ಐಪಿಎಲ್‌ನಲ್ಲಿ ತವರಿನಾಚೆ 4 ಪಂದ್ಯಗಳಲ್ಲಿ ಗೆದ್ದಿರುವ ಆರ್‌ಸಿಬಿಗೆ ತವರಿನಲ್ಲಿ ಇನ್ನೂ ಗೆಲುವು ಸಿಕ್ಕಿಲ್ಲ. ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಯಲಿದೆ. ಸ್ಪಿನ್ ಬೌಲರ್‌ಗಳಿಂದ ಆರ್‌ಸಿಬಿ ಬ್ಯಾಟರ್‌ಗಳಿಗೆ ಸವಾಲು ಎದುರಾಗಲಿದೆ.
ಬೆಂಗಳೂರು: ಈ ಸಲ ಐಪಿಎಲ್‌ನಲ್ಲಿ ತವರಿನಾಚೆ ಆಡಿರುವ 4 ಪಂದ್ಯಗಳಲ್ಲೂ ಅಭೂತಪೂರ್ವ ಗೆಲುವು ಸಾಧಿಸಿರುವ ಆರ್‌ಸಿಬಿಗೆ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನೂ ಗೆಲುವು ಲಭಿಸಿಲ್ಲ. ಇಲ್ಲಿ ಆಡಿರುವ 2 ಪಂದ್ಯಗಳಲ್ಲೂ ಸೋತಿರುವ ಆರ್‌ಸಿಬಿ, ಶುಕ್ರವಾರ ಪಂಜಾಬ್ ಕಿಂಗ್ ವಿರುದ್ಧ ಸೆಣಸಾಡಲಿದೆ.
ಉಭಯ ತಂಡಗಳೂ ಆಡಿರುವ 6 ಪಂದ್ಯಗಳಲ್ಲಿ ತಲಾ 4 ಗೆದ್ದಿದ್ದು, 5ನೇ ಜಯಕ್ಕಾಗಿ ತೀವ್ರ ಪೈಪೋಟಿ ನಡೆಸಲಿವೆ. ಎಲ್ಲಾ ಆವೃತ್ತಿಗಳಿಗಿಂತಲೂ ಈ ಬಾರಿ ಬಲಿಷ್ಠವಾಗಿ ತೋರುತ್ತಿದೆ. ಆದರೆ ಸ್ಪಿನ್ ಬೌಲರ್‌ಗಳ ಮುಂದೆ ತಂಡದ ಬ್ಯಾಟರ್ಸ್ ಪರದಾಡುತ್ತಿರುವುದು ಸ್ಪಷ್ಟವಾಗಿದೆ. ಹೀಗಾಗಿ ಶುಕ್ರವಾರದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್‌ಗಳಿಗೆ ಪಂಜಾಬ್ ಸ್ಪಿನ್ನರ್‌ಗಳಿಂದ ಪ್ರಮುಖ ಸವಾಲು ಎದುರಾಗಲಿದೆ. ಯುಜುವೇಂದ್ರ ಚಹಲ್, ಗ್ಲೆನ್ ಮ್ಯಾಕ್ಸ್ ವೆಲ್ ತಮ್ಮ ಹಳೆ ತಂಡದ ವಿರುದ್ಧ ಚಿನ್ನಸ್ವಾಮಿಯಲ್ಲಿ ಸ್ಪಿನ್ ಕೈಚಳಕ ತೋರಿಸುವ ಕಾತರದಲ್ಲಿದ್ದಾರೆ.
ಇದನ್ನೂ ಓದಿ: ಅಪ್ಪನೇ ದೃಷ್ಟಿ ಹಾಕೋ ಥರ ದುಡ್ಡು ಗಳಿಸ್ತಿರೋ 'ಬಂಗಾಳದ ಹುಲಿ' ಸೌರವ್ ಗಂಗೂಲಿಯ ಏಕೈಕ ಮಗಳು!
ಇತ್ತ ಆರ್‌ಸಿಬಿಯಲ್ಲೂ ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ ಸೇರಿ ಪ್ರಮುಖ ಸ್ಪಿನ್ನರ್‌ಗಳಿದ್ದಾರೆ. ಆರ್‌ಸಿಬಿ ನಾಯಕ ರಜತ್ ಹಾಗೂ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಇಬ್ಬರೂ ಸ್ಪಿನ್ನರ್‌ಗಳ ವಿರುದ್ದ ಉತ್ತಮವಾಗಿ ಆಡಬಲ್ಲರು. ಹೀಗಾಗಿ ಉಭಯ ತಂಡಗಳೂ ಇವರಿಬ್ಬರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದೆ.
ಮಿಂಚಬಹುದೇ ಕೊಹ್ಲಿ: ತವರಿನಲ್ಲಿ ಈ ಬಾರಿ ಆಡಿರುವ 2 ಪಂದ್ಯಗಳಲ್ಲೂ ಕೊಹ್ಲಿ ದೊಡ್ಡ ಸ್ಕೋರ್ ಗಳಿಸಿಲ್ಲ. ಗುಜರಾತ್, ಡೆಲ್ಲಿ ವಿರುದ್ಧ ಕ್ರಮವಾಗಿ 7, 22 ರನ್ ಬಾರಿಸಿದ್ದರು. ಹೀಗಾಗಿ ಕೊಹ್ಲಿ ಬ್ಯಾಟ್‌ನಿಂದ ಹೊಡಿಬಡಿ ಆಟವನ್ನು ಬೆಂಗಳೂರಿನ ಅಭಿಮಾನಿಗಳು ಕಣ್ಣುಂಬಿಕೊಳ್ಳಲು ಕಾಯುತ್ತಿದ್ದಾರೆ.
ಇದನ್ನೂ ಓದಿ: ಯುಜುವೇಂದ್ರ ಚಹಲ್ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ನಿಂದ ಗಳಿಸೋದೆಷ್ಟು?
ಸಂಭಾವ್ಯ ಆಟಗಾರರ ಪಟ್ಟಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ.
ಪಂಜಾಬ್ ಕಿಂಗ್ಸ್: ಪ್ರಿಯಾನ್ಶ್ ಆರ್ಯಾ, ಪ್ರಭ್‌ಸಿಮ್ರನ್ ಸಿಂಗ್, ಶ್ರೇಯಸ್ ಅಯ್ಯರ್(ನಾಯಕ), ನೆಹಾಲ್ ವದೇರಾ, ಜೋಶ್ ಇಂಗ್ಲಿಶ್/ಮಾರ್ಕಸ್ ಸ್ಟೋನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬರ್ಟೆಲ್ಟ್, ಯುಜುವೇಂದ್ರ ಚಹಲ್, ಅರ್ಶದೀಪ್ ಸಿಂಗ್, ವೈಶಾಕ್ ವಿಜಯ್‌ಕುಮಾರ್/ಯಶ್ ಠಾಕೂರ್.
ಪಂದ್ಯ ಆರಂಭ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಪಿಚ್ ರಿಪೋರ್ಟ್
ಇಲ್ಲಿನ ಬ್ಯಾಟಿಂಗ್ ಸ್ನೇಹಿ ಹಾಗೂ ದೊಡ್ಡ ಮೊತ್ತದ ಪಂದ್ಯಗಳಿಗೆ ಹೆಸರುವಾಸಿ. ಆದರೆ ಈ ಬಾರಿ 2 ಪಂದ್ಯಗಳ 4 ಇನ್ನಿಂಗ್ಸ್‌ಗಳಲ್ಲಿ ಗರಿಷ್ಠ ಸ್ಕೋರ್ 170. ಹೀಗಾಗಿ ಆರ್‌ಸಿಬಿ-ಪಂಜಾಬ್ ಪಂದ್ಯದಲ್ಲಿ ಪಿಚ್ ಹೇಗೆ ವರ್ತಿಸಲಿದೆ ಎಂಬ ಕುತೂಹಲವಿದೆ.
ಎಂ ಚಿನ್ನಸ್ವಾಮಿಯಲ್ಲಿ ಕಂಗೊಳಿಸಿದ ಆರ್‌ಸಿಬಿ ಆಟಗಾರರ ಚಿತ್ರ ಕಲೆ
ಬೆಂಗಳೂರು: ಐಪಿಎಲ್ ಪಂದ್ಯ ವೀಕ್ಷಣೆಗೆ ಆಗಮಿಸುವ ಪ್ರೇಕ್ಷಕರನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಆಟಗಾರರ ಚಿತ್ರಗಳನ್ನು ರಚಿಸಲಾಗಿದೆ.
ಮುಖ್ಯಗೇಟ್‌ನ ಪಕ್ಕದಲ್ಲೇ ಇರುವ ಕಟ್ಟಡದ ಮೆಟ್ಟಿಲುಗಳ ಬಳಿ ಎರಡೂ ಬದಿಯ ಗೋಡೆಗಳಲ್ಲಿ ಎಲ್ಲಾ ಆಟಗಾರರ ಬೃಹತ್ ಚಿತ್ರಗಳನ್ನು ಬಿಡಿಸಲಾಗಿದೆ. ವಿರಾಟ್ ಕೊಹ್ಲಿ, ಭುವನೇಶ್ವರ್, ಫಿಲ್ ಸಾಲ್ಟ್, ರಜತ್ ಪಾಟೀದಾರ್ ಸೇರಿದಂತೆ ಪ್ರಮುಖ ಆಟಗಾರರ ಪೇಂಟಿಂಗ್ ಗೋಡೆಗಳ ಮೇಲೆ ಕಂಗೊಳಿಸುತ್ತಿದೆ.
