ಐಪಿಎಲ್ 2025ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ. ಗೆದ್ದ ತಂಡ ಫೈನಲ್‌ನಲ್ಲಿ ಆರ್‌ಸಿಬಿ ಎದುರಿಸಲಿದೆ. ಮುಂಬೈ ತಂಡಕ್ಕೆ ಅಹಮದಾಬಾದ್‌ನಲ್ಲಿ ಸವಾಲು ಎದುರಾಗಲಿದೆ.

ಬೆಂಗಳೂರು: ಐಪಿಎಲ್ 2025ರ ಎರಡನೇ ಕ್ವಾಲಿಫೈಯರ್ ಪಂದ್ಯ ಇಂದು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಗೆದ್ದ ತಂಡ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಹೆಚ್ಚಿನ ಸವಾಲು ಎದುರಾಗಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡ ಗೆಲುವಿನೊಂದಿಗೆ ಹೊಸ ದಾಖಲೆ ಬರೆಯುವ ಗುರಿ ಹೊಂದಿದೆ. ಜೊತೆಗೆ ತಮ್ಮ ಆರನೇ ಐಪಿಎಲ್ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ನ ಪ್ರದರ್ಶನ ಅಷ್ಟೇನೂ ಚೆನ್ನಾಗಿಲ್ಲ. ಕಳೆದ ಐದು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಸೋಲು ಅನುಭವಿಸಿದೆ. 2023ರ ಐಪಿಎಲ್‌ನಲ್ಲಿ ಇದೇ ಮೈದಾನದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕ್ವಾಲಿಫೈಯರ್ 2ರಲ್ಲಿ ಮುಂಬೈ ಸೋತಿತ್ತು. 11 ವರ್ಷಗಳ ಹಿಂದೆ 2014ರಲ್ಲಿ ಮುಂಬೈ ಇಂಡಿಯನ್ಸ್ ಇಲ್ಲಿ ಕೊನೆಯದಾಗಿ ಗೆದ್ದಿತ್ತು. ಈ ಸೋಲಿನ ಸರಪಣಿಯನ್ನು ಮುರಿಯುವ ಗುರಿಯೊಂದಿಗೆ ಮುಂಬೈ ಕಣಕ್ಕಿಳಿಯಲಿದೆ.

ಎಲಿಮಿನೇಟರ್‌ನಲ್ಲಿ ಮುಂಬೈಯ ಭರ್ಜರಿ ಗೆಲುವು

ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಆರಂಭದಲ್ಲಿ ಸೋಲುಗಳ ಸರಮಾಲೆಯೇ ಎದುರಾಗಿತ್ತು. ಆದರೆ ನಂತರ ಭರ್ಜರಿ ತಿರುಗೇಟು ನೀಡಿ ಪ್ಲೇಆಫ್‌ಗೆ ಲಗ್ಗೆ ಇಟ್ಟಿತು. ಎಲಿಮಿನೇಟರ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 20 ರನ್ ಅಂತರದಲ್ಲಿ ಮಣಿಸಿ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದುಕೊಂಡಿದೆ.

ನಿರ್ಣಾಯಕ ಘಟ್ಟದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಇನ್ನು ಜಾನಿ ಬೇರ್‌ಸ್ಟೋವ್, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಟ್ರೆಂಟ್ ಬೌಲ್ಟ್ ಅವರಂತಹ ಆಟಗಾರರು ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದೀಗ ಬಲಿಷ್ಠ ಪಂಜಾಬ್ ಕಿಂಗ್ಸ್ ಮಣಿಸಿ ಜೂನ್ 03ರಂದು ನಡೆಯಲಿರುವ ಆರ್‌ಸಿಬಿ ಎದುರಿನ ಪಂದ್ಯಕ್ಕೆ ಕಣಕ್ಕಿಳಿಯಲು ಹಾರ್ದಿಕ್ ಪಾಂಡ್ಯ ಪಡೆ ರಣತಂತ್ರ ಹೆಣೆಯುತ್ತಿದೆ.

ಮೊದಲ ಕ್ವಾಲಿಫೈಯರ್‌ನಲ್ಲಿ ಪಂಜಾಬ್‌ಗೆ ಸೋಲು:

ಇನ್ನೊಂದೆಡೆ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ಆದರೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಹೀನಾಯ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತ್ತು. ಇದೀಗ ಫೈನಲ್‌ಗೇರಲು ಎರಡನೇ ಅವಕಾಶವಾಗಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಲು ಪಂಜಾಬ್ ಕಿಂಗ್ಸ್ ಎದುರು ನೋಡುತ್ತಿದೆ.

ಐಪಿಎಲ್‌ನಲ್ಲಿ ಪಂಜಾಬ್-ಮುಂಬೈ ಹೆಡ್-ಟು-ಹೆಡ್ ದಾಖಲೆ

ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಒಟ್ಟು 33 ಐಪಿಎಲ್ ಪಂದ್ಯಗಳು ನಡೆದಿದ್ದು, ಮುಂಬೈ ಇಂಡಿಯನ್ಸ್‌ 17 ಪಂದ್ಯಗಳಲ್ಲಿ ಮತ್ತು ಪಂಜಾಬ್ 16 ಪಂದ್ಯಗಳಲ್ಲಿ ಗೆದ್ದಿದೆ. ಈ ವರ್ಷ ನಡೆದ ಪಂದ್ಯದಲ್ಲಿ ಪಂಜಾಬ್ ಗೆದ್ದಿತ್ತು. ಈಗ ಫೈನಲ್‌ಗೆ ಯಾವ ತಂಡ ಪ್ರವೇಶ ಪಡೆಯಲಿದೆ ಎಂದು ಕಾದು ನೋಡಬೇಕು.

ಪಂಜಾಬ್‌ಗೆ 2ನೇ, ಮುಂಬೈಗೆ ಏಳನೇ ಫೈನಲ್ ಮೇಲೆ ಕಣ್ಣು

ಮುಂಬೈ ತಂಡ 11ನೇ ಬಾರಿ ಪ್ಲೇ-ಆಫ್ ಆಡುತ್ತಿದ್ದು, 7ನೇ ಬಾರಿ ಫೈನಲ್‌ಗೇರುವ ತವಕದಲ್ಲಿದೆ. ತಂಡ ಈ ಮೊದಲು 2010ರಲ್ಲಿ ರನ್ನರ್ -ಅಪ್ ಆಗಿದ್ದರೆ, 2013, 2015, 2017, 2019 ಹಾಗೂ 2020ರಲ್ಲಿ ಟ್ರೋಫಿ ಗೆದ್ದಿದೆ. ಪಂಜಾಬ್ 2ನೇ ಬಾರಿ ಫೈನಲ್ ಗೇರುವ ಗುರಿ ಇಟ್ಟುಕೊಂಡಿದೆ. 2014ರಲ್ಲಿ ಫೈನಲ್‌ಗೇರಿದ್ದ ತಂಡ ಸೋಲನುಭವಿಸಿತ್ತು.