ಕೋಲ್ಕತಾ ನೈಟ್‌ರೈಡರ್ಸ್ (ಕೆಕೆಆರ್) 2025ರ ಐಪಿಎಲ್ ಆವೃತ್ತಿಗೆ ಅಜಿಂಕ್ಯ ರಹಾನೆಯನ್ನು ನಾಯಕನನ್ನಾಗಿ ನೇಮಿಸಿದೆ. ಈ ಹಿಂದೆ ಹರಾಜಿನಲ್ಲಿ ಬಿಕರಿಯಾಗದೆ ಇದ್ದ ರಹಾನೆಯನ್ನು ನಂತರ ಮೂಲಬೆಲೆಗೆ ಖರೀದಿಸಲಾಗಿತ್ತು. ವೆಂಕಟೇಶ್ ಅಯ್ಯರ್ ಉಪನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. .

ನವದೆಹಲಿ: ಐಪಿಎಲ್ ಹರಾಜಿನ ಮೊದಲ ಸುತ್ತಿನಲ್ಲಿ ಬಿಕರಿಯಾಗದೆ, 2ನೇ ಸುತ್ತಿನಲ್ಲಿ ಮೂಲಬೆಲೆ (1.5 ಕೋಟಿ)ಗೆ ಖರೀದಿಸಲ್ಪಟ್ಟಿದ್ದ ಅಜಿಂಕ್ಯ ರಹಾನೆಯನ್ನು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್‌ರೈಡರ್ಸ್ 2025ರ ಆವೃತ್ತಿಗೆ ತನ್ನ ನಾಯಕನನ್ನಾಗಿ ನೇಮಿಸಿಕೊಂಡಿದೆ. ಸೋಮವಾರ ಕೆಕೆಆರ್ ಮಾಲಿಕರು ಹೊಸ ನಾಯಕನನ್ನು ಘೋಷಿಸಿದರು. ಇದೇ ವೇಳೆ ಹರಾಜಿನಲ್ಲಿ ಬರೋಬ್ಬರಿ 23.75 ಕೋಟಿಗೆ ಬಿಕರಿ ಯಾಗಿ, ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ್ದ ಆಲ್ರೌಂಡರ್ ವೆಂಕಟೇಶ್ ಅಯ್ಯರ್‌ಗೆ ಉಪನಾಯಕನ ಜವಾಬ್ದಾರಿ ವಹಿಸಲಾಗಿದೆ.

36 ವರ್ಷದ ಅಜಿಂಕ್ಯ ರಹಾನೆ, ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು. ಆದರೆ ರಾಯಲ್ಸ್, 2019ರ ಆವೃತಿಯ ಮಧ್ಯದಲ್ಲೇ ರಹಾನೆಯನ್ನು ಕೆಳಗಿಳಿಸಿ ಸ್ಟೀವ್ ಸ್ಮಿತ್‌ಗೆ ನಾಯಕತ್ವ ಕೊಟ್ಟಿತ್ತು. ತಮ್ಮ ವೃತ್ತಿಬದುಕಿನ ಬಹುತೇಕ ಭಾಗ ಟೆಸ್ಟ್, ಪ್ರಥಮ ದರ್ಜೆ ಕ್ರಿಕೆಟನ್ನೇ ಆಡಿರುವ ರಹಾನೆ, ಇತ್ತೀಚೆಗೆ ಮುಕ್ತಾಯಗೊಂಡ ಸಯ್ಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ 164.56ರ ಸ್ಟ್ರೈಕ್‌ರೇಟ್‌ನಲ್ಲಿ 469 ರನ್ ಸಿಡಿಸಿ, ಟೂರ್ನಿಯ ಗರಿಷ್ಠ ರನ್ ಸರದಾರ ಎನಿಸಿದ್ದರು. ಈ ಪ್ರದರ್ಶನ ಅವರಿಗೆ ಕೆಕೆಆರ್ ನಾಯಕತ್ವವನ್ನು ತಂದುಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಶ್ರೇಯಸ್ ಅಯ್ಯರ್ ಅವರನ್ನು ಕೆಕೆಆರ್ ಫ್ರಾಂಚೈಸಿ ತಂಡದಿಂದ ರಿಲೀಸ್ ಮಾಡಿತ್ತು. ಇನ್ನು ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಇದನ್ನೂ ಓದಿ: ಕಿವೀಸ್ ಕಿವಿಹಿಂಡಿದ ಬೀದರ್ ಹುಡುಗ ವರುಣ್ ಚಕ್ರವರ್ತಿಯ ಬಗ್ಗೆ ನಿಮಗೆಷ್ಟು ಗೊತ್ತು?

ಡಬ್ಲ್ಯುಪಿಎಲ್‌: ಗುಜರಾತ್‌ ಅಬ್ಬರಕ್ಕೆ ನಡುಗಿದ ಯುಪಿ

ಲಖನೌ: 3ನೇ ಆವೃತ್ತಿಯ ಡಬ್ಲ್ಯುಪಿಎಲ್‌ ನಿರ್ಣಾಯಕ ಹಂತ ತಲುಪುತ್ತಿದ್ದು, ಗುಜರಾತ್‌ ಜೈಂಟ್ಸ್‌ ಭರ್ಜರಿ ಗೆಲುವಿನೊಂದಿಗೆ ಪ್ಲೇ-ಆಫ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಸೋಮವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಯು.ಪಿ.ವಾರಿಯರ್ಸ್‌ ವಿರುದ್ಧದ ಪಂದ್ಯದಲ್ಲಿ ಗುಜರಾತ್‌ 81 ರನ್‌ಗಳ ಅಮೋಘ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಯು.ಪಿ. ಕೊನೆಯ ಸ್ಥಾನಕ್ಕೆ ಜಾರಿತು.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಬೆಥ್‌ ಮೂನಿ ಅವರ ಅದ್ಭುತ ಇನ್ನಿಂಗ್ಸ್‌ನ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ಗೆ 186 ರನ್‌ ಗಳಿಸಿತು. ಮೂನಿ 59 ಎಸೆತದಲ್ಲಿ 17 ಬೌಂಡರಿಗಳೊಂದಿಗೆ 96 ರನ್‌ ಗಳಿಸಿ ಔಟಾಗದೆ ಉಳಿದರು. ಕೇವಲ 4 ರನ್‌ಗಳಿಂದ ಡಬ್ಲ್ಯುಪಿಎಲ್‌ ಇತಿಹಾಸದಲ್ಲೇ ಚೊಚ್ಚಲ ಶತಕ ದಾಖಲಿಸುವ ಅವಕಾಶದಿಂದ ವಂಚಿತರಾದರು. ಹರ್ಲೀನ್‌ ದೇವಲ್‌ 45 ರನ್‌ ಕೊಡುಗೆ ನೀಡಿದರು.

ಇದನ್ನೂ ಓದಿ: ಭಾರತ vs ಆಸೀಸ್‌ ಸೆಮಿ ಫೈಟ್‌ಗೆ ಕ್ಷಣಗಣನೆ; ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಭಾರತ?

ದೊಡ್ಡ ಗುರಿ ಬೆನ್ನತ್ತಿದ ಯು.ಪಿ. ಮೊದಲ ಓವರಲ್ಲೇ 2 ವಿಕೆಟ್‌ ಕಳೆದುಕೊಂಡಿತು. ಆನಂತರ ತಂಡಕ್ಕೆ ಚೇತರಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ. 48 ರನ್‌ಗೆ 6 ವಿಕೆಟ್‌ ಕಳೆದುಕೊಂಡ ಯು.ಪಿ. ಹೀನಾಯ ಸೋಲಿನತ್ತ ಮುಖ ಮಾಡಿತು. ಶಿನೆಲ್ಲ್‌ ಹೆನ್ರಿ 28 ರನ್‌ ಗಳಿಸಿ ಸೋಲಿನ ಅಂತರವನ್ನು ತಗ್ಗಿಸುವ ಪ್ರಯತ್ನ ನಡೆಸಿದರು. ಆದರೂ 17.1 ಓವರಲ್ಲಿ ಯು.ಪಿ. ವಾರಿಯರ್ಸ್‌ 105 ರನ್‌ಗೆ ಆಲೌಟ್‌ ಆಯಿತು. ಕಾಶ್ವೀ ಗೌತಮ್‌ ಹಾಗೂ ತನುಜಾ ಕನ್ವರ್‌ ತಲಾ 3 ವಿಕೆಟ್‌ ಕಿತ್ತರು.

ಸ್ಕೋರ್‌: ಗುಜರಾತ್‌ 20 ಓವರಲ್ಲಿ 186/5 (ಮೂನಿ 96*, ಹರ್ಲೀನ್‌ 45, ಸೋಫಿ 2-34), ಯು.ಪಿ. 17.1 ಓವರಲ್ಲಿ 105/10 (ಹೆನ್ರಿ 28, ಹ್ಯಾರಿಸ್‌ 25, ಕಾಶ್ವೀ 3-11)