Asianet Suvarna News Asianet Suvarna News

CSK Champion: ಗುಜರಾತ್ ಮಣಿಸಿದ ಧೋನಿ ಸೇನೆ ಐಪಿಎಲ್ ಚಾಂಪಿಯನ್‌

ಗುಜರಾತ್ ಟೈಟಾನ್ಸ್‌  ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್‌ ಚಾಂಪಿಯನ್‌
ಫೈನಲ್‌ನಲ್ಲಿ ರೋಚಕ ಜಯ ಸಾಧಿಸಿದ ಎಂ ಎಸ್ ಧೋನಿ ಪಡೆ
5ನೇ ಬಾರಿಗೆ ಕಪ್‌ ಗೆದ್ದು ಮುಂಬೈ ದಾಖಲೆ ಸರಿಗಟ್ಟಿದ ಸಿಎಸ್‌ಕೆ

IPL 2023 Final Ravindra Jadeja last ball 4 helps Chennai Super Kings win 5th title in thriller kvn
Author
First Published May 30, 2023, 2:11 AM IST

ಅಹಮದಾಬಾದ್‌(ಮೇ.30): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ದಾಖಲೆಯ 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಗುಜರಾತ್ ಟೈಟಾನ್ಸ್ ಎದುರು ಚೆನ್ನೈ ಸೂಪರ್‌ ಕಿಂಗ್ಸ್ ತಂಡವು 5 ವಿಕೆಟ್ ರೋಚಕ ಜಯ ಸಾಧಿಸುವ ಮೂಲಕ 5ನೇ ಬಾರಿಗೆ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ. 

ಹೌದು, ಕ್ರಿಕೆಟ್‌ ಅಭಿಮಾನಿಗಳನ್ನು ಸಾಕಷ್ಟು ಕಾಲ ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಗೂ ಯೆಲ್ಲೋ ಆರ್ಮಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಗೆಲ್ಲಲು ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿದ್ದಾಗ, ಮೋಯಿತ್ ಶರ್ಮಾ ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡಕ್ಕೆ ರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಮಹತ್ವದ ಫೈನಲ್ ಪಂದ್ಯಕ್ಕೆ ಮಳೆರಾಯ ಅಡ್ಡಿ ಪಡಿಸಿದ್ದ. ಮೇ 28ರಂದು ನಡೆಯಬೇಕಿದ್ದ ಫೈನಲ್ ಪಂದ್ಯವು, ಮೀಸಲು ದಿನವಾದ ಮೇ 29ಕ್ಕೆ ಮುಂದೂಡಲ್ಪಟ್ಟಿತು. ಇನ್ನು ಮೀಸಲು ದಿನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಸಾಯಿ ಸುದರ್ಶನ್(96) ಸ್ಪೋಟಕ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್ ಕಲೆಹಾಕಿತು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುರಿ ಬೆನ್ನತ್ತಲು ಸಿದ್ದವಾದ ಬೆನ್ನಲ್ಲೇ ಮತ್ತೆ ಮಳೆರಾಯ ಪಂದ್ಯಕ್ಕೆ ಅಡ್ಡಿಪಡಿಸಿದ. ಹೀಗಾಗಿ ಚೆನ್ನೈಗೆ ಗೆಲ್ಲಲು ಡೆಕ್ವರ್ಥ್‌ ಲೂಯಿಸ್ ನಿಯಮದನ್ವಯ 15 ಓವರ್‌ಗಳಲ್ಲಿ 171 ರನ್ ಗುರಿ ನೀಡಲಾಗಿತ್ತು.

IPL 2023 ಐಪಿಎಲ್ ಫೈನಲ್ ಪಂದ್ಯಕ್ಕೆ ಮತ್ತೆ ಮಳೆ ಕಾಟ, ಗುಜರಾತ್ vs ಚೆನ್ನೈ ಪಂದ್ಯ ಸ್ಥಗಿತ!

ಕಠಿಣ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮೊದಲ ಓವರ್‌ನಿಂದಲೇ ಡೆವೊನ್ ಕಾನ್‌ವೇ ಹಾಗೂ ಋತುರಾಜ್‌ ಗಾಯಕ್ವಾಡ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮೊದಲ 4 ಓವರ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 52 ರನ್‌ಗಳ ಜತೆಯಾಟ ನಿಭಾಯಿಸಿತು. ಗುಜರಾತ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಈ ಜೋಡಿ ಮೊದಲ ವಿಕೆಟ್‌ಗೆ 39 ಎಸೆತಗಳನ್ನು ಎದುರಿಸಿ 74 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿ ಕೊಟ್ಟರು. ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್‌ 16 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 26 ರನ್ ಬಾರಿಸಿ ನೂರ್ ಅಹಮ್ಮದ್‌ಗೆ ವಿಕೆಟ್‌ ಒಪ್ಪಿಸಿದರು.

ಇನ್ನು ಮತ್ತೊಂದು ತುದಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಡೆವೊನ್ ಕಾನ್‌ವೇ ಕೂಡಾ ಅದೇ ಓವರ್‌ನ ಕೊನೆಯ ಎಸೆತದಲ್ಲಿ ನೂರ್‌ ಅಹಮ್ಮದ್‌ಗೆ ವಿಕೆಟ್ ಒಪ್ಪಿಸಿದರು. ಕಾನ್‌ವೇ ವಿಕೆಟ್ ಒಪ್ಪಿಸುವ ಮುನ್ನ 25 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 47 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಐಪಿಎಲ್ ಆವೃತ್ತಿಯೊಂದರಲ್ಲಿ ಮೈಕಲ್ ಹಸ್ಸಿ ಬಳಿಕ(733) ಚೆನ್ನೈ ಸೂಪರ್ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನ್ನುವ ಕೀರ್ತಿಗೆ ಡೆವೊನ್‌ ಕಾನ್‌ವೇ(672) ಯಶಸ್ವಿಯಾದರು.

ಇನ್ನು ಒಂದೇ ಓವರ್‌ನಲ್ಲಿ ಸತತ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಸಿಎಸ್‌ಕೆ ಪಡೆಗೆ ಮೂರನೇ ವಿಕೆಟ್‌ಗೆ ಅಜಿಂಕ್ಯ ರಹಾನೆ ಹಾಗೂ ಶಿವಂ ದುಬೆ 23 ಎಸೆತಗಳಲ್ಲಿ 39 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮತ್ತೊಂದು ಸ್ಪೋಟಕ ಇನಿಂಗ್ಸ್ ಆಡಿದ ರಹಾನೆ 13 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 27 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಶಿವಂ ದುಬೆ 21 ಎಸೆತಗಳನ್ನು ಎದುರಿಸಿ ಎರಡು ಸಿಕ್ಸರ್ ಸಹಿತ 32 ರನ್ ಬಾರಿಸಿ ಅಜೇಯರಾಗುಳಿದರು.

ಕೊನೆಯಲ್ಲಿ ಅಂಬಟಿ ರಾಯುಡು 8 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 19 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಎಂ ಎಸ್ ಧೋನಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ಕೊನೆಯಲ್ಲಿ ಜಡ್ಡು 6 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 15 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Follow Us:
Download App:
  • android
  • ios