ಗುಜರಾತ್ ಟೈಟಾನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 38 ರನ್‌ಗಳಿಂದ ಸೋಲಿಸಿದೆ. ಸಾಯ್ ಸುದರ್ಶನ್ ಅವರು ವೇಗವಾಗಿ 2000 ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.
ಅಹಮದಾಬಾದ್: ಗುಜರಾತ್ ಟೈಟಾನ್ಸ್‌ನ ರನ್ ಮಳೆಯಲ್ಲಿ ಕೊಚ್ಚಿ ಹೋದ ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಐಪಿಎಲ್‌ನಿಂದ ಬಹುತೇಕ ಹೊರಬಿದ್ದಿದೆ. ಶುಕ್ರವಾರ ಸನ್‌ರೈಸರ್ಸ್ 38 ರನ್‌ಗಳ ಹೀನಾಯ ಸೋಲು ಕಂಡಿತು. ಇದು 10 ಪಂದ್ಯಗಳಲ್ಲಿ ಎದುರಾದ 7ನೇ ಸೋಲು. ಮತ್ತೊಂದೆಡೆ ಗುಜರಾತ್ 7ನೇ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವುದರ ಜೊತೆಗೆ ಪ್ಲೇ-ಆಫ್ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಗುಜರಾತ್, ಸ್ಫೋಟಕ ಆಟವಾಡಿ 6 ವಿಕೆಟ್‌ಗೆ 224 ರನ್ ಕಲೆಹಾಕಿತು. ಸಾಯ್ ಸುದರ್ಶನ್ 23 ಎಸೆತಕ್ಕೆ 48 ರನ್ ಸಿಡಿಸಿದರೆ, ನಾಯಕ ಶುಭ್‌ಮನ್ ಗಿಲ್(38 ಎಸೆತಕ್ಕೆ 76), ಜೋಸ್ ಬಟ್ಲರ್(37 ಎಸೆತಕ್ಕೆ 64) ತಲಾ ಅರ್ಧಶತಕ ಬಾರಿಸಿ ತಂಡಕ್ಕೆ ದೊಡ್ಡ ಮೊತ್ತ ಕಲೆಹಾಕಲು ನೆರವಾದರು.
ಸನ್‌ರೈಸರ್ಸ್ ಹೈದರಾಬಾದ್ ಪರ ಅನುಭವಿ ವೇಗಿ ಮೊಹಮ್ಮದ್ ಶಮಿ ಮತ್ತೊಮ್ಮೆ ದುಬಾರಿಯಾದರು. ಸನ್‌ರೈಸರ್ಸ್ ಹೈದರಾಬಾದ್ ಪರ 3 ಓವರ್ ಬೌಲಿಂಗ್ ಮಾಡಿ 16ರ ಎಕಾನಮಿಯಲ್ಲಿ 48 ರನ್ ಬಿಟ್ಟುಕೊಟ್ಟರು. ಆದರೆ ಒಂದೇ ಒಂದು ವಿಕೆಟ್ ಕಬಳಿಸಲು ಶಮಿಗೆ ಸಾಧ್ಯವಾಗಲಿಲ್ಲ. ಇನ್ನು ಜಯದೇವ್ ಉನಾದ್ಕತ್ 35 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಇನ್ನು ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಜೀಸನ್ ಅನ್ಸಾರಿ ತಲಾ ಒಂದೊಂದು ವಿಕೆಟ್ ಕಬಳಿಸಿ ಮಿಂಚಿದರು.
ದೊಡ್ಡ ಮೊತ್ತ ಬೆನ್ನತ್ತಿದ ಸನ್‌ರೈಸರ್ಸ್‌ಗೆ ಉತ್ತಮ ಆರಂಭ ಸಿಕ್ಕಿತು. ಪವರ್-ಪ್ಲೇನಲ್ಲಿ ತಂಡ 57 ರನ್ ಗಳಿಸಿತು. ಆದರೆ ಬಳಿಕ ಅಭಿಷೇಕ್ ಶರ್ಮಾ ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್‌ಗೂ ದೊಡ್ಡ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಏಕಾಂಗಿ ಹೋರಾಟ ಪ್ರದರ್ಶಿಸಿದ ಅಭಿಷೇಕ್ 41 ಎಸೆತಗಳಲ್ಲಿ 74 ರನ್ ಸಿಡಿಸಿದರು. ಟ್ರ್ಯಾವಿಸ್ ಹೆಡ್(20), ಇಶಾನ್ ಕಿಶನ್(13), ಹೆನ್ರಿಚ್ ಕ್ಲಾಸೆನ್(23), ಅನಿಕೇತ್ ವರ್ಮಾ(3) ಹಾಗೂ ನಿತೀಶ್ ಕುಮಾರ್ ರೆಡ್ಡಿ(21) ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಕನ್ವರ್ಟ್ ಮಾಡಲು ವಿಫಲವಾದರು. ಅಂತಿಮವಾಗಿ ತಂಡ 20 ಓವರ್‌ಗಳಲ್ಲಿ 186 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಬಹುತೇಕ ಸನ್‌ರೈಸರ್ಸ್ ಔಟ್: ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದ ಸನ್‌ರೈಸರ್ಸ್ ಹೈದರಾಬಾದ್, ಈ ಬಾರಿ ಏಳನೇ ಸೋಲು ಕಾಣುವ ಮೂಲಕ ಬಹುತೇಕ ಪ್ಲೇ ಆಫ್ ರೇಸ್‌ನಿಂದ ಹೊರಬೀಳುವ ಭೀತಿಗೆ ಸಿಲುಕಿದೆ. ಇನ್ನುಳಿದ 4 ಪಂದ್ಯ ಗೆದ್ದರೂ ಸನ್‌ರೈಸರ್ಸ್ ಬಳಿ 14 ಅಂಕಗಳಾಗಲಿವೆ. ಅದೃಷ್ಟ ಕೈಹಿಡಿದರಷ್ಟೇ ಪ್ಲೇ ಆಫ್‌ಗೇರಲು ಸಾಧ್ಯ. ಆರೆಂಜ್ ಆರ್ಮಿ ಇನ್ನೊಂದು ಪಂದ್ಯ ಸೋತರೂ ಅಧಿಕೃತವಾಗಿ ಹೊರಬೀಳಲಿದೆ.
ಸ್ಕೋರ್: ಗುಜರಾತ್ 20 ಓವರಲ್ಲಿ 224/6 (ಶುಭ್‌ಮನ್ 76, ಬಟ್ಲರ್ 64, ಸುದರ್ಶನ್ 48, ಉನಾದ್ಕಟ್ 3-35), ಸನ್‌ರೈಸರ್ಸ್ 20 ಓವರಲ್ಲಿ 186/6 (ಅಭಿಷೇಕ್ 74, ಪ್ರಸಿದ್ಧ್ 2-19, ಸಿರಾಜ್ 2-33)
ವೇಗವಾಗಿ 2000 ರನ್: ಸಚಿನ್ ದಾಖಲೆ ಮುರಿದ ಸಾಯ್ ಸುದರ್ಶನ್!
ಅಹಮದಾಬಾದ್: ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 2,000 ರನ್ ಕಲೆಹಾಕಿದ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಗುಜರಾತ್ ಟೈಟಾನ್ಸ್ ತಂಡದ ಸಾಯ್ ಸುದರ್ಶನ್ ಪಾತ್ರರಾಗಿದ್ದಾರೆ. ಅವರು ಸಚಿನ್ ತೆಂಡುಲ್ಕರ್ ದಾಖಲೆ ಮುರಿದಿದ್ದಾರೆ.
ಶುಕ್ರವಾರ ಸನ್‌ರೈಸರ್ಸ್ ವಿರುದ್ಧ ಪಂದ್ಯದಲ್ಲಿ ಸಾಯ್ ಈ ಮೈಲುಗಲ್ಲು ಸಾಧಿಸಿದರು. ಸಚಿನ್ 59 ಇನ್ನಿಂಗ್ಸ್‌ಗಳಲ್ಲಿ 2000 ರನ್ ಪೂರ್ತಿಗೊಳಿಸಿದ್ದರೆ, 23 ವರ್ಷದ ಸುದರ್ಶನ್ 54 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಶಾನ್ ಮಾರ್ಷ್ 53 ಇನ್ನಿಂಗ್ಸ್‌ಗಳಲ್ಲೇ 2,000 ರನ್ ಮೈಲುಗಲ್ಲು ತಲುಪಿದ್ದರು.


