮಧ್ಯಪ್ರದೇಶದ ಈ ಸ್ಫೋಟಕ ಆಟಗಾರ, ಬೃಹತ್ ಸಿಕ್ಸರ್‌ಗಳನ್ನು ಬಾರಿಸುವುದಕ್ಕೆ ಹೆಸರುವಾಸಿ. ಇನ್ನೂ ಅಧಿಕೃತ ಟಿ20ಗಳಲ್ಲಿ ಆಡದಿದ್ದರೂ, ಭಾರತೀಯ ದೇಸಿ ಕ್ರಿಕೆಟ್‌ನಲ್ಲಿ ಈತನ ಹೆಸರು ಭಾರೀ ಚಾಲ್ತಿಯಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್‌ನ ತಂಡದೊಳಗಿನ ಅಭ್ಯಾಸ ಪಂದ್ಯದಲ್ಲಿ 16 ಎಸೆತದಲ್ಲಿ 48 ರನ್ ಸಿಡಿಸಿ, ಈಗಾಗಲೇ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಸನ್‌ರೈಸರ್ಸ್‌ನ ಬ್ಯಾಟಿಂಗ್ ಪಡೆಗೆ ಮತ್ತೊಂದು ಸಿಡಿಗುಂಡು ಸೇರ್ಪಡೆಯಾಗಿರುವುದರಿಂದ ಎದುರಾಳಿಗಳಲ್ಲಿ ಇನ್ನಷ್ಟು ನಡುಕ ಹುಟ್ಟಿಸಿರುವುದು ಸುಳ್ಳಲ್ಲ.
ಜೇಕಬ್ ಬೆತ್‌ಹೆಲ್, ಆರ್‌ಸಿಬಿ
ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ಈ ಆವೃತ್ತಿಗೆ ಉಳಿಸಿಕೊಳ್ಳದೆ ಇರಲು ಆರ್‌ಸಿಬಿ ನಿರ್ಧರಿಸಿದಾಗ, ಅವರ ಬದಲಿಗೆ ಯಾರನ್ನು ಖರೀದಿ ಮಾಡಬಹುದು ಎಂದು ಯೋಚಿಸುತ್ತಿದ್ದಾಗ ತಂಡಕ್ಕೆ ಸಿಕ್ಕ ಉತ್ತರವೇ ಜೇಕಬ್ ಬೆತ್‌ಹೆಲ್. ಇಂಗ್ಲೆಂಡ್‌ನ ಈ ಆಲ್ರೌಂಡರ್, ಮ್ಯಾಕ್ಸ್‌ವೆಲ್ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಪ್ರತಿಭೆ. ಅಂ.ರಾ. ಟಿ20ಯಲ್ಲಿ ಇವರ ಸ್ಟ್ರೈಕ್‌ರೇಟ್ 167.96 ಇದೆ. ಯಾವುದೇ ಕ್ರಮಾಂಕದಲ್ಲಿ ಆಡಬಲ್ಲ ಆಟಗಾರ. ಇಂಗ್ಲೆಂಡ್‌ನ ಟಿ20 ಬ್ಲ್ಯಾಸ್ಟ್, ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್‌ಗಳಲ್ಲಿ ಆಡಿದ ಅನುಭವವೂ ಇದೆ. ಆರ್‌ಸಿಬಿ ಅಭಿಮಾನಿಗಳು ಬೆತ್‌ಹೆಲ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಬೆವೊನ್ ಜೇಕಬ್ಸ್, ಮುಂಬೈ
ಆಸ್ಟ್ರೇಲಿಯಾದ ಕ್ಲಬ್ ಕ್ರಿಕೆಟ್‌ನಲ್ಲಿ 40 ಎಸೆತದಲ್ಲಿ 100 ರನ್ ಸಿಡಿಸಿದ್ದ ನ್ಯೂಜಿಲೆಂಡ್‌ನ 22 ವರ್ಷದ ಬೆವೊನ್ ಜೇಕಬ್ಸ್ ಮೇಲೆ ಬಹಳಷ್ಟು ಐಪಿಎಲ್ ತಂಡಗಳು ಕಣ್ಣಿಟ್ಟಿದ್ದವು. ಹರಾಜಿನಲ್ಲಿ ಈತನನ್ನು ಮುಂಬೈ ಇಂಡಿಯನ್ಸ್ ಖರೀದಿಸಿತು. ಟಿಮ್ ಡೇವಿಡ್ ಸೇರಿ ಕೆಲ ಪ್ರಮುಖ ವಿದೇಶಿ ಬ್ಯಾಟರ್‌ಗಳನ್ನು ಕೈಬಿಟ್ಟಿರುವ ಮುಂಬೈಗೆ ಆಕ್ರಮಣಕಾರಿ ವಿದೇಶಿ ಬ್ಯಾಟರ್‌ನ ಅವಶ್ಯಕತೆ ಇದೆ. ಆ ಜಾಗ ಜೇಕಬ್ಸ್‌ದ್ದಾಗಬಹುದು. ನ್ಯೂಜಿಲೆಂಡ್ ದೇಸಿ ಟೂರ್ನಿಗಳಾದ ಸೂಪರ್ ಸ್ಮ್ಯಾಶ್ ಹಾಗೂ ಫೋರ್ಡ್ ಟ್ರೋಫಿಯಲ್ಲಿ ಜೇಕಬ್ಸ್ ಸ್ಥಿರ ಪ್ರದರ್ಶನ ತೋರಿದ್ದಾರೆ.
