ಐಪಿಎಲ್‌ನಿಂದು ಮುಂಬೈ-ಡೆಲ್ಲಿ ನಡುವೆ ಕಾದಾಟಮೊದಲ ಗೆಲುವಿನ ನಿರೀಕ್ಷೆಯಲ್ಲಿ ಉಭಯ ತಂಡಗಳುಈಗಾಗಲೇ ಹ್ಯಾಟ್ರಿಕ್ ಸೋಲು ಅನುಭವಿಸಿರುವ ಡೆಲ್ಲಿ ಕ್ಯಾಪಿಟಲ್ಸ್
ನವದೆಹಲಿ(ಏ.11): 16ನೇ ಆವೃತ್ತಿ ಐಪಿಎಲ್ನಲ್ಲಿ ಇನ್ನಷ್ಟೇ ಗೆಲುವಿನ ಖಾತೆ ತೆರೆಯಬೇಕಿರುವ ಮುಂಬೈ ಇಂಡಿಯನ್ಸ್-ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮಂಗಳವಾರ ಪರಸ್ಪರ ಎದುರಾಗಲಿದ್ದು, ಮೊದಲ ಜಯದ ನಿರೀಕ್ಷೆಯಲ್ಲಿದೆ. ಪಂದ್ಯಕ್ಕೆ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತವರಿನ ಲಾಭವೆತ್ತುವ ಕಾತರದಲ್ಲಿದೆ.
ಮುಂಬೈ ತಂಡ ಆರ್‌ಸಿಬಿ, ಚೆನ್ನೈ ವಿರುದ್ಧ ಆಡಿದ 2 ಪಂದ್ಯಗಳಲ್ಲೂ ಸೋತಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಅತ್ತ ಡೆಲ್ಲಿ ತಂಡ ಲಖನೌ, ಗುಜರಾತ್, ರಾಜಸ್ಥಾನ ವಿರುದ್ಧದ ಪಂದ್ಯಗಳಲ್ಲಿ ಪರಾಭವಗೊಂಡು ಕೊನೆ ಸ್ಥಾನದಲ್ಲೇ ಬಾಕಿಯಾಗಿದೆ.
ಮುಂಬೈ ಇಂಡಿಯನ್ಸ್ ಈ ಬಾರಿ ಬ್ಯಾಟಿಂಗ್ನಲ್ಲಿ ಸಾಧಾರಣ ಪ್ರದರ್ಶನ ತೋರಿದರೂ ಬೌಲಿಂಗ್ನಲ್ಲಿ ಪರಿಣಾಮಕಾರಿಯಾಗಿಲ್ಲ. 2 ಪಂದ್ಯಗಳಲ್ಲಿ ಒಟ್ಟು 5 ವಿಕೆಟ್ ಮಾತ್ರ ಪಡೆದಿದ್ದು, ಬೂಮ್ರಾ ಅನುಪಸ್ಥಿತಿಯಲ್ಲಿ ಬೌಲಿಂಗ್ ಪಡೆ ಮೊನಚು ಕಳೆದುಕೊಂಡಿದೆ. ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಜೋಫ್ರಾ ಆರ್ಚರ್ ಈ ಪಂದ್ಯದಲ್ಲಿ ಆಡುವುದು ಇನ್ನೂ ಖಚಿತವಾಗಿಲ್ಲ. ಬೆಹ್ರನ್ಡ್ರಾಫ್, ಅರ್ಶದ್ ಖಾನ್, ಚಾವ್ಲಾ ನಿರೀಕ್ಷೆ ಉಳಿಸಿಕೊಳ್ಳಬೇಕಿದೆ. ಕ್ಯಾಮರೂನ್ ಗ್ರೀನ್, ಟಿಮ್ ಡೇವಿಡ್ರಿಂದ ನಾಯಕ ರೋಹಿತ್ ನೈಜ ಆಟ ನಿರೀಕ್ಷಿಸುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ತಿಲಕ್ ವರ್ಮಾ ಮಾತ್ರ ಲಯದಲ್ಲಿದ್ದು, ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಸ್ಥಿರತೆ ಕಂಡುಕೊಳ್ಳಬೇಕಾದ ಅಗತ್ಯವಿದೆ.
IPL 2023: ಚಿನ್ನಸ್ವಾಮಿಯಲ್ಲಿ ಪೂರನ್ ವೈಲೆಂಟ್, ಆರ್‌ಸಿಬಿ ಫುಲ್ ಸೈಲೆಂಟ್!
ಮತ್ತೊಂದೆಡೆ ಡೆಲ್ಲಿ ಬ್ಯಾಟಿಂಗ್ ಜೊತೆ ಬೌಲಿಂಗ್ ವಿಭಾಗದಲ್ಲೂ ವೈಫಲ್ಯ ಅನುಭವಿಸಿದೆ. ಡೇವಿಡ್ ವಾರ್ನರ್ ಬಿಟ್ಟರೆ ಉಳಿದವರು ರನ್ ಗಳಿಸಲು ತಿಣುಕಾಡುತ್ತಿದ್ದಾರೆ. ಪೃಥ್ವಿ ಶಾ, ಮನೀಶ್ ಪಾಂಡೆ ಸಿಕ್ಕ ಅವಕಾಶ ಬಳಸಿಕೊಳ್ಳುತ್ತಿಲ್ಲ. ಅನುಭವಿ ನೋಕಿಯ ಜೊತೆ ಯುವ ವೇಗಿಗಳಾದ ಖಲೀಲ್, ಮುಕೇಶ್ ತಂಡದಲ್ಲಿದ್ದರೂ ಎದುರಾಳಿ ಬ್ಯಾಟರ್ಗಳನ್ನು ಕಟ್ಟಿಹಾಕಲು ವಿಫಲರಾಗುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಮತ್ತೊಂದು ಸೋಲು ಕಟ್ಟಿಟ್ಟಬುತ್ತಿ.
ಮುಖಾಮುಖಿ: 32
ಮುಂಬೈ: 17
ಡೆಲ್ಲಿ: 15
ಸಂಭವನೀಯ ಆಟಗಾರರ ಪಟ್ಟಿ
ಮುಂಬೈ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಸ್ಟಬ್ಸ್, ಶೊಕೀನ್, ಜೇಸನ್ ಬೆಹ್ರನ್ಡ್ರಾಫ್, ಪೀಯೂಷ್ ಚಾವ್ಲಾ, ಅರ್ಶದ್ ಖಾನ್.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್(ನಾಯಕ), ಪೃಥ್ವಿ ಶಾ, ಮನೀಶ್ ಪಾಂಡೆ, ರಿಲೇ ರೊಸ್ಸೌ, ರೋವ್ಮನ್ ಪೋವೆಲ್, ಅಕ್ಷರ್ ಪಟೇಲ್, ಅಭಿಷೇಕ್, ಕುಲ್ದೀಪ್ ಯಾದವ್, ಏನ್ರಿಚ್ ನೋಕಿಯಾ, ಖಲೀಲ್ ಅಹಮ್ಮದ್, ಮುಕೇಶ್ ಕುಮಾರ್.
ಪಂದ್ಯ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಚ್
ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಸ್ಪಿನ್‌ಗೆ ಹೆಚ್ಚು ಅನುಕೂಲಕರವಾಗಿರಲಿದೆ. ಆದರೆ ಕಳೆದ ಪಂದ್ಯದಲ್ಲಿ ಇಲ್ಲಿನ ವೇಗಿಗಳಿಗೆ ಹೆಚ್ಚಿನ ನೆರವು ಸಿಕ್ಕಿತ್ತು. ಇಲ್ಲಿ ದೊಡ್ಡ ಮೊತ್ತ ದಾಖಲಾದ ಉದಾಹರಣೆ ಕಡಿಮೆ. ಟಾಸ್ ಮತ್ತೊಮ್ಮೆ ನಿರ್ಣಾಯಕ ಪಾತ್ರ ವಹಿಸಬಹುದು.
