ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದ್ದ ಆರ್‌ಸಿಬಿ ಇದೀಗ ಎರಡನೇ ಪಂದ್ಯದಲ್ಲಿ ಮುಗ್ಗರಿಸಿದೆ. ಕೋಲ್ಕತಾ ನೈಟ್ ರೈಡರ್ಸ್ ನೀಡಿದ್ದ ಬೃಹತ್ ಗುರಿ ಚೇಸ್ ಮಾಡಲು ಆರ್‌ಸಿಬಿ ವಿಫಲವಾಗಿದೆ.

ಕೋಲ್ಕತಾ(ಏ.06):  ಅಬ್ಬರ ಇಲ್ಲ, ಹೋರಾಟವೂ ಇಲ್ಲ, ರನ್ ಬರುತ್ತಿಲ್ಲ. ವಿಕೆಟ್ ಉಳಿಯುತ್ತಿಲ್ಲ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರಿಸ್ಥಿತಿ. ಕೆಕೆಆರ್ ಬೃಹತ್ ಮೊತ್ತ ನೋಡಿದ ಆರ್‌ಸಿಬಿ ಒಂದು ಕ್ಷಣ ಆತಂಕದಲ್ಲಿ ಮುಳುಗಿತು. ಬಳಿಕ ಈ ಹ್ಯಾಂಗ್ ಓವರ್‌ನಿಂದ ಆರ್‌ಸಿಬಿ ಹೊರಬಲಿಲ್ಲ. ಹೀಗಾಗಿ ದಿಟ್ಟ ಹೋರಾಟವೂ ಮೂಡಿಬರಲಿಲ್ಲ. 205 ರನ್ ಟಾರ್ಗೆಟ್ ಪಡೆದ ಆರ್‌ಸಿಬಿ 17.4 ಓವರ್‌ಗಳಲ್ಲಿ 123 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ತನ್ನ 2ನೇ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತು. ಐಪಿಎಲ್ 2023 ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ಮುಗ್ಗರಿಸಿದ್ದ ಕೆಕೆಆರ್ 2ನೇ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ರ81 ನ್‌ಗಳಿಂದ ಮಣಿಸಿದೆ.

ಕೊನೆಯ ಹಂತದಲ್ಲಿ ಶಾರ್ದೂಲ್ ಠಾಕೂರ್ ಹಾಗೂ ರಿಂಕು ಸಿಂಗ್ ಮಾಡಿದ ಮೋಡಿಗೆ ಆರ್‌ಸಿಬಿ ಲೆಕ್ಕಾಚಾರ ಎಲ್ಲಾ ಬುಡಮೇಲಾಗಿತ್ತು. 205 ರನ್ ಬೃಹತ್ ಟಾರ್ಗೆಟ್ ಪಡೆದ ಆರ್‌ಸಿಬಿ ಮೊದಲ ಪಂದ್ಯದಲ್ಲಿನ ಚೇಸಿಂಗ್ ನೆನಪಿಸಿಕೊಂಡು ಕಣಕ್ಕಿಳಿಯಿತು. ಆದರೆ ಇಲ್ಲೂ ಪ್ಲಾನ್ ವರ್ಕೌಟ್ ಆಗಲಿಲ್ಲ . ಆರ್‌ಸಿಬಿ ಆರಂಭ ಉತ್ತವಾಗಿತ್ತು. ಆದರೆ ಆರಂಭಿಕರ ವಿಕೆಟ್ ಪತನದ ಬಳಿಕ ಎಲ್ಲವೂ ಆತಂಕ ತಂದಿತು. ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಮೊದಲ ವಿಕೆಟ್‌ಗೆ 44 ರನ್‌ ಜೊತೆಯಾಟ ನೀಡಿದ್ದರು. ಸುನಿಲ್ ನರೈನ್ ಆರ್‌ಸಿಬಿಗೆ ಮೊದಲ ಆಘಾತ ನೀಡಿದರು. 21 ರನ್ ಸಿಡಿಸಿದ್ದ ಕೊಹ್ಲಿ ವಿಕೆಟ್ ಪತನಗೊಂಡಿತು. ಇದರ ಬೆನ್ನಲ್ಲೇ ಫಾಫ್ ಡುಪ್ಲೆಸಿಸ್ 23 ರನ್ ಸಿಡಿಸಿ ನಿರ್ಗಮಿಸಿದರು.

ಆರ್‌ಸಿಬಿ vs ಕೆಕೆಆರ್ ಟಾಸ್ ವೇಳೆ ಗೊಂದಲ, ನಾಯಕ ನಿತೀಶ್ ರಾಣಾ ಆಕ್ರೋಶ!

ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಮೋಡಿಗೆ ಆರ್‌ಸಿಬಿ ಬಳಿ ಉತ್ತರವೇ ಇಲ್ಲದಾಯಿತು ಮಿಚೆಲ್ ಬ್ರೇಸ್‌ವೆಲ್ ಹೋರಾಟದ ಸೂಚನೆ ನೀಡಿದರು. ಆದರೆ ಮತ್ತೊಂದೆಡೆ ವಿಕೆಟ್ ಪತನ ಹೆಚ್ಚಾಯಿತು. ಗ್ಲೆನ್ ಮ್ಯಾಕ್ಸ್‌ವೆಲ್ 5 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಬ್ಯಾಟಿಂಗ್ ಆರ್ಡರ್‌ನಲ್ಲಿ ಬದಲಾವಣೆ ಮಾಡಿದ ಆರ್‌ಸಿಬಿ ಹರ್ಷಲ್ ಪಟೇಲ್‌ಗೆ ಅವಕಾಶ ನೀಡಿತು. ಬಳಿಕ ಶಾರ್ದೂಲ್ ಠಾಕೂರ್ ರೀತಿಯ ಬ್ಯಾಟಿಂಗ್ ಪ್ರದರ್ಶನ ನಿರೀಕ್ಷಿಸಿತು. ಆದರೆ ಪಟೇಲ್ ಡಕೌಟ್ ಆದರು.

ಇತ್ತ ಶಹಬಾಜ್ ಅಹಮ್ಮದ್ 1 ರನ್ ಸಿಡಿಸಿ ನಿರ್ಗಮಿಸಿದರು. ಮಿಚೆಲ್ ಬ್ರೇಸ್‌ವೆಲ್ ಹಾಗೂ ದಿನೇಶ್ ಕಾರ್ತಿಕ್ ಹೋರಾಟ ಆರ್‌ಸಿಬಿಗೆ ಕೊಂಚ ಸಮಾಧಾನ ತಂದಿತು.ಅಷ್ಟರಲ್ಲೇ ಬ್ರೇಸ್‌ವೆಲ್ ವಿಕೆಟ್ ಪತನಗೊಂಡಿತು. 19 ರನ್ ಸಿಡಿಸಿ ಬ್ರೇಸ್‌ವೆಲ್ ಔಟಾದರು.ದಿನೇಶ್ ಕಾರ್ತಿಕ್ 9 ರನ್‌ಗೆ ಸುಸ್ತಾದರು. ಅನೂಜ್ ರಾವತ್ 1 ರನ್ ಸಿಡಿಸಿದರು. ಕರಣ್ ಶರ್ಮಾ 1 ರನ್ ಸಿಡಿಸಿ ನಿರ್ಗಮಿಸಿದರು.

ಈ ಬಾರಿ IPL ಕಪ್ ಗೆಲ್ಲುವ ತಂಡದ ಬಗ್ಗೆ ಭವಿಷ್ಯ ನುಡಿದ ಎಬಿ ಡಿವಿಲಿಯರ್ಸ್‌..! ಆರ್‌ಸಿಬಿ ಅಲ್ಲವೆಂದ ಎಬಿಡಿ

ಡೇವಿಡ್ ವೀಲೆ ಹಾಗೂ ಆಕಾಶ್ ದೀಪ್ ಅಂತಿಮ ಹಂತದಲ್ಲಿ ಹೋರಾಟ ನೀಡಿದರು. ವೀಲೆ ಅಜೇಯ 20 ರನ್ ಸಿಡಿಸಿದರೆ, ಆಕಾಶ್ ದೀಪ್ 17 ರನ್ ಕಾಣಿಕೆ ನೀಡಿದರು. ಈ ಮೂಲಕ ಆರ್‌ಸಿಬಿ 100 ರನ್ ಗಡಿ ದಾಡಿತು. ಆದರೆ 17.4 ಓವರ್‌ಗಳಲ್ಲಿ 123 ರನ್ ಸಿಡಿಸಿ ಆಲೌಟ್ ಆಯಿತು. ಕೆಕೆಆರ್ 81 ರನ್ ಭರ್ಜರಿ ಗೆಲುವು ದಾಖಲಿಸಿತು.