Asianet Suvarna News Asianet Suvarna News

IPL 2024 ಇಂದು ಆರ್‌ಸಿಬಿ vs ಸಿಎಸ್‌ಕೆ ಮಹಾಕದನ!

ಇಲ್ಲಿನ ಚೆಪಾಕ್‌ ಕ್ರೀಡಾಂಗಣ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಇಲ್ಲಿ 2008ರ ನಂತರ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದಿಲ್ಲ. ಚೊಚ್ಚಲ ಆವೃತ್ತಿಯಲ್ಲಿ ಸಾಧಿಸಿದ ಗೆಲುವೇ ಕೊನೆ, ಆ ಬಳಿಕ ಸತತ 7 ಪಂದ್ಯಗಳಲ್ಲಿ ಸೋಲುಂಡಿರುವ ಆರ್‌ಸಿಬಿ, ಈ ಬಾರಿ ಸೋಲಿನ ಸರಪಳಿ ಕಳಚಲು ಕಾಯುತ್ತಿದೆ.

IPL 2024 Faf du Plessis led RCB ready to take on Chennai Super Kings in Opening match kvn
Author
First Published Mar 22, 2024, 9:28 AM IST

ಚೆನ್ನೈ(ಮಾ.22): ಬಹುನಿರೀಕ್ಷಿತ 17ನೇ ಆವೃತ್ತಿಯ ಐಪಿಎಲ್‌ ಆರಂಭಗೊಳ್ಳುವ ಆ ದಿನ ಬಂದೇ ಬಿಟ್ಟಿದೆ. ಬದ್ಧವೈರಿಗಳಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ನಡುವಿನ ಹೈವೋಲ್ಟೇಜ್‌ ಕಾದಾಟದೊಂದಿಗೆ ಈ ಆವೃತ್ತಿಗೆ ಚಾಲನೆ ದೊರೆಯಲಿದೆ.

ಇಲ್ಲಿನ ಚೆಪಾಕ್‌ ಕ್ರೀಡಾಂಗಣ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಇಲ್ಲಿ 2008ರ ನಂತರ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದಿಲ್ಲ. ಚೊಚ್ಚಲ ಆವೃತ್ತಿಯಲ್ಲಿ ಸಾಧಿಸಿದ ಗೆಲುವೇ ಕೊನೆ, ಆ ಬಳಿಕ ಸತತ 7 ಪಂದ್ಯಗಳಲ್ಲಿ ಸೋಲುಂಡಿರುವ ಆರ್‌ಸಿಬಿ, ಈ ಬಾರಿ ಸೋಲಿನ ಸರಪಳಿ ಕಳಚಲು ಕಾಯುತ್ತಿದೆ.

ಫಾಫ್‌ಗೆ ಚಾಲೆಂಜ್‌: ಚೆನ್ನೈ ಆಟಗಾರನಾಗಿ ಯಶಸ್ಸು ಸಾಧಿಸಿದ್ದ ಫಾಫ್‌ ಡು ಪ್ಲೆಸಿಸ್, ಕಳೆದೆರಡು ಆವೃತ್ತಿಗಳಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದು, ಇದೇ ಮೊದಲ ಬಾರಿಗೆ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿಯ ನಾಯಕರಾಗಿ ಆಡಲಿದ್ದಾರೆ. ತಾವು ಸಿಎಸ್‌ಕೆ ತಂಡದಲ್ಲಿದ್ದಾಗ ತಮ್ಮ ಆರಂಭಿಕ ಜೊತೆಗಾರರಾಗಿದ್ದ ಋತುರಾಜ್‌ ಗಾಯಕ್ವಾಡ್‌ ಈಗ ಎದುರಾಳಿ ತಂಡದ ನಾಯಕ. ಡು ಪ್ಲೆಸಿಸ್ ಯಾವ ರೀತಿ ರಣತಂತ್ರಗಳನ್ನು ಹೆಣೆಯಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

IPL 2024: ಯಾವ ತಂಡಕ್ಕೆ ಯಾರು ಕ್ಯಾಪ್ಟನ್..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಕೊಹ್ಲಿ, ಧೋನಿ ಕಮ್‌ಬ್ಯಾಕ್‌: ಕಳೆದ ವರ್ಷ ಚೆನ್ನೈಗೆ 5ನೇ ಐಪಿಎಲ್‌ ಟ್ರೋಫಿ ಗೆಲ್ಲಿಸಿಕೊಟ್ಟ ಬಳಿಕ ಧೋನಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 11 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಧೋನಿ ಮರಳಲಿದ್ದು, ನಾಯಕನಲ್ಲದ ಧೋನಿಯ ಸೇವೆಯನ್ನು ಸಿಎಸ್‌ಕೆ ಹೇಗೆ ಬಳಸಿಕೊಳ್ಳಲಿದೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

ಇನ್ನು ಕೊಹ್ಲಿ 2 ತಿಂಗಳುಗಳ ಬಳಿಕ ಮೈದಾನಕ್ಕೆ ಮರಳಲು ಉತ್ಸುಕರಾಗಿದ್ದಾರೆ. ಕಳೆದ ವರ್ಷದ ಐಪಿಎಲ್‌ ಬಳಿಕ ಕೊಹ್ಲಿ ಕೇವಲ 2 ಟಿ20 ಪಂದ್ಯಗಳನ್ನಾಡಿದ್ದು, ಈ ವರ್ಷ ಟಿ20 ವಿಶ್ವಕಪ್‌ ದೃಷ್ಟಿಯಿಂದ ಅವರ ಪ್ರದರ್ಶನ ಬಹಳ ಮಹತ್ವ ಪಡೆದುಕೊಂಡಿದೆ.

ಅಲ್ಜಾರಿಗೆ ಅವಕಾಶ?: ಡು ಪ್ಲೆಸಿಸ್, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕ್ಯಾಮರೂನ್‌ ಗ್ರೀನ್‌ ಆರ್‌ಸಿಬಿಯ ಅಗ್ರ-3 ವಿದೇಶಿ ಆಟಗಾರರು. 4ನೇ ಆಟಗಾರನಾಗಿ ಯಾರು ಆಡಲಿದ್ದಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ವಿಂಡೀಸ್‌ ವೇಗಿ ಅಲ್ಜಾರಿ ಜೋಸೆಫ್‌, ನ್ಯೂಜಿಲೆಂಡ್‌ ವೇಗಿ ಲಾಕಿ ಫರ್ಗ್ಯೂಸನ್‌, ಇಂಗ್ಲೆಂಡ್‌ ವೇಗಿ ಟಾಮ್‌ ಕರ್ರನ್‌ ನಡುವೆ ಸ್ಪರ್ಧೆ ಇದೆ. ಸ್ಫೋಟಕ ಬ್ಯಾಟರ್‌ ಹಾಗೂ ಅರೆಕಾಲಿಕ ಸ್ಪಿನ್ನರ್‌ ಇಂಗ್ಲೆಂಡ್‌ಗೆ ವಿಲ್‌ ಜ್ಯಾಕ್ಸ್‌ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

IPL 2024: RCB ಬಲಿಷ್ಠ ಆಡುವ ಹನ್ನೊಂದರ ಬಳಗ ಪ್ರಕಟ..! ಯಾರಿಗೆಲ್ಲಾ ಸ್ಥಾನ?

ಪತಿರನ ಅಲಭ್ಯ: ಲಂಕಾ ವೇಗಿ ಮಥೀಶ ಪತಿರನ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಆದರೆ ಸ್ಫೋಟಕ ಬ್ಯಾಟರ್‌ ಶಿವಂ ದುಬೆ ಫಿಟ್‌ ಆಗಿದ್ದು, ಆಯ್ಕೆಗೆ ಲಭ್ಯರಿರುವುದಾಗಿ ತಿಳಿದುಬಂದಿದೆ. ಎರಡೂ ತಂಡಗಳು ಇಂಪ್ಯಾಕ್ಟ್‌ ಆಟಗಾರರನ್ನಾಗಿ ಯಾರನ್ನು ಬಳಸಿಕೊಳ್ಳಲಿದೆ ಎನ್ನುವುದು ಅಭಿಮಾನಿಗಳಲ್ಲಿರುವ ಕುತೂಹಲ.

ಒಟ್ಟು ಮುಖಾಮುಖಿ: 31

ಆರ್‌ಸಿಬಿ: 10

ಚೆನ್ನೈ: 20

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟೀದಾರ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಕ್ಯಾಮರೋನ್ ಗ್ರೀನ್‌, ಅನುಜ್‌/ಮಹಿಪಾಲ್‌/ಸುಯಶ್‌, ದಿನೇಶ್ ಕಾರ್ತಿಕ್‌, ಅಲ್ಜಾರಿ ಜೋಸೆಫ್, ಮಯಾಂಕ್‌ ದಾಗರ್, ಆಕಾಶ್‌ದೀಪ್/ವೈಶಾಖ್‌ ವಿಜಯ್‌ಕುಮಾರ್, ಮೊಹಮ್ಮದ್ ಸಿರಾಜ್‌, ಹಿಮಾಂಶು/ಕರ್ಣ್‌.

ಚೆನ್ನೈ: ಋತುರಾಜ್‌ ಗಾಯಕ್ವಾಡ್(ನಾಯಕ), ರಚಿನ್‌ ರವೀಂದ್ರ, ಅಜಿಂಕ್ಯ ರಹಾನೆ, ಮೋಯಿನ್ ಅಲಿ, ಡೇರಲ್ ಮಿಚೆಲ್‌, ಶಿವಂ ದುಬೆ, ರವೀಂದ್ರ ಜಡೇಜಾ, ಎಂ ಎಸ್ ಧೋನಿ, ಶಾರ್ದೂಲ್‌ ಠಾಕೂರ್, ದೀಪಕ್‌ ಚಹರ್‌, ಮಹೀಶ್‌ ತೀಕ್ಷಣ, ಮುಕೇಶ್‌ ಚೌಧರಿ/ತುಷಾರ್‌ ದೇಶಪಾಂಡೆ.

ಪಂದ್ಯ ಆರಂಭ: ರಾತ್ರಿ 8ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ಈ ಪಂದ್ಯಕ್ಕೆ ಚೆಪಾಕ್‌ ಕ್ರೀಡಾಂಗಣದ ಮಧ್ಯದ ಪಿಚ್‌ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಪಿಚ್‌ ಸ್ಪಿನ್‌ ಸ್ನೇಹಿಯಾಗಿದೆ. ರಾತ್ರಿ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಹೆಚ್ಚಿರುವ ಕಾರಣ, ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲಿದೆ.

ಸಂಜೆ 6.30ರಿಂದ ಉದ್ಘಾಟನಾ ಸಮಾರಂಭ

ಬಿಸಿಸಿಐ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸುತ್ತಿದ್ದು, ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಸಂಜೆ 6.30ರಿಂದ 7.30ರ ವರೆಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಟಾಪ್‌ ಸಂಜೆ 7.30ಕ್ಕೆ ನಡೆಯಲಿದ್ದು, ಪಂದ್ಯ ರಾತ್ರಿ 8ಕ್ಕೆ ಶುರುವಾಗಲಿದೆ. ಇನ್ನಿಂಗ್ಸ್‌ ಮಧ್ಯೆಯೂ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ.
 

Follow Us:
Download App:
  • android
  • ios