* ಲಖನೌದಲ್ಲಿಂದು ಸನ್‌ರೈಸರ್ಸ್-ಲಖನೌ ಸೂಪರ್ ಜೈಂಟ್ಸ್* ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಕೆ ಎಲ್ ರಾಹುಲ್* ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಆರೆಂಜ್ ಆರ್ಮಿ
ಲಖನೌ(ಏ.07): ದಕ್ಷಿಣ ಆಫ್ರಿಕಾದ ಏಡನ್ ಮಾರ್ಕ್ರಮ್ರ ನಾಯಕತ್ವದಡಿಯಲ್ಲಿ ಮೊದಲ ಬಾರಿ ಕಣಕ್ಕಿಳಿಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ 16ನೇ ಆವೃತ್ತಿ ಐಪಿಎಲ್ನಲ್ಲಿ ಶುಕ್ರವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಚೆನ್ನೈ ವಿರುದ್ಧದ ಸೋಲಿನ ಆಘಾತದಿಂದ ಹೊರಬಂದು ತವರಿನ 2ನೇ ಪಂದ್ಯದಲ್ಲೂ ಜಯ ತನ್ನದಾಗಿಸಿಕೊಳ್ಳಲು ಕೆ.ಎಲ್.ರಾಹುಲ್ ನಾಯಕತ್ವದ ಲಖನೌ ಕಾತರಿಸುತ್ತಿದೆ.
ಭುವನೇಶ್ವರ್ ನಾಯಕತ್ವದಡಿ ರಾಜಸ್ಥಾನ ವಿರುದ್ಧ ಮೊದಲ ಪಂದ್ಯವಾಡಿದ್ದ ಸನ್‌ರೈಸರ್ಸ್ ಹೈದ್ರಾಬಾದ್ ತವರಿನಲ್ಲೇ 72 ರನ್ ಹೀನಾಯ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಈ ಪಂದ್ಯಕ್ಕೆ ಮಾರ್ಕ್ರಮ್ ಜೊತೆಗೆ ಮಾರ್ಕೊ ಯಾನ್ಸೆನ್, ಹೆನ್ರಿಚ್ ಕ್ಲಾಸೆನ್ ಕೂಡಾ ಆಯ್ಕೆಗೆ ಲಭ್ಯವಿದ್ದು, ತಂಡದ ಬಲ ಹೆಚ್ಚಿಸಲಿದೆ. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಮಯಾಂಕ್ ಅಗರ್‌ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ ಅಬ್ಬರಿಸಬೇಕಾದ ಅಗತ್ಯವಿದೆ. ಸ್ಫೋಟಕ ಬ್ಯಾಟರ್ಗಳಾದ ಗ್ಲೆನ್ ಫಿಲಿಫ್ಸ್, ಹ್ಯಾರಿ ಬ್ರೂಕ್ ಆರಂಭಿಕ ಪಂದ್ಯದ ವೈಫಲ್ಯದಿಂದ ಹೊರಬರುವ ನಿರೀಕ್ಷೆಯಲ್ಲಿದ್ದಾರೆ.
ಪ್ರತಿಭಾವಂತ ವೇಗದ ಬೌಲಿಂಗ್ ಪಡೆಯನ್ನು ಹೊಂದಿದ್ದರೂ ರಾಜಸ್ಥಾನ ವಿರುದ್ಧ 200+ ರನ್ ಚಚ್ಚಿಸಿಕೊಂಡಿದ್ದ ಸನ್‌ರೈಸರ್ಸ್ ಹೈದ್ರಾಬಾದ್ಗೆ ಲಖನೌ ಬ್ಯಾಟರ್ಗಳನ್ನು ಕಟ್ಟಿಹಾಕಬೇಕಾದ ಅನಿವಾರ್ಯತೆ ಇದೆ. ಭುವನೇಶ್ವರ್, ನಟರಾಜನ್, ಉಮ್ರಾನ್ ಮಲಿಕ್, ಫಝಲ್ಹಕ್ ಫಾರೂಖಿ ಪರಿಣಾಮಕಾರಿಯಾಗದಿದ್ದರೆ ತಂಡಕ್ಕೆ ಮತ್ತೊಂದು ಸೋಲು ಎದುರಾಗುವುದು ಖಚಿತ. ವಾಷಿಂಗ್ಟನ್ ಸುಂದರ್, ಆದಿಲ್ ರಶೀದ್ ಸ್ಪಿನ್ ಪ್ರದರ್ಶನವೂ ನಿರ್ಣಾಯಕ ಎನಿಸಬಹುದು.
IPL 2023 ಕೇವಲ 123 ರನ್‌ಗೆ ಆಟ ಅಂತ್ಯ, ಆರ್‌ಸಿಬಿಗೆ ಮೊದಲ ಸೋಲಿನ ಆಘಾತ!
ಡಿ ಕಾಕ್ ಬಲ: ಇನ್ನೊಂದೆಡೆ ಡೆಲ್ಲಿ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದರೂ ಬಳಿಕ ಚೆನ್ನೈಗೆ ಶರಣಾಗಿದ್ದ ಲಖನೌಗೆ ಈ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಸೇವೆ ಲಭ್ಯವಾಗಲಿದ್ದು, ಬಲಿಷ್ಠ ಬ್ಯಾಟಿಂಗ್ ಪಡೆಗೆ ಮತ್ತಷ್ಟು ಬಲ ಸಿಗಲಿದೆ. ಅವರು 3ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಕೈಲ್ ಮೇಯರ್ಸ್ ಪ್ರಚಂಡ ಲಯದಲ್ಲಿದ್ದು, ನಾಯಕ ಕೆ.ಎಲ್.ರಾಹುಲ್ ಪರಿಣಾಮಕಾರಿ ಇನ್ನಿಂಗ್‌್ಸ ಆಡಲು ಎದುರು ನೋಡುತ್ತಿದ್ದಾರೆ. ತಾರಾ ಆಲ್ರೌಂಡರ್ಗಳಾದ ಕೆ.ಗೌತಮ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ ದೊಡ್ಡ ಪಾತ್ರ ನಿರ್ವಹಿಸುವ ನಿರೀಕ್ಷೆ ಇದೆ. 2 ಪಂದ್ಯಗಳಲ್ಲಿ 8 ವಿಕೆಟ್ ಕಿತ್ತಿರುವ ಮಾರ್ಕ್ ವುಡ್, 5 ವಿಕೆಟ್ ಪಡೆದಿರುವ ರವಿ ಬಿಷ್ಣೋಯಿ ಮತ್ತೊಮ್ಮೆ ಎದುರಾಳಿಗಳನ್ನು ಕಟ್ಟಿಹಾಕಲು ಕಾಯುತ್ತಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಕೇವಲ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, ಲಖನೌ ತಂಡವು ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಲಖನೌಗೆ ಸನ್‌ರೈಸರ್ಸ್ ತಿರುಗೇಟು ನೀಡುತ್ತಾ ಕಾದು ನೋಡಬೇಕಿದೆ.
ಸಂಭವನೀಯ ಆಟಗಾರರ ಪಟ್ಟಿ
ಹೈದ್ರಾಬಾದ್: ಮಯಾಂಕ್ ಅಗರ್‌ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ಏಯ್ಡನ್ ಮಾರ್ಕ್ರಮ್(ನಾಯಕ), ಹೆನ್ರಿಚ್ ಕ್ಲಾಸೆನ್, ವಾಷಿಂಗ್ಟನ್ ಸುಂದರ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಮಾರ್ಕೊ ಯಾನ್ಸನ್.
ಲಖನೌ: ಕೈಲ್ ಮೇಯರ್ಸ್, ಕೆ ಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಕೆ.ಗೌತಮ್, ಆಯುಷ್ ಬದೋನಿ, ಆವೇಶ್ ಖಾನ್, ರವಿ ಬಿಷ್ಣೋಯ್, ಮಾರ್ಕ್ ವುಡ್.
ಪಂದ್ಯ: ಸಂ.7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಚ್
ಏಕನಾ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, 2ನೇ ಇನ್ನಿಂಗ್್ಸನಲ್ಲಿ ಬ್ಯಾಟಿಂಗ್ ಕಷ್ಟವಾಗಬಹುದು. ಇಲ್ಲಿ ನಡೆದ 6 ಅಂ.ರಾ. ಟಿ20 ಪಂದ್ಯಗಳ ಪೈಕಿ 5ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಜಯಗಳಿಸಿದೆ. ಟಾಸ್ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ.

