ಭಾರತ-ಪಾಕಿಸ್ತಾನ ಯುದ್ಧಭೀತಿಯಿಂದ ಸ್ಥಗಿತಗೊಂಡಿದ್ದ ಐಪಿಎಲ್ ೨೦೨೫ ಪಂದ್ಯಗಳು ಮತ್ತೆ ಆರಂಭವಾಗಲಿವೆ. ಕದನ ವಿರಾಮದ ನಂತರ ಬಿಸಿಸಿಐ ಮೇ ೩೦ ರಂದು ಫೈನಲ್ ನಡೆಸಲು ಯೋಜಿಸಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ನಲ್ಲಿ ಉಳಿದ ೧೬ ಪಂದ್ಯಗಳು ನಡೆಯಲಿವೆ. ಏಳು ತಂಡಗಳು ಪ್ಲೇ ಆಫ್ ನಾಲ್ಕು ಸ್ಥಾನಗಳಿಗೆ ಪೈಪೋಟಿ ನಡೆಸುತ್ತಿವೆ.

ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ದಭೀತಿಯ ಹಿನ್ನೆಲೆಯಲ್ಲಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.ಇದೀಗ ತಾತ್ಕಾಲಿಕ ಕದನ ವಿರಾಮ ಘೋಷಣೆಯಾದ ಹಿನ್ನೆಲೆಯಲ್ಲಿ ಬೆನ್ನಲ್ಲೇ ಇದೀಗ ಬಿಸಿಸಿಐ, 18ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಇನ್ನುಳಿದ ಪಂದ್ಯಗಳನ್ನು ಪುನಾರಂಭ ಮಾಡಲು ಮುಂದಾಗಿದೆ. ಕೆಲವು ಮಾಧ್ಯಮಗಳ ವರದಿಯ ಪ್ರಕಾರ, ಇಂದೇ ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಹೊರಬೀಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇನ್ನು ಈ ಮೊದಲು 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವು ಈ ಮೊದಲು ಮೇ 25ಕ್ಕೆ ನಿಗದಿಯಾಗಿತ್ತು. ಆದರೆ ಹೊಸ ವೇಳಾಪಟ್ಟಿಯ ಪ್ರಕಾರ ಐಪಿಎಲ್ ಫೈನಲ್ ಪಂದ್ಯವು ಮೇ 30ರಂದು ಆಯೋಜಿಸುವ ಸಾಧ್ಯತೆಯಿದೆ.

ಕೆಲವು ಮಾಧ್ಯಮಗಳ ವರದಿಯ ಪ್ರಕಾರ, 18ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮೇ 30ರವರೆಗೆ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗುತ್ತಿದೆ. ಇದೇ ಮೇ 16ರಿಂದ ಇನ್ನುಳಿದ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಆಲೋಚನೆ ಮಾಡಿದೆ ಎನ್ನಲಾಗುತ್ತಿದ್ದು, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‌ನಲ್ಲಿ ಪಂದ್ಯಾವಳಿಗಳನ್ನು ಆಯೋಜಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಐಪಿಎಲ್ 2025ರ ಅಂತಿಮ ಹಂತಕ್ಕೆ ಲೀಗ್ ಹಂತದಲ್ಲಿ 12 ಪಂದ್ಯಗಳು ಬಾಕಿ ಉಳಿದಿವೆ. ಇನ್ನು ಮೂರು ಪ್ಲೇ ಆಫ್ ಪಂದ್ಯಗಳು ಹಾಗೂ ಒಂದು ಫೈನಲ್ ಸೇರಿ ಒಟ್ಟು 16 ಪಂದ್ಯಗಳು ನಡೆಯಬೇಕಿದೆ. 58 ಲೀಗ್ ಪಂದ್ಯಗಳ ಮುಕ್ತಾಯದ ನಂತರ, ಗುಜರಾತ್ ಟೈಟಾನ್ಸ್, ಆರ್‌ಸಿಬಿ, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮುಂಚೂಣಿಯಲ್ಲಿವೆ. ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಉಳಿದ 3 ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್‌ಗೆ ಅರ್ಹತೆ ಪಡೆಯಬಹುದು. ಆರ್‌ಸಿಬಿ, ಗುಜರಾತ್ ಹಾಗೂ ಮುಂಬೈ ಬಹುತೇಕ ಪ್ಲೇ ಹೊಸ್ತಿಲಲ್ಲಿವೆ. ಈಗಾಗಲೇ ಸನ್‌ರೈಸರ್ಸ್‌ ಹೈದರಾಬಾದ್‌, ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದ್ದು, ಇನ್ನುಳಿದ 7 ತಂಡಗಳು 4 ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ.

ದಾಳಿ ಭೀತಿ: ಐಪಿಎಲ್‌ ಪಂದ್ಯ ಅರ್ಧಕ್ಕೇ ರದ್ದು!

ಧರ್ಮಶಾಲಾ: ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಪರಿಸ್ಥಿತಿ ತಲೆದೋರಿರುವ ಬೆನ್ನಲ್ಲೇ ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಐಪಿಎಲ್‌ ಪಂದ್ಯ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಪಾಕಿಸ್ತಾನ ಭಾರತದ ಮೇಲೆ ದಾಳಿ ಆರಂಭಿಸಿರುವ ಕಾರಣ, ಭಾರತೀಯ ಸೇನೆಯ ಸೂಚನೆ ಮೇರೆಗೆ ಪಂದ್ಯ ರದ್ದುಗೊಳಿಸಲಾಗಿತ್ತು.

ಕಳೆದ ಗುರುವಾರ ಪಂಜಾಬ್ ಕಿಂಗ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಪಂದ್ಯ ನಿಗದಿಯಾಗಿತ್ತು. ಮಳೆ ಕಾರಣಕ್ಕೆ ಪಂದ್ಯ 1 ಗಂಟೆ ತಡವಾಗಿ ಆರಂಭಗೊಂಡಿತು. ಮೊದಲು ಬ್ಯಾಟ್‌ ಮಾಡಿದ್ದ 10.1 ಓವರ್‌ಗಳಲ್ಲಿ 1 ವಿಕೆಟ್‌ಗೆ 122 ರನ್‌ ಗಳಿಸಿತ್ತು. ಈ ನಡುವೆ ವಾಯು ದಾಳಿ ಭೀತಿ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ಲೈಟ್ಸ್‌ ಆಫ್‌: ಕ್ರೀಡಾಂಗಣದ ಲೈಟ್‌ಗಳು ಕೈಕೊಟ್ಟ ಕಾರಣ ಪಂದ್ಯ ನಿಲ್ಲಿಸಲಾಗಿದೆ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ ವಾಯು ದಾಳಿ ಮುನ್ನೆಚ್ಚರಿಕೆ ಕ್ರಮವಾಗಿ ಕ್ರೀಡಾಂಗಣದ ಲೈಟ್‌ಗಳನ್ನು ಬಂದ್‌ ಮಾಡಲಾಗಿತ್ತು. ಕೆಲ ನಿಮಿಷಗಳ ಬಳಿಕ ಪಂದ್ಯ ಸ್ಥಗಿತಗೊಳಿಸಿದ್ದಾಗಿ ಆಯೋಜಕರು ಮಾಹಿತಿ ನೀಡಿದ್ದರು.

ಕ್ಷಣಾರ್ಧದಲ್ಲೆ ಕ್ರೀಡಾಂಗಣ ಖಾಲಿ

ಸೇನೆಯ ಸೂಚನೆ ಹಿನ್ನೆಲೆಯಲ್ಲಿ ಪಂದ್ಯ ಸ್ಥಗಿತಗೊಂಡ ಕೆಲ ನಿಮಿಷಗಳಲ್ಲೇ ಕ್ರೀಡಾಂಗಣವನ್ನು ಖಾಲಿ ಮಾಡಲಾಯಿತು. ಭದ್ರತಾ ಸಿಬ್ಬಂದಿ ಸ್ಟ್ಯಾಂಡ್‌ಗೆ ಆಗಮಿಸಿ ಪ್ರೇಕ್ಷಕರನ್ನು ಹೊರ ಹೋಗಲು ಸೂಚಿಸಿದರು. ಆಟಗಾರರನ್ನು ಕೂಡಾ ತಕ್ಷಣವೇ ಬೇರೆಡೆಗೆ ಕರೆದೊಯ್ಯಲಾಯಿತು.