ಮುಂಬೈ ವಿರುದ್ಧ ಶುಭಾರಂಭ ಮಾಡಿದ್ದ ಆರ್ಸಿಬಿಗೆ ಸತತ 2ನೇ ಗೆಲುವಿನ ಗುರಿಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ಪಂದ್ಯಆರ್ಸಿಬಿ ಪರ ಟಾಪ್ಲಿ ಬದಲು ವಿಲ್ಲಿ ಕಣಕ್ಕಿಳಿಯುವ ಸಾಧ್ಯತೆಪಂಜಾಬ್ಗೆ ಶರಣಾಗಿದ್ದ ಕೆಕೆಆರ್ ತೆರೆಯುತ್ತಾ ಗೆಲುವಿನ ಖಾತೆ?
ಕೋಲ್ಕತಾ(ಏ.06): 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ 16ನೇ ಆವೃತ್ತಿ ಐಪಿಎಲ್ಗೆ ಎಂಟ್ರಿ ಕೊಟ್ಟಿರುವ ಆರ್ಸಿಬಿ ಸತತ 2ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರುವ ನಿರೀಕ್ಷೆಯಲ್ಲಿದ್ದು, ಗುರುವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್ಸಿಬಿ 8 ವಿಕೆಟ್ ಗೆಲುವು ಸಾಧಿಸಿತ್ತು. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಡಕ್ವರ್ತ್ ಲೂಯಿಸ್ ನಿಯಮದನ್ವಯ 7 ರನ್ಗಳಿಂದ ಪರಾಭವಗೊಂಡಿದ್ದು, ತವರಿನಲ್ಲಿ ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ.
ಗಾಯಾಳುಗಳ ಸಮಸ್ಯೆಗಳ ನಡುವೆಯೂ ಟೂರ್ನಿಗೆ ಕಾಲಿರಿಸಿದ್ದ ಆರ್ಸಿಬಿ ಮೊದಲ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ತೋರಿತ್ತು. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ತಮ್ಮ ಅಭೂತಪೂರ್ವ ಪ್ರದರ್ಶನ ಮುಂದುವರಿಸುವ ಕಾತರದಲ್ಲಿದ್ದು, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಬ್ರೇಸ್ವೆಲ್ ಪ್ರದರ್ಶನ ತಂಡಕ್ಕೆ ನಿರ್ಣಾಯಕ ಎನಿಸಬಹುದು. ದಿನೇಶ್ ಕಾರ್ತಿಕ್ ಜೊತೆ ಶಾಬಾಜ್ ಅಹ್ಮದ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ನಲ್ಲಿ ತಂಡಕ್ಕೆ ಬಲ ತುಂಬಬಲ್ಲರು.
IPL 2023 ಹೆಟ್ಮೆಯರ್ ಧ್ರುವ್ ಹೋರಾಟಕ್ಕೆ ಬೆಚ್ಚಿ ಬಿದ್ದ ಪಂಜಾಬ್, ಅಂತಿಮ ಓವರ್‌ನಲ್ಲಿ ಗೆದ್ದು ನಿಟ್ಟುಸಿರು!
ವೇಗದ ಬೌಲಿಂಗ್ ಪಡೆಯನ್ನು ಮೊಹಮದ್ ಸಿರಾಜ್ ಮುನ್ನಡೆಸಲಿದ್ದು, ಮತ್ತೊಮ್ಮೆ ಎದುರಾಳಿಗಳನ್ನು ಕಾಡಲು ಸಜ್ಜಾಗಿದ್ದಾರೆ. ಗಾಯಗೊಂಡಿರುವ ವೇಗಿ ರೀಸ್ ಟಾಪ್ಲಿ ಬದಲು ಡೇವಿಡ್ ವಿಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಜೊತೆಗೆ ಹರ್ಷಲ್ ಪಟೇಲ್, ಆಕಾಶ್‌ದೀಪ್ ಕೂಡಾ ಎದುರಾಳಿ ಬ್ಯಾಟರ್ಗಳನ್ನು ಕಟ್ಟಿಹಾಕುವ ನಿರೀಕ್ಷೆಯಲ್ಲಿದ್ದಾರೆ.
ರಾಣಾಗೆ ನಾಯಕತ್ವದ ಪರೀಕ್ಷೆ
ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೆಕೆಆರ್ ಮುನ್ನಡೆಸುತ್ತಿರುವ ನಿತೀಶ್ ರಾಣಾಗೆ ಮತ್ತೊಮ್ಮೆ ನಾಯಕತ್ವದ ಪರೀಕ್ಷೆ ಎದುರಾಗಲಿದ್ದು, ಅದರ ಜೊತೆಗೆ ಬ್ಯಾಟಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದ್ದಾರೆ. ಹಿರಿಯ ಆಲ್ರೌಂಡರ್‌ಗಳಾದ ಆ್ಯಂಡ್ರೆ ರಸೆಲ್, ಸುನಿಲ್ ನರೇನ್ ಮೇಲೆ ತಂಡ ಹೆಚ್ಚಾಗಿ ಅವಲಂಬಿಸಿದೆ. ಅನುಭವಿ ವೇಗಿಳಾದ ಟಿಮ್ ಸೌಥಿ, ಉಮೇಶ್ ಯಾದವ್ ಜೊತೆ ಸ್ಪಿನ್ನರ್ ವರುಣ್ ಚಕ್ರವರ್ತಿ ಮೇಲೆ ಆರ್ಸಿಬಿ ಬ್ಯಾಟರ್ಗಳನ್ನು ಕಟ್ಟಿಹಾಕಬೇಕಾದ ಜವಾಬ್ದಾರಿಯಿದೆ.
ಐಪಿಎಲ್ ಇತಿಹಾಸದಲ್ಲಿ ಇದುವರೆಗೂ 30 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಕೊಂಚ ಮೇಲುಗೈ ಸಾಧಿಸಿದೆ. 30 ಪಂದ್ಯಗಳ ಪೈಕಿ ಕೆಕೆಆರ್ ತಂಡವು 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.
ಸಂಭವನೀಯ ಆಟಗಾರರ ಪಟ್ಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಶಾಬಾಜ್ ಅಹಮ್ಮದ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್‌ದೀಪ್, ಮೊಹಮ್ಮದ್ ಸಿರಾಜ್.
ಕೋಲ್ಕತಾ ನೈಟ್ ರೈಡರ್ಸ್: ರೆಹಮನುಲ್ಲಾ ಗುರ್ಬಾಜ್, ಎನ್ ಜಗದೀಶನ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೇನ್, ಶಾರ್ದೂಲ್ ಠಾಕೂರ್, ಟಿಮ್ ಸೌಥಿ, ಅಂಕುಲ್ ರಾಯ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ಪಂದ್ಯ: ಸಂಜೆ 7.30ರಿಂದ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಚ್
ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿ ಎನಿಸಿಕೊಂಡಿದ್ದು, ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆಯಿದೆ. ಸಣ್ಣ ಬೌಂಡರಿಗಳಿರುವ ಕಾರಣ ಬ್ಯಾಟರ್ಗಳಿಗೆ ಹೆಚ್ಚಿನ ನೆರವು ನೀಡಬಹುದು. ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

