ಚೆಪಾಕ್‌ ಮೈದಾನದಲ್ಲಿಂದು ಚೆನ್ನೈ-ಗುಜರಾತ್ ಫೈಟ್ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಕ್ಷಣಗಣನೆಒಂದು ವೇಳೆ ಪಂದ್ಯ ರದ್ದಾದ್ರೆ ಯಾರಿಗೆ ಲಾಭ? ಯಾರಿಗೆ ನಷ್ಟ?

ಚೆನ್ನೈ(ಮೇ.23): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಣಾಯಕ ಘಟ್ಟ ತಲುಪಿದ್ದು, ಇಂದಿನಿಂದ ಪ್ಲೇ ಆಫ್‌ ಪಂದ್ಯಗಳು ಆರಂಭವಾಗಲಿವೆ. ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಜರಾತ್ ಟೈಟಾನ್ಸ್ ತಂಡವು ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ.

ಈ ಮೊದಲು ಐಪಿಎಲ್ ಉದ್ಘಾಟನಾ ಪಂದ್ಯದಲ್ಲೂ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಆದರೆ ಲೀಗ್‌ ಹಂತದಲ್ಲಿ ಈ ಎರಡು ತಂಡಗಳು ಅದ್ಭುತ ಪ್ರದರ್ಶನದ ಮೂಲಕ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದಿದ್ದು, ಇದೀಗ ಚೆಪಾಕ್ ಮೈದಾನದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲು ರೆಡಿಯಾಗಿವೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿರುವ ಕ್ರಿಕೆಟ್ ಅಭಿಮಾನಿಗಳು, ಈ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗದಿರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.

ಹವಾಮಾನ ಇಲಾಖೆಯ ವರದಿಯ ಪ್ರಕಾರ ಇಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ತಿಳಿಸಿದೆ. ಕೇವಲ 2% ಮಾತ್ರ ಮಳೆಯಾಗುವ ಸಾಧ್ಯತೆಯಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ತೀರಾ ಕಡಿಮೆ ಎನಿಸಿದೆ. 

ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೆ ಏನಾಗುತ್ತೆ..?

ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಕಡಿಮೆ ಎನಿಸಿದೆ. ಒಂದು ವೇಳೆ ಹೀಗಿದ್ದೂ ದುರಾದೃಷ್ಟವಶಾತ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೆ, ನಿಗದಿತ ಸಮಯದೊಳಗೆ ಪಂದ್ಯ ಆಯೋಜನೆ ಗೊಳ್ಳದೇ ಹೋದರೆ, ಕ್ವಾಲಿಫೈಯರ್ 1, ಕ್ವಾಲಿಫೈಯರ್ 2 ಹಾಗೂ ಫೈನಲ್ ಪಂದ್ಯಗಳನ್ನು ಸೂಪರ್ ಓವರ್ ಆಡಿಸಿ ಫಲಿತಾಂಶ ನೀಡಲಾಗುತ್ತದೆ. ಒಂದು ವೇಳೆ ಸೂಪರ್ ಓವರ್‌ ಕೂಡಾ ಆಡಿಸಲು ಸಾಧ್ಯವಿಲ್ಲ ಎಂದಾದರೇ, ಲೀಗ್ ಹಂತದಲ್ಲಿ ತಂಡಗಳು ತೋರಿದ ಪ್ರದರ್ಶನದ ಆಧಾರದಲ್ಲಿ ತಂಡವನ್ನು ಮುಂದಿನ ಹಂತಕ್ಕೆ ಕಳಿಸಲಾಗುತ್ತದೆ.

IPL 2023 ಫೈನಲ್‌ ಟಿಕೆ​ಟ್‌​ಗಾಗಿ ಚೆನ್ನೈ-ಗುಜ​ರಾತ್‌ ಫೈಟ್‌

ಉದಾಹರಣೆಗೆ ಒಂದು ವೇಳೆ ಮೊದಲ ಕ್ವಾಲಿಫೈಯರ್ ಪಂದ್ಯವು ಮಳೆಯಿಂದ ರದ್ದಾದರೇ, ಸೂಪರ್ ಓವರ್ ಕೂಡಾ ಆಡಿಸಲು ಸಾಧ್ಯವಾಗದಿದ್ದರೆ, ಗುಜರಾತ್ ಟೈಟಾನ್ಸ್‌ ತಂಡವು ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರಿಂದ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯಲಿದೆ. ಇನ್ನು ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎರಡನೇ ಕ್ವಾಲಿಫೈಯರ್ ಆಡಲಿದೆ.

ಇನ್ನು ಎಲಿಮಿನೇಟರ್ ಪಂದ್ಯ ಕೂಡಾ ಇದೇ ಮೈದಾನದಲ್ಲಿ ಮೇ 24ರಂದು ನಡೆಯಲಿದೆ. ಈ ಪಂದ್ಯವು ರದ್ದಾದರೇ, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಲಖನೌ ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯವನ್ನಾಡಲು ಪ್ರವೇಶ ಪಡೆಯಲಿದೆ. ಇಲ್ಲಿ ಗೆಲುವು ಸಾಧಿಸುವ ತಂಡವು ನೇರವಾಗಿ ಮೇ 28ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ,

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಹಾಗೂ ಜಿಯೋ ಸಿನಿಮಾ

ಪಿಚ್‌ ರಿಪೋ​ರ್ಟ್‌

ಚೆಪಾಕ್‌ ಕ್ರೀಡಾಂಗ​ಣದ ಪಿಚ್‌ ಸ್ಪಿನ್‌ ಸ್ನೇಹಿ​ಯಾ​ಗಿ​ದ್ದರೂ ಈ ಬಾರಿ ಬ್ಯಾಟ​ರ್‌​ಗಳೂ ಮಿಂಚಿ​ದ್ದಾರೆ. ಲೀಗ್‌ ಹಂತದ 7 ಪಂದ್ಯ​ಗ​ಳಲ್ಲಿ 4ರಲ್ಲಿ ಚೇಸ್‌ ಮಾಡಿದ ತಂಡ ಗೆಲುವು ಸಾಧಿ​ಸಿದೆ. ರಾತ್ರಿ​ ವೇಳೆ ಇಬ್ಬನಿ ಬೀಳುವ ಸಾಧ್ಯ​ತೆ ಇದ್ದು, ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿ​ಕೊ​ಳ್ಳ​ಬ​ಹು​ದು.