ರಾಜಸ್ಥಾನ ರಾಯಲ್ಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಆರ್‍‌ಸಿಬಿಆಕರ್ಷಕ ಅರ್ಧಶತಕ ಚಚ್ಚಿದ ಫಾಫ್, ಮ್ಯಾಕ್ಸ್‌ವೆಲ್‌ಮತ್ತೆ ಕೈಕೊಟ್ಟ ಮಧ್ಯಮ ಕ್ರಮಾಂಕ

ಜೈಪುರ(ಮೇ.14): ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಬಾರಿಸಿದ ಸಮಯೋಚಿತ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‍‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದ್ದು, ರಾಜಸ್ಥಾನ ರಾಯಲ್ಸ್‌ಗೆ ಗೆಲ್ಲಲು ಸ್ಪರ್ಧಾತ್ಮಕ ಗುರಿ ನೀಡಿದೆ.

ಇಲ್ಲಿನ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್‌ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಎಂದಿನಂತೆ ಆರ್‍‌ಸಿಬಿ ತಂಡಕ್ಕೆ ನಾಯಕ ಫಾಫ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ 7 ಓವರ್‍‌ಗೆ ಈ ಜೋಡಿ 50 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ 19 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ 18 ರನ್ ಬಾರಿಸಿ ಕೆ ಎಂ ಆಸಿಫ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಫಾಫ್-ಮ್ಯಾಕ್ಸ್‌ ಜುಗಲ್ಬಂದಿ: ವಿರಾಟ್ ಕೊಹ್ಲಿ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಗ್ಲೆನ್‌ ಮ್ಯಾಕ್ಸ್‌ವೆಲ್, ನಾಯಕ ಫಾಫ್ ಡು ಪ್ಲೆಸಿಸ್‌ ಜತೆಗೂಡಿ ಎರಡನೇ ವಿಕೆಟ್‌ಗೆ 69 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಫಾಫ್ ಡು ಪ್ಲೆಸಿಸ್‌ 44 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 55 ರನ್ ಬಾರಿಸಿ ಕೆ ಎಂ ಆಸಿಫ್‌ಗೆ ಎರಡನೇ ಬಲಿಯಾದರು. ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಗ್ಲೆನ್‌ ಮ್ಯಾಕ್ಸ್‌ವೆಲ್ ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 54 ರನ್ ಬಾರಿಸಿ ಸಂದೀಪ್‌ ಶರ್ಮಾಗೆ ವಿಕೆಟ್ ಒಪ್ಪಿಸಿದರು.