ಮುಂಬೈ ಇಂಡಿಯನ್ಸ್‌ಗೆ 186 ರನ್ ಗುರಿ ನೀಡಿದ ಕೆಕೆಆರ್ಸ್ಪೋಟಕ ಶತಕ ಸಿಡಿಸಿ ಮಿಂಚಿದ ವೆಂಕಟೇಶ್ ಅಯ್ಯರ್‌ಕೆಕೆಆರ್ ಪರ ಏಕಾಂಗಿ ಹೋರಾಟ ಮಾಡಿದ ಅಯ್ಯರ್
ಮುಂಬೈ(ಏ.16): ಪ್ರತಿಭಾನ್ವಿತ ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್ ಬಾರಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 185 ರನ್ ಗಳಿಸಿದ್ದು, ಆತಿಥೇಯ ಮುಂಬೈ ಇಂಡಿಯನ್ಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದೆ.
ಇಲ್ಲಿನ ವಾಂಖೇಡೆ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್ ಎನ್ ಜಗದೀಶನ್ 5 ಎಸೆತಗಳನ್ನು ಎದುರಿಸಿ ಖಾತೆ ತೆರೆಯುವ ಮುನ್ನವೇ ಕ್ಯಾಮರೋನ್ ಗ್ರೀನ್ ಬೌಲಿಂಗ್‌ನಲ್ಲಿ ಹೃತ್ತಿಕ್ ಶೊಕೀನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ರೆಹಮನುಲ್ಲಾ ಗುರ್ಬಾಜ್ ಮತ್ತೊಮ್ಮೆ ಅಲ್ಪಮೊತ್ತಕ್ಕೆ(08) ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ನಾಯಕ ನಿತೀಶ್ ರಾಣಾ(05) ಕೂಡಾ ಎರಡಂಕಿ ಮೊತ್ತ ದಾಖಲಿಸಲು ವಿಫಲವಾದರು.
ವೆಂಕಟೇಶ್ ಅಯ್ಯರ್ ಕೆಚ್ಚೆದೆಯ ಶತಕ: ಒಂದು ಕಡೆ ವಿಕೆಟ್ ಉರುಳಿದರೂ, ಮತ್ತೊಂದೆಡೆ ನಿರ್ಭಯವಾಗಿ ಬ್ಯಾಟ್ ಬೀಸಿದ ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್, ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಇದು ಐಪಿಎಲ್‌ನಲ್ಲಿ ವೆಂಕಟೇಶ್ ಅಯ್ಯರ್ ಬಾರಿಸಿದ ಮೊದಲ ಶತಕ ಹಾಗೂ ಕೋಲ್ಕತಾ ಪರ ದಾಖಲಾದ ಎರಡನೇ ಶತಕ ಎನಿಸಿಕೊಂಡಿತ್ತು. ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಎದುರು ಕೆಕೆಆರ್ ತಂಡದ ಬ್ರೆಂಡನ್ ಮೆಕ್ಕಲಂ ಸಿಡಿಲಬ್ಬರದ ಶತಕ ಸಿಡಿಸಿದ್ದರು. ಇದಾಗಿ 15 ವರ್ಷಗಳ ಬಳಿಕ ಕೆಕೆಆರ್ ತಂಡದಿಂದ ಎರಡನೇ ಶತಕ ಮೂಡಿ ಬಂದಿದೆ.
IPL 2023: ಕೆಕೆಆರ್ ಎದುರು ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ, ಐಪಿಎಲ್‌ಗೆ ಅರ್ಜುನ್ ತೆಂಡುಲ್ಕರ್ ಪಾದಾರ್ಪಣೆ
ವೆಂಕಟೇಶ್ ಅಯ್ಯರ್ ಒಟ್ಟು 49 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ವೆಂಕಟೇಶ್ ಅಯ್ಯರ್, 51 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 104 ರನ್ ಬಾರಿಸಿ ರಿಲೆ ಮೆರಿಡಿತ್ ಬೌಲಿಂಗ್‌ನಲ್ಲಿ ಡುಯಾನ್ ಯಾನ್ಸೆನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಇನ್ನುಳಿದಂತೆ ಕೊನೆಯಲ್ಲಿ ಶಾರ್ದೂಲ್ ಠಾಕೂರ್(13), ರಿಂಕು ಸಿಂಗ್(18) ಹಾಗೂ ಆಂಡ್ರೆ ರಸೆಲ್ ಅಜೇಯ 20 ರನ್ ಬಾರಿಸುವ ಮೂಲಕ ತಂಡ 180ರ ಗಡಿ ದಾಟಿಸಲು ನೆರವಾದರು.
