ಜೈಪುರ ಎದುರು ಭರ್ಜರಿ ಗೆಲುವು ಸಾಧಿಸಿದ ಆರ್‍‌ಸಿಬಿ112 ರನ್ ಅಂತರದ ಗೆಲುವು ಸಾಧಿಸಿದ ಬೆಂಗಳೂರುಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡ ಆರ್‍‌ಸಿಬಿ

ಜೈಪುರ(ಮೇ.14): 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‍‌ಗಳು ಸ್ಮರಣೀಯ ಗೆಲುವು ತಂದುಕೊಟ್ಟಿದ್ದಾರೆ. ಬಲಾಢ್ಯ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ಕೇವಲ 59 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಆರ್‍‌ಸಿಬಿ ತಂಡವು 112 ರನ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ರಾಯಲ್ಸ್ ತಂಡವನ್ನು ಹಿಂದಿಕ್ಕಿ ಆರ್‍‌ಸಿಬಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದು, ಪ್ಲೇ ಆಫ್ ಪ್ರವೇಶಿಸುವ ಕನಸನ್ನು ಮತ್ತಷ್ಟು ಜೀವಂತವಾಗಿರಿಸಿಕೊಂಡಿದೆ.

ಇಲ್ಲಿನ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್‍‌ಸಿಬಿ ನೀಡಿದ್ದ 172 ರನ್‌ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆರಂಭದಲ್ಲೇ ಆರ್‍‌ಸಿಬಿ ವೇಗಿಗಳು ಶಾಕ್‌ ನೀಡಿದರು. ಕಳೆದ ಪಂದ್ಯದಲ್ಲಿ ಅಜೇಯ 98 ರನ್ ಬಾರಿಸಿದ್ದ ಯಶಸ್ವಿ ಜೈಸ್ವಾಲ್ ಖಾತೆ ತೆರೆಯುವ ಮುನ್ನವೇ ಸಿರಾಜ್ ಬೌಲಿಂಗ್‌ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಜೋಸ್ ಬಟ್ಲರ್ ಕೂಡಾ ಸತತ ಎರಡನೇ ಪಂದ್ಯದಲ್ಲಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಇದಾದ ಬಳಿಕ ಕ್ರೀಸ್‌ಗಿಳಿದ ನಾಯಕ ಸಂಜು ಸ್ಯಾಮ್ಸನ್(4) ಕೂಡಾ ಜವಾಬ್ದಾರಿಯುತ ಆಟವಾಡಲು ವಿಫಲವಾದರು. ಇನ್ನು ಮೊದಲ ಬಾರಿಗೆ ಐಪಿಎಲ್‌ನಲ್ಲಿ ಬ್ಯಾಟಿಂಗ್ ಮಾಡಲಿಳಿದ ಜೋ ರೂಟ್(10) ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ವೇಯ್ನ್ ಪಾರ್ನೆಲ್ ಅವಕಾಶ ನೀಡಲಿಲ್ಲ. ಇನ್ನು ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಕನ್ನಡಿಗ ದೇವ್‌ದತ್ ಪಡಿಕ್ಕಲ್ ಅವರನ್ನು ಮಿಚೆಲ್ ಬ್ರಾಸ್‌ವೆಲ್‌ ಪೆವಿಲಿಯನ್ನಿಗಟ್ಟಿದರು. ಇನ್ನು ಧೃವ್ ಜ್ವರೆಲ್ ಕೂಡಾ ಕೇವಲ ಒಂದು ರನ್‌ ಗಳಿಸಿ ಬ್ರಾಸ್‌ವೆಲ್‌ಗೆ ಎರಡನೇ ಬಲಿಯಾದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಶಿಮ್ರೊನ್ ಹೆಟ್ಮೇಯರ್ ಕೇವಲ 19 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 35 ರನ್ ಬಾರಿಸಿದರಾದರೂ ಮತ್ತೊಂದು ತುದಿಯಲ್ಲಿ ಹೆಚ್ಚು ಸಾಥ್ ಸಿಗಲಿಲ್ಲ. ಹೀಗಾಗಿ ಮ್ಯಾಕ್ಸ್‌ವೆಲ್‌ ಬೌಲಿಂಗ್‌ನಲ್ಲಿ ಹೆಟ್ಮೇಯರ್ ಬ್ರಾಸ್‌ವೆಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನುಳಿದಂತೆ ಬಾಲಂಗೋಚಿಗಳಲು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪೆರೇಡ್ ನಡೆಸಿದರು. ಅಂತಿಮವಾಗಿ ರಾಜಸ್ಥಾನ ರಾಯಲ್ಸ್ ತಂಡವು ಕೇವಲ 10.3 ಓವರ್‍‌ಗಳಲ್ಲಿ 59 ರನ್‌ಗಳಿ ಸರ್ವಪತನ ಕಂಡಿತು.

IPL 2023: ಫಾಫ್‌-ಮ್ಯಾಕ್ಸಿ ಫಿಫ್ಟಿ; ರಾಯಲ್ಸ್‌ಗೆ ಕಠಿಣ ಗುರಿ ನೀಡಿದ RCB

ಆರ್‍‌ಸಿಬಿ ಪರ ಮಾರಕ ದಾಳಿ ನಡೆಸಿದ ವೇಯ್ನ್ ಪಾರ್ನೆಲ್‌ 10 ರನ್ ನೀಡಿ 3 ವಿಕೆಟ್ ಪಡೆದರೆ, ಮಿಚೆಲ್ ಬ್ರಾಸ್‌ವೆಲ್, ಕರ್ಣ್ ಶರ್ಮಾ ತಲಾ ಎರಡು ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.