2025ರ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಕೆಲ ಮಹತ್ವದ ಬದಲಾವಣೆಯಾಗಿದೆ.
ಚಂಡಿಘಡ(ಮೇ.29) ಅದ್ಭುತ ಹೋರಾಟದ ಮೂಲಕ ಪ್ಲೇ ಆಫ್ ಪ್ರವೇಶಿಸಿರುವ ಆರ್‌ಸಿಬಿ ಇದೀಗ ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯ ಆಡುತ್ತಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಚೇಸಿಂಗ್‌ನಲ್ಲಿ ಉತ್ತಮವಾಗಿರುವ ಆರ್‌ಸಿಬಿಗೆ ಟಾಸ್ ಗೆಲುವು ಆರಂಭಿಕ ಗೆಲುವಾಗಿದೆ. ರಜತ್ ಪಾಟೀದಾರ್ ನಾಯಕನಾಗಿ ವಾಪಾಸ್ಸಾಗಿದ್ದಾರೆ. ಆರ್‌ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹೇಜಲ್‌ವುಡ್ ಆಗಮನದಿಂದ ನುವಾನ್ ತುಷಾರ್ ಸ್ಥಾನ ಕಳೆದುಕೊಂಡಿದ್ದಾರೆ.
ಆರ್‌ಸಿಬಿ ಪ್ಲೇಯಿಂಗ್ 11
ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ರೋಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್‌ವುಡ್, ಸುಯಾಶ್ ಶರ್ಮಾ,
ಪಂಜಾಬ್ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದೆ. ಮಾರ್ಕೋ ಬದಲು ಅಜ್ಮತುಲ್ಹಾ ತಂಡ ಸೇರಿಕೊಂಡಿದ್ದಾರೆ.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್, ಜೋಶ್ ಇಂಗ್ಲಿಸ್, ಶ್ರೇಯಸ್ ಅಯ್ಯರ್(ನಾಯಕ), ನೆಹಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯ್ನಿಸ್,ಅಜ್ಮತುಲ್ಹಾ ಒಮರ್ಜೈ, ಹರ್ಪ್ರೀತ್ ಬ್ರಾರ್, ಅರ್ಶದೀಪ್ ಸಿಂಗ್, ಕೈಲ್ ಜ್ಯಾಮಿಸನ್
ಆರ್‌ಸಿಬಿ ಲೀಗ್ ಹಂತದಲ್ಲಿ ಉತ್ತಮ ಹೋರಾಟ ನೀಡಿತ್ತು. ಕೊನೆಯ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ದ 228 ರನ್ ಚೇಸ್ ಮಾಡಿದ ಆರ್‌ಸಿಬಿ ರೋಚಕ ಗೆಲುವು ದಾಖಲಿಸಿತ್ತು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿತ್ತು. ಈ ಮೂಲಕ ಪ್ಲೇ ಆಫ್ ಹಂತದಲ್ಲಿ ಫೈನಲ್ ಪ್ರವೇಶಿಸಲು ಎರಡು ಅವಕಾಶ ಪಡೆದುಕೊಂಡಿದೆ. ಲೀಗ್ ಹಂತದ 14 ಪಂದ್ಯದಲ್ಲಿ ಆರ್‌ಸಿಬಿ 9ರಲ್ಲಿ ಗೆಲುವು ದಾಖಲಿಸಿದ್ದರೆ, 4 ಪಂದ್ಯದಲ್ಲಿ ಸೋಲು ಕಂಡಿತ್ತು. ಈ ಮೂಲಕ 19 ಅಂಕ ಸಂಪಾದಿಸಿತ್ತು.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಆರ್‌ಸಿಬಿ ಹೋರಾಟ ಮಾಡಿದರೆ, ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ಹೋರಾಟ ನಡೆಸಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡ ಹಾಗೂ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡ 2ನೇ ಕ್ವಾಲಿಫೈಯರ್ ಪಂದ್ಯ ಆಡಲಿದೆ. ಈ ಬಾರಿಯ ಫೈನಲ್ ಪಂದ್ಯ ಜೂನ್ 3ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.


