ಮುಂಬೈ ಇಂಡಿಯನ್ಸ್ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಮರಳಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿದ್ದ ಅವರು, ವೈದ್ಯಕೀಯ ತಂಡದಿಂದ ಅನುಮತಿ ಪಡೆದು ತಂಡವನ್ನು ಸೇರಿಕೊಂಡಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯರಿರುತ್ತಾರೆಯೇ ಎಂಬುದು ಫಿಟ್‌ನೆಸ್ ಪರೀಕ್ಷೆಯ ನಂತರ ನಿರ್ಧಾರವಾಗಲಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಬುಮ್ರಾ ಮರಳುವ ಬಗ್ಗೆ ಜಾಗರೂಕರಾಗಿದ್ದಾರೆ. ಮುಂಬೈ ಇಂಡಿಯನ್ಸ್ ಈ ಬಾರಿ ಕಳಪೆ ಪ್ರದರ್ಶನ ನೀಡಿದೆ.
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಪಾಲಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಮಾರಕ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಮಹತ್ವದ ಪಂದ್ಯಕ್ಕೆ ಮುಂಚಿತವಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಆದಾಗ್ಯೂ, ಬುಮ್ರಾ ನೇರವಾಗಿ ಆಯ್ಕೆಗೆ ಲಭ್ಯವಿರುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಜನವರಿಯಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಬುಮ್ರಾ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಬಿಸಿಸಿಐ ವೈದ್ಯಕೀಯ ತಂಡದಿಂದ ಅನುಮತಿ ಪಡೆದ ನಂತರ ಶನಿವಾರ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು. ಅವರ ಮ್ಯಾಚ್ ಫಿಟ್‌ನೆಸ್ ಮತ್ತು ಸಿದ್ಧತೆಯನ್ನು ನಿರ್ಣಯಿಸಿದ ನಂತರ, ಕ್ರಿಕೆಟ್ ನಿರ್ದೇಶಕ ಮಹೇಲಾ ಜಯವರ್ಧನೆ ನೇತೃತ್ವದ ಮುಂಬೈ ಇಂಡಿಯನ್ಸ್ ಸಪೋರ್ಟಿಂಗ್ ಸ್ಟಾಪ್ಸ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಜಸ್ಪ್ರೀತ್ ಬುಮ್ರಾ ತಮ್ಮ ಬೌಲಿಂಗ್ ಫಿಟ್‌ನೆಸ್ ಅನ್ನು ಪರೀಕ್ಷಿಸಲು ಕನಿಷ್ಠ ಒಂದು ಅಥವಾ ಎರಡು ಅಭ್ಯಾಸ ಪಂದ್ಯಗಳನ್ನು ಆಡುವ ನಿರೀಕ್ಷೆಯಿತ್ತು. ಬೆಂಗಳೂರಿನಲ್ಲಿ ನಡೆದ ಅಭ್ಯಾಸ ಶಿಬಿರದಲ್ಲಿ ಆ ಪಂದ್ಯಗಳು ನಡೆದಿದೆಯೇ ಎಂಬುದು ಖಚಿತವಾಗಿಲ್ಲದಿದ್ದರೂ, ಮುಂಬೈ ಇಂಡಿಯನ್ಸ್ ಪರ ಆಡಲು ಹಸಿರು ನಿಶಾನೆ ನೀಡುವ ಮೊದಲು ತನ್ನದೇ ಆದ ಫಿಟ್‌ನೆಸ್ ಮೌಲ್ಯಮಾಪನವನ್ನು ನಡೆಸಬಹುದು.
ಇದನ್ನೂ ಓದಿ: IPL 2025 ರಾಹುಲ್ ಅಬರಕ್ಕೆ ಚೆನ್ನೆ ಧೂಳೀಪಟ; ಡೆಲ್ಲಿಗೆ ಹ್ಯಾಟ್ರಿಕ್ ಗೆಲುವಿನ ಸಿಹಿ
ಏಪ್ರಿಲ್ 4 ರಂದು ಬುಮ್ರಾ ಕುರಿತು ಕೊನೆಯ ಅಧಿಕೃತ ಮಾಹಿತಿ ಬಂದಿದ್ದು, 30 ವರ್ಷದ ವೇಗದ ಬೌಲರ್ ಕನಿಷ್ಠ ಆರ್‌ಸಿಬಿ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು.
ಕಾಡಿನ ರಾಜ ತನ್ನ ಸಾಮ್ರಾಜ್ಯಕ್ಕೆ ಮರಳಿದೆ ಎಂದು ಮುಂಬೈ ಇಂಡಿಯನ್ಸ್ ತಂಡವು ತನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಆರ್‌ಸಿಬಿ ತಂಡಕ್ಕೆ ಖಡಕ್ ಎಚ್ಚರಿಕೆ ರವಾನಿಸಿದೆ. ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವು ಏಪ್ರಿಲ್ 07ರಂದು ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆಯಲಿದೆ.
ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿಯ ಪ್ರಕಾರ, ಬುಮ್ರಾ ಜೂನ್ 28 ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮರಳುವಿಕೆಯ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ - ಇದು ಭಾರತದ 2025 ರ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಪ್ರಮುಖ ಸರಣಿ ಎನಿಸಿಕೊಂಡಿದೆ.
ಇದನ್ನೂ ಓದಿ: CSK ಸೋಲಿಸಿ ಡೆಲ್ಲಿಗೆ ಗೆಲುವು ತಂದುಕೊಟ್ಟ ಧೋನಿ-ವಿಜಯ್ ಶಂಕರ್! ಫ್ಯಾನ್ಸ್ ಗರಂ!
ಈ ನಡುವೆ, ಮುಂಬೈ ಇಂಡಿಯನ್ಸ್ ತಮ್ಮ ಐಪಿಎಲ್ 2025 ಅಭಿಯಾನವನ್ನು ತಡಬಡಾಯಿಸುವ ಮೂಲಕ ಪ್ರಾರಂಭಿಸಿದೆ, ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಸಾಧಿಸಿದೆ. ಬುಮ್ರಾ ಅನುಪಸ್ಥಿತಿಯಲ್ಲಿ, ಮುಂಬೈ ತಂಡವು ಯುವ ವೇಗದ ಬೌಲರ್‌ಗಳಾದ ಸತ್ಯನಾರಾಯಣ ರಾಜು, ವಿಘ್ನೇಶ್ ಪುತೂರ್ ಮತ್ತು ಅಶ್ವನಿ ಕುಮಾರ್ ಅವರಿಗೆ ಐಪಿಎಲ್ ಪದಾರ್ಪಣೆ ನೀಡಿತು. ಟ್ರೆಂಟ್ ಬೌಲ್ಟ್ ಮತ್ತು ದೀಪಕ್ ಚಹರ್ ವೇಗದ ದಾಳಿಯನ್ನು ಮುನ್ನಡೆಸುತ್ತಿದ್ದಾರೆ, ನಾಯಕ ಹಾರ್ದಿಕ್ ಪಾಂಡ್ಯ ಕೂಡ ಹೊಸ ಚೆಂಡಿನೊಂದಿಗೆ ಕೊಡುಗೆ ನೀಡುತ್ತಿದ್ದಾರೆ.
ಬುಮ್ರಾ 2013 ರಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ, 133 ಪಂದ್ಯಗಳಲ್ಲಿ 165 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಈ ಹಿಂದೆ 2023 ರಲ್ಲಿ ಬೆನ್ನು ಶಸ್ತ್ರಚಿಕಿತ್ಸೆಯಿಂದಾಗಿ ಐಪಿಎಲ್ ಸೀಸನ್ ಅನ್ನು ತಪ್ಪಿಸಿಕೊಂಡಿದ್ದರು. ಜನವರಿ 4 ರಂದು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅವರಿಗೆ ಗಾಯವಾಗಿತ್ತು, ಇದರಿಂದಾಗಿ ಅವರು ಕಳೆದ ತಿಂಗಳು ಭಾರತದ ಚಾಂಪಿಯನ್ಸ್ ಟ್ರೋಫಿ ಅಭಿಯಾನದಿಂದ ಹೊರಗುಳಿಯಬೇಕಾಯಿತು.
