ಸತತ 2 ಪಂದ್ಯ ಸೋತಿರುವ ಆರ್ಸಿಬಿಗೆ ತವರಿನಲ್ಲಿ ಜಯದ ಲಯಕ್ಕೆ ಮರಳುವ ಕಾತರಬೌಲಿಂಗ್ ವಿಭಾಗದ ವೈಫಲ್ಯ ತಂಡಕ್ಕೆ ತಲೆನೋವುಹಸರಂಗ ಆಡುವ ನಿರೀಕ್ಷೆಆಡಿದ ನಾಲ್ಕೂ ಪಂದ್ಯ ಸೋತಿರುವ ಡೆಲ್ಲಿಗೆ ಮೊದಲ ಗೆಲುವಿನ ಗುರಿ
ಬೆಂಗಳೂರು(ಏ.15): ಭರ್ಜರಿ ಗೆಲುವಿನೊಂದಿಗೆ 16ನೇ ಆವೃತ್ತಿ ಐಪಿಎಲ್ನಲ್ಲಿ ಶುಭಾರಂಭ ಮಾಡಿದ ಹೊರತಾಗಿಯೂ ಬಳಿಕ ಸತತ 2 ಸೋಲಿನೊಂದಿಗೆ ಕಂಗೆಟ್ಟಿರುವ ಆರ್ಸಿಬಿ ಗೆಲುವಿನ ಹಳಿಗೆ ಮರಳಲು ಕಾಯುತ್ತಿದ್ದು, ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದೆ. ತವರಿನಲ್ಲೇ ಎದುರಾಗಿದ್ದ ಲಖನೌ ವಿರುದ್ಧದ ಕಳೆದ ಪಂದ್ಯದ ಆಘಾತಕಾರಿ ಸೋಲಿನ ನೋವಿನಿಂದ ಹೊರಬರುವುದರ ಜೊತೆಗೆ ನೆಟ್ ರನ್ರೇಟ್ನಲ್ಲೂ ಮೇಲೇರಲು ಆರ್ಸಿಬಿ ಕಾಯುತ್ತಿದೆ. ಅತ್ತ ಸತತ 4 ಸೋಲಿನೊಂದಿಗೆ ಕುಗ್ಗಿ ಹೋಗಿರುವ ಡೆಲ್ಲಿ ಟೂರ್ನಿಯಲ್ಲಿ ಮೊದಲ ಗೆಲುವಿಗಾಗಿ ಕಾತರಿಸುತ್ತಿದೆ.
ಲಖನೌ ವಿರುದ್ಧ ಡೆತ್ ಔವರ್ಗಳಲ್ಲಿ ಆರ್ಸಿಬಿ ವೇಗಿಗಳು ಅತ್ಯುತ್ತಮ ಪ್ರದರ್ಶನ ತೋರಿದ್ದರೂ ಬೌಲರ್ಗಳ ಒಟ್ಟಾರೆ ಪ್ರದರ್ಶನ ನೀರಸವಾಗಿತ್ತು. ಸಿರಾಜ್ ಹೊರತುಪಡಿಸಿ ಇತರೆ ಬೌಲರ್ಗಳು ದುಬಾರಿಯಾಗಿದ್ದರು. ವೇಯ್‌್ನ ಪಾರ್ನೆಲ್ 3 ವಿಕೆಟ್ ಕಿತ್ತರೂ 41 ರನ್ ಬಿಟ್ಟುಕೊಟ್ಟಿದ್ದರು. ಹರ್ಷಲ್ ಪಟೇಲ್ ನಿರೀಕ್ಷೆ ಉಳಿಸಿಕೊಳ್ಳಲು ಪದೇ ಪದೇ ವಿಫಲರಾಗುತ್ತಿದ್ದು, ಅವರ ಬದಲು ಅವಿನಾಶ್ ಸಿಂಗ್ ಅಥವಾ ವೈಶಾಖ್ರನ್ನು ಕಣಕ್ಕಿಳಿಸಿದರೆ ಅಚ್ಚರಿಯಿಲ್ಲ. ತಾರಾ ಸ್ಪಿನ್ನರ್ ಹಸರಂಗ ತಂಡಕ್ಕೆ ಸೇರ್ಪಡೆಗೊಂಡಿದ್ದು, ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ವೇಯ್ನ್ ಪಾರ್ನೆಲ್ ಅಥವಾ ಡೇವಿಡ್ ವಿಲ್ಲಿ ಜಾಗ ಬಿಟ್ಟುಕೊಡಬೇಕಾಗಬಹುದು.
ಇದೇ ವೇಳೆ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿ, ಮ್ಯಾಕ್ಸ್‌ವೆಲ್ ಅಭೂತಪೂರ್ವ ಲಯದಲ್ಲಿದ್ದು, ತವರಿನ ಅಭಿಮಾನಿಗಳ ಮುಂದೆ ಮತ್ತೊಮ್ಮೆ ರನ್ ಹೊಳೆ ಹರಿಸಲು ಸಜ್ಜಾಗಿದ್ದಾರೆ.
IPL 2023 ರಾಣಾ, ರಿಂಕು ಹೋರಾಟ ವ್ಯರ್ಥ, ಬ್ರೂಕ್ ಸೆಂಚುರಿಗೆ ತಲೆಬಾಗಿದ ಕೆಕೆಆರ್!
ಒತ್ತಡದಲ್ಲಿ ಡೆಲ್ಲಿ: ಮತ್ತೊಂದೆಡೆ ಡೆಲ್ಲಿ ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದು, ಬ್ಯಾಟಿಂಗ್ ಜೊತೆ ಬೌಲಿಂಗ್ ವಿಭಾಗದಲ್ಲೂ ವೈಫಲ್ಯ ಅನುಭವಿಸಿದೆ. ವಾರ್ನರ್, ಅಕ್ಷರ್ ಪಟೇಲ್ ಬಿಟ್ಟರೆ ಉಳಿದವರು ಮಿಂಚುತ್ತಿಲ್ಲ. ವೇಗಿಗಳನ್ನು ಎದುರಿಸಲು ಪೃಥ್ವಿ ಶಾ ವಿಫಲರಾಗುತ್ತಿದ್ದು, ಮನೀಶ್ ಪಾಂಡೆ ಸಿಕ್ಕ ಅವಕಾಶ ಬಳಸಿಕೊಳ್ಳುತ್ತಿಲ್ಲ. ತಮ್ಮ ಮದುವೆಗಾಗಿ ಆಸ್ಪ್ರೇಲಿಯಾಗೆ ತೆರಳಿದ್ದ ಮಿಚೆಲ್ ಮಾರ್ಷ್ ವಾಪಸಾಗಿದ್ದು, ರೋವ್ಮನ್ ಪೋವೆಲ್ ಬದಲು ಆಡುವ ನಿರೀಕ್ಷೆ ಇದೆ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ನಲ್ಲಿ ಮಾಷ್‌ರ್ ಸಿಕ್ಸರ್ ಸುರಿಮಳೆ ಸುರಿಸಿದರೂ ಅಚ್ಚರಿಯಿಲ್ಲ. ಇನ್ನು, ಅನುಭವಿ ನೋಕಿಯ ಜೊತೆ ಸ್ಪಿನ್ನರ್ ಕುಲ್ದೀಪ್ ಯಾದವ್‌ರ ಪ್ರದರ್ಶನ ಡೆಲ್ಲಿಗೆ ನಿರ್ಣಾಯಕವಾಗಬಹುದು.
ಒಟ್ಟು ಮುಖಾಮುಖಿ: 28
ಆರ್ಸಿಬಿ: 17
ಡೆಲ್ಲಿ: 10
ಫಲಿತಾಂಶವಿಲ್ಲ: 01
ಸಂಭವನೀಯ ಆಟಗಾರರ ಪಟ್ಟಿ
ಆರ್ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್, ಶಾಬಾಜ್ ಅಹಮ್ಮದ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.
ಡೆಲ್ಲಿ: ಡೇವಿಡ್ ವಾರ್ನರ್(ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಯಶ್ ಧುಳ್, ಅಭಿಷೇಕ್ ಪೋರೆಲ್, ಕುಲ್ದೀಪ್ ಯಾದವ್, ಏನ್ರಿಚ್ ನೋಕಿಯ, ಮುಸ್ತಾಫಿಜುರ್ ರೆಹಮಾನ್, ಮುಕೇಶ್ ಕುಮಾರ್.
ಪಂದ್ಯ: ಮಧ್ಯಾಹ್ನ.30ಕ್ಕೆ,
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ದೊಡ್ಡ ಮೊತ್ತದ ಪಂದ್ಯಗಳಿಗೆ ಹೆಸರುವಾಸಿ. ಚೇಸಿಂಗ್ ಮಾಡಿದ ತಂಡಗಳೇ ಹೆಚ್ಚಾಗಿ ಗೆದ್ದ ಇತಿಹಾಸವಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.
ಆಟಗಾರರ ಜೊತೆ ಮೈದಾನದಲ್ಲಿ ಪಂತ್
ಅಪಘಾತಕ್ಕೀಡಾಗಿ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮಿಸಿದ್ದರು. ಈ ವೇಳೆ ಅಭ್ಯಾಸ ನಡೆಸುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಜೊತೆ ಕೆಲ ಕಾಲ ಚರ್ಚೆ ನಡೆಸಿ, ತಂಡಕ್ಕೆ ಉತ್ಸಾಹ ತುಂಬಿದರು. ಪಂದ್ಯದ ವೇಳೆ ಅವರು ಡೆಲ್ಲಿ ತಂಡದ ಡಗೌಟ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
