Asianet Suvarna News Asianet Suvarna News

IPL 2023 ಹೆಟ್ಮೆಯರ್ ಧ್ರುವ್ ಹೋರಾಟಕ್ಕೆ ಬೆಚ್ಚಿ ಬಿದ್ದ ಪಂಜಾಬ್, ಅಂತಿಮ ಓವರ್‌ನಲ್ಲಿ ಗೆದ್ದು ನಿಟ್ಟುಸಿರು!

ಶಿಖರ್ ಧವನ್ ಬ್ಯಾಟಿಂಗ್, ನಥನ್ ಎಲ್ಲಿಸ್ ಬೌಲಿಂಗ್ ದಾಳಿ ನಡುವೆ ರಾಜಸ್ಥಾನ ರಾಯಲ್ಸ್ ಶಿಮ್ರೊನ್ ಹೆಟ್ಮೆಯರ್ ಹಾಗೂ ಧ್ರುವ್ ಜುರೆಲ್ ಹೋರಾಟ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ದಿಟ್ಟ ಹೋರಾಟದ ನೀಡುವ ಮೂಲಕ ಪಂಜಾಬ್ ಕಿಂಗ್ಸ್ ಸುಲಭ ಗೆಲುವಿನ ಲೆಕ್ಕಾಚಾರ ಉಲ್ಟಾ ಮಾಡಿದರು. ಕೊನೆಯ ಓವರ್‌ನಲ್ಲಿ ಪಂಜಾಬ್ ನಿಟ್ಟುಸಿರು ಬಿಟ್ಟಿತು.

IPL 2023 Nathan Ellis help Punjab Kings to beat Rajasthan Royals by 5 runs ckm
Author
First Published Apr 5, 2023, 11:50 PM IST | Last Updated Apr 6, 2023, 4:37 PM IST

ಗುವ್ಹಾಟಿ(ಏ.05):   ಶಿಮ್ರೊನ್ ಹೆಟ್ಮೆಯರ್ ಹಾಗೂ ಧ್ರುವ್ ಜುರೆಲ್ ಹೋರಾಟಕ್ಕೆ ಪಂಜಾಬ್ ಕಿಂಗ್ಸ್ ಬೆಚ್ಚಿ ಬಿದ್ದಿತ್ತು. 198 ರನ್ ಬೃಹತ್ ಟಾರ್ಗೆಟ್ ನೀಡಿದ್ದರೂ ಒಂದು ಹಂತದಲ್ಲಿ ರಾಜಸ್ಥಾನಕ್ಕೆ ಚೇಸಿಂಗ್ ಅಸಾಧ್ಯ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಹೆಟ್ಮೆಯರ್ ಹಾಗೂ ಧ್ರುವ್ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡುವ ರೀತಿಯಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪೈಪೋಟಿಗೆ ಬಿದ್ದು ಬೌಂಡರಿ ಸಿಕ್ಸರ್ ಸಿಡಿಸಿದರು. ಅಂತಿಮ ಓವರ್‌ನಲ್ಲಿ ರಾಜಸ್ಥಾನ ಗೆಲುವಿಗೆ 16 ರನ್ ಅವಶ್ಯಕತೆ ಇತ್ತು. ಆದರೆ ಹೆಟ್ಮೆಯರ್ ವಿಕೆಟ್ ಪತನಗೊಂಡಿತು. ಇತ್ತ ಧ್ರುವ್ ಅಂತಿಮ ಎಸೆತಗಳಲ್ಲಿ ನಿರೀಕ್ಷಿತ ರನ್ ಸಿಡಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ಪಂಜಾಬ್ ಕಿಂಗ್ಸ್ 5 ರನ್ ಗೆಲುವು ದಾಖಲಿಸಿತು.

198 ರನ್ ಬೃಹತ್ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್ ಕೆಲ ಬದಲಾವಣೆಯೊಂದಿಗೆ ಬ್ಯಾಟಿಂಗ್ ಆರಂಭಿಸಿತು. ಯಶಸ್ವಿ ಜೈಸ್ವಾಲ್ ಜೊತೆ ಆರಂಭಿಕನಾಗಿ ಆರ್ ಅಶ್ವಿನ್ ಅಖಾಡಕ್ಕೆ ಇಳಿದಿದ್ದರು. ಆದರೆ ರಾಜಸ್ಥಾನ ರಾಯಲ್ಸ್ ತಂಡದ ಪ್ಲಾನ್ ವರ್ಕೌಟ್ ಆಗಲಿಲ್ಲ. ಕಾರಣ ರಾಜಸ್ಥಾನ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಯಶಸ್ವಿ ಜೈಸ್ವಾಲ್ 11 ರನ್ ಸಿಡಿಸಿ ಔಟಾದರೆ,  ಅಶ್ವಿನ್ ಡಕೌಟ್ ಆದರು. 26 ರನ್ ಗಳಿಸುವಷ್ಟರಲ್ಲೇ  ರಾಯಲ್ಸ್ 2 ವಿಕೆಟ್ ಕಳೆದುಕೊಂಡಿತು.

ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ ಜೊತೆಯಾಟದಿಂದ ರಾಜಸ್ಥಾನ ರಾಯಲ್ಸ್ ಚೇತರಿಸಿಕೊಂಡಿತು. ಆದರೆ ಬಟ್ಲರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುವ ಮೊದಲೇ ವಿಕೆಟ್ ಕೈಚೆಲ್ಲಿದರು. ಬಟ್ಲರ್ 19 ರನ್ ಸಿಡಿಸಿ ಔಟಾದರು.  ಆದರೆ ಸಂಜು ಸ್ಯಾಮ್ಸನ್ ದಿಟ್ಟ ಹೋರಾಟ ನೀಡಿದರು. ಕುಸಿದ ತಂಡಕ್ಕೆ ಆಸರೆಯಾದ ಸಂಜು 5 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 42 ರನ್ ಸಿಡಿಸಿ ಔಟಾದರು.

ದೇವದತ್ ಪಡಿಕ್ಕಲ್ ಹಾಗೂ ರಿಯಾನ ಪರಾಗ್ ಹೋರಾಟದ ಸೂಚನೆ ನೀಡಿದರು. ಆದರೆ ಪರಾಗ್ 20 ರನ್ ಸಿಡಿಸಿ ನಿರ್ಗಮಿಸಿದರೆ, ಪಡಿಕ್ಕಲ್ 21 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಶಿಮ್ರೊನ್ ಹೆಟ್ಮೆಯರ್ ಹಾಗೂ ಧ್ರುವ್ ಜುರೆಲ್ ಜೊತೆಯಾಟ ರಾಯಲ್ಸ್ ತಂಡಕ್ಕೆ ಹೊಸ ಚೈತನ್ಯ ಮೂಡಿಸಿತು. ಹೆಟ್ಮೆಯರ್ ಬೌಂಡರಿ ಸಿಕ್ಸರ್ ಆಟಕ್ಕೆ ಪಂಜಾಬ್ ಲೆಕ್ಕಾಚಾರ ಉಲ್ಟಾ ಹೊಡೆಯಲು ಆರಂಭಿಸಿತು. ಇತ್ತ ಧ್ರುವ್ ಜುರೆಲ್ ಕೂಡ ಉತ್ತಮ ಸಾಥ್ ನೀಡಿದರು. 19ನೇ ಓವರ್‌ನಲ್ಲಿ ಧ್ರುವ್ ಸಿಕ್ಸರ್ ಸಿಡಿಸಿ ಚೇಸಿಂಗ್ ಮತ್ತಷ್ಟು ರೋಚಕವಾಗಿಸಿದರು.

ಅಂತಿಮ 6 ಎಸೆತದಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿಗೆ 16 ರನ್ ಅವಶ್ಯಕತೆ ಇತ್ತು. ಆದರೆ ಹೆಟ್ಮೆಯರ್ 18 ಎಸೆತದಲ್ಲಿ 36 ರನ್ ಸಿಡಿಸಿ ಔಟಾದರು. ಇತ್ತ ಧ್ರುವ್ ಒಂದು ಬೌಂಡರಿ ಸಿಡಿಸಲು ಮಾತ್ರ ಸಾಧ್ಯವಾಯಿತು. ಹೀಗಾಗಿ ರಾಜಸ್ಥಾನ 7 ವಿಕೆಟ್ ಕಳೆದುಕೊಂಡು 192 ರನ್ ಸಿಡಿಸಿತು. ಇಷ್ಟೇ ಅಲ್ಲ ಕೇವಲ 5 ರನ್ ಸೋಲು ಕಂಡಿತು. ಧ್ರುವ್ 15 ಎಸೆತದಲ್ಲಿ ಅಜೇಯ 32 ರನ್ ಸಿಡಿಸಿದರು.

ಪಂಜಾಬ್ ಇನ್ನಿಂಗ್ಸ್
ಪಂಜಾಬ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಾಯಕ ಶಿಖರ್ ಧವನ್ ಹಾಗೂ ಪ್ರಭಾಸಿಮ್ರನ್ ಸಿಂಗ್ ಆರಂಭಕ್ಕೆ ರಾಯಲ್ಸ್ ಸುಸ್ತಾಗಿತ್ತು. ಪ್ರಭಾಸಿಮ್ರನ್ 60 ರನ್ ಕಾಣಿಕೆ ನೀಡಿದ್ದರು. ಇತ್ತ ನಾಯಕ ಧವನ್ 56 ಎಸೆತದಲ್ಲಿ ಅಜೇಯ 86  ರನ್ ಸಿಡಿಸಿದರು. ಜಿತೇಶ್ ಶರ್ಮಾ 27 ರನ್ ಕಾಣಿಕೆ ನೀಡಿದರು. ಇತರರಿಂದ ಉತ್ತಮ ರನ್ ಹರಿದು ಬರಲಿಲ್ಲ. ಈ ಮೂಲಕ ಪಂಜಾಬ್ 4 ವಿಕೆಟ್ ನಷ್ಟಕ್ಕೆ 197 ರನ್ ಸಿಡಿಸಿತು.

IPL 2023 Nathan Ellis help Punjab Kings to beat Rajasthan Royals by 5 runs ckm

Latest Videos
Follow Us:
Download App:
  • android
  • ios